ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲಾ ಘಟಕ, ಸ್ನೇಹ ಸಿಂಚನ ಟ್ರಸ್ಟ್‌ನಿಂದ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಆದರ್ಶ ಅಮ್ಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಗರಾಜ ವಿ.ಬೈರಿ, ಮಡ್ಡೀಕೆರೆ ಗೋಪಾಲ್, ಕೆ.ರಘುರಾಮ್ ವಾಜಪೇಯಿ, ಪುಷ್ಪಾ ಅಯ್ಯಂಗಾರ್, ರಾಜಶೇಖರ ಕದಂಬ,ಸುಮತಿ ಸುಬ್ರಮಣ್ಯ, ಮ.ನ.ಲತಾಮೋಹನ್ ಇತರರು ಇದ್ದರು. 
ಮೈಸೂರು

ಪಾಲಕರ ಮಹತ್ವ ಮಕ್ಕಳಿಗೆ ತಿಳಿಯಲಿ: ನಾಗರಾಜ ವಿ.ಬೈರಿ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ಈಗ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿದ್ದು, ಪಾಲಕರನ್ನು ವೃದ್ಧಾಶ್ರಮಗಳಿಗೆ ಬಿಡುತ್ತಿದ್ದಾರೆ
  • ಅಮ್ಮಂದಿರ ಮಹತ್ವವನ್ನು ಯುವ ಜನಾಂಗ ಅರಿಯಬೇಕಿದೆ
ಮೈಸೂರು:ಆಧುನಿಕ ದಿನಗಳಲ್ಲಿ ಸಂಸ್ಕೃತಿ, ಸಂಸ್ಕಾರ ಬದಲಾಗುತ್ತಿದ್ದು, ಪಾಲಕರ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಡಬೇಕಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾಧ್ಯಕ್ಷ ನಾಗರಾಜ ವಿ.ಬೈರಿ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಜಿಲ್ಲಾ ಘಟಕ, ಸ್ನೇಹ ಸಿಂಚನ ಟ್ರಸ್ಟ್‌ನಿಂದ ಸರಸ್ವತಿಪುರಂನ ವಿಜಯವಿಠಲ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ ‘ಆದರ್ಶ ಅಮ್ಮ’ ಪ್ರಶಸ್ತಿ ಪ್ರದಾನ, ಕವಿ-ಕಾವ್ಯ-ಗಾಯನದ ಸಮರ್ಪಣಾ ಸಮಾರಂಭದಲ್ಲಿ ಆವರು ಮಾತನಾಡಿದರು.
ಹಿಂದೆ ಅವಿಭಕ್ತ ಕುಟುಂಬಗಳು ಇರುತ್ತಿದ್ದವು, ಎಲ್ಲರೂ ಒಟ್ಟಿಗೆ ಬಾಳುವೆ ನಡೆಸುತ್ತಿದ್ದರು. ಆದರೆ ಈಗ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿದ್ದು, ಪಾಲಕರನ್ನು ವೃದ್ಧಾಶ್ರಮಗಳಿಗೆ ಬಿಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಮ್ಮಂದಿರ ಮಹತ್ವವನ್ನು ಯುವ ಜನಾಂಗ ಅರಿಯಬೇಕಿದೆ ಎಂದು ಹೇಳಿದರು.
ಓಂಕಾರದಿಂದ ಜಗತ್ತಿನ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ. ಆದರೆ ಓಂಕಾರದ ಸೃಷ್ಟಿಯು ಸಹ ಅಮ್ಮನಿಂದ ಆಗಿದೆ. ಅದಕ್ಕಾಗಿಯೇ ಪ್ರಕೃತಿ, ನದಿ ಎಲ್ಲವನ್ನು ಹೆಣ್ಣಿಗೆ ಹೋಲಿಕೆ ಮಾಡಲಾಗುತ್ತಿದೆ ಎಂದರು.
ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿರಲಿಲ್ಲ. ಅಂತಹ ಸನ್ನಿವೇಶದಲ್ಲಿಯೂ ಸಾಕಷ್ಟು ಮಹಿಳೆಯರು ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಿದ್ದಾರೆ. ಅಂತಹ ಸಾಧಕಿಯರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಅಭಿನಂದನಾರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಮಗುವನ್ನು ಒಂಬತ್ತು ತಿಂಗಳು ಹೊತ್ತು ಸಾಕುವ ತಾಯಿಗಿಂತ ದೊಡ್ಡವರಿಲ್ಲ. ತಾಯ ಪ್ರೀತಿ, ತ್ಯಾಗ ಮತ್ತು ಮಮತೆ ಮಾನವನ ಜೀವನದ ಮೂಲ ಆಧಾರವಾಗಿದೆ. ಸಮಾಜದಲ್ಲಿ ತಾಯಿಯ ಸ್ಥಾನ ಅತ್ಯುನ್ನತವಾಗಿದ್ದು, ಪ್ರತಿಯೊಬ್ಬರೂ ತಾಯಿಯ ಸೇವೆ ಮತ್ತು ಗೌರವ ಕಾಪಾಡಬೇಕು ಎಂದು ತಿಳಿಸಿದರು.
ಇದೇ ವೇಳೆ ವಿ.ರುಕ್ಮಿಣಿ, ಡಾ.ಕೆ.ವಿ.ಲಕ್ಷ್ಮೀದೇವಿ, ಅಂಜನ ಪ್ರಕಾಶ್, ಪಾರ್ವತಮ್ಮ ಅವರಿಗೆ ‘ಆದರ್ಶ ಅಮ್ಮ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜ ಸೇವಕರಾದ ಕೆ.ರಘುರಾಮ್ ವಾಜಪೇಯಿ, ಲೇಖಕಿ ಪುಷ್ಪಾ ಅಯ್ಯಂಗಾರ್, ರಂಗನಿರ್ದೇಶಕ ರಾಜಶೇಖರ ಕದಂಬ, ಸತ್ಸಂಗ ಪ್ರಚಾರಕಿ ಸುಮತಿ ಸುಬ್ರಮಣ್ಯ, ಸ್ನೇಹ ಸಿಂಚನ ಟ್ರಸ್ಟ್ ಅಧ್ಯಕ್ಷೆ ಮ.ನ.ಲತಾಮೋಹನ್ ಇತರರು ಇದ್ದರು.