ನಂಜನಗೂಡು ನಗರದ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಕನಕದಾಸರ 538ನೇ ಜಯಂತಿ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಶಾಸಕ ದರ್ಶನ್ ಧ್ರುವ ನಾರಾಯಣ ಉದ್ಘಾಟಿಸಿದರು.
ನಂಜನಗೂಡು: ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀ ಯತೆ ದೂರವಾಗಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ನಗರದ ಶ್ರೀ ನಂಜುಂಡೇಶ್ವರ ಸ್ವಾಮಿ ದಾಸೋಹ ಭವನದ ಆವರಣದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲೂಕು ಕುರುಬ ಸಮುದಾಯದ ಸಂಘ ಹಾಗೂ ಜಿಲ್ಲಾಡಳಿತದ ವತಿಯಿಂದ ದಾಸ ಶ್ರೇಷ್ಠ ಶ್ರೀ ಕನಕದಾಸರ 538ನೇ ಜಯಂತ್ಯುತ್ಸವದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ಮೂರು ವರ್ಷಗಳಿಂದ ನಂಜನಗೂಡಿನಲ್ಲಿ ಕನಕ ಜಯಂತಿಯನ್ನು ಆಚರಣೆ ಮಾಡಿಲ್ಲ. ಈ ವರ್ಷ ಎಲ್ಲರೂ ಒಗ್ಗಟ್ಟಾಗಿ ಕನಕ ಜಯಂತಿಯನ್ನು ಆಚರಣೆ ಮಾಡುತ್ತಿದ್ದಾರೆ. ಇದೇ ರೀತಿ ಪ್ರತಿವರ್ಷ ಒಗ್ಗಟಿನಿಂದ ಆಚರಣೆ ಮಾಡಬೇಕಾಗಿದೆ. ಕನಕದಾಸರು ಕುರುಬ ಸಮುದಾಯದ ಪ್ರಮುಖ ದಾಸ ಶ್ರೇಷ್ಠರಾಗಿದ್ದಾರೆ. ತಳ ಸಮುದಾಯದ ವಿರುದ್ಧ ಅಂದಿನ ಕಾಲದಲ್ಲಿ ಧ್ವನಿ ಎತ್ತಿದರು. ಸಾಕಷ್ಟು ಹಣ ವೆಚ್ಚ ಮಾಡಿ ಜಯಂತಿ ಆಚರಣೆ ಮಾಡಿದರೆ ಮಾತ್ರ ಅದು ಯಶಸ್ವಿಯಾಗುವುದಿಲ್ಲ. ಬದಲಿಗೆ ವರ್ಷಪೂರ್ತಿ ಕನಕದಾಸರ ಬಗ್ಗೆ ತಿಳಿಸುವ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದರು.
ನಾವು ಕನಕದಾಸರು, ಬಸವಣ್ಣ, ಅಂಬೇಡ್ಕರ್ ಆಗಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರ ಸಂವಿಧಾನ ರಕ್ಷಣೆ ಮಾಡುವ ಕೆಲಸವನ್ನು ಎಲ್ಲರೂ ಮಾಡಬೇಕು. ಸಂವಿಧಾನ ರಚನೆಯಾದ ನಂತರ ಎಲ್ಲ ಜಾತಿ, ಜನಾಂಗಗಳಿಗೂ ಸಮಾನವಾದ ಸೌಲಭ್ಯಗಳು ಸಿಗುತ್ತಿವೆ. ಅತ್ಯಂತ ಹಿಂದುಳಿದ ವರ್ಗದಲ್ಲಿ ಕುರುಬ ಸಮುದಾಯ ಮೂರನೇ ಸ್ಥಾನದಲ್ಲಿದೆ. ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ. ಮುಖ್ಯವಾಗಿ ಎಲ್ಲ ಸಮುದಾಯಗಳು ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಬೇಕು. ನಮ್ಮ ತಂದೆ ಎರಡನೇ ಬಾರಿ ಸಾಮಾಜಿಕ ನ್ಯಾಯ ಸಿದ್ಧಾಂತದ ಅಡಿಯಲ್ಲಿ ಮುಖ್ಯಮಂತ್ರಿ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜಾತಿ ಸಮೀಕ್ಷೆ ಮಾಡಲು ಹೊರಟ ಸಂದರ್ಭದಲ್ಲಿ ಪಟ್ಟಭದ್ರಾ ಹಿತಾಶಕ್ತಿಗಳು ವಿರೋಧ ವ್ಯಕ್ತಪಡಿಸಿದ್ದರು. ಈಗಾಗಲೇ ಸಮೀಕ್ಷೆ ಮುಗಿದಿದ್ದು ಫಲಿತಾಂಶ ಕೆಲವೇ ದಿನಗಳಲ್ಲಿ ಹೊರಬರಲಿದೆ ಎಂದರು.
ಶಾಸಕ ದರ್ಶನ್ ಧ್ರುವ ನಾರಾಯಣ ಮಾತನಾಡಿ, ನಗರದಲ್ಲಿ ಬಹಳ ಅರ್ಥಪೂರ್ಣವಾಗಿ ಕನಕ ಜಯಂತಿ ಆಚರಣೆ ನಡೆಯುತ್ತಿದೆ. ವಿಶೇಷವಾಗಿ ಜಯಂತಿಯನ್ನು ಆಚರಣೆ ಮಾಡುವ ನಿಟ್ಟಿನಲ್ಲಿ ಚರ್ಚ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಜಯಂತಿ ಆಚರಣೆ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮಗಳು ಎಲ್ಲ ಜಯಂತಿ ಸಂದರ್ಭದಲ್ಲಿ ನಡೆದುಕೊಂಡು ಬರುತ್ತಿವೆ. ನಾನು ರಾಜಕೀಯ ಪ್ರವೇಶ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯ ಕಾರಣಕರ್ತರಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ. ಐದು ಗ್ಯಾರಂಟಿ ಯೋಜನೆಗಳು ಹಿಂದುಳಿದ ವರ್ಗದವರಿಗೆ ವರದಾನವಾಗಿದೆ. ನನ್ನ ಕ್ಷೇತ್ರದಲ್ಲೂ ದಿನನಿತ್ಯವು ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆದುಕೊಂಡು ಬರುತ್ತಿವೆ ಎಂದರು.
ಮುಖ್ಯ ಭಾಷಣಕಾರ ನಿಖಿತ್ ರಾಜ್ ಮೌರ್ಯ ಮಾತನಾಡಿ, 538 ವರ್ಷಗಳ ಹಿಂದೆ ಹುಟ್ಟಿದ ದಾರ್ಶನಿಕರು ಶ್ರೀ ಕನಕದಾಸರು. ಅವರು ಅಂದು ಹಾಡಿದ ನುಡಿ ಇಂದಿಗೂ ಜೀವಂತವಾಗಿದೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜೂನಿಯರ್ ಕಾಲೇಜು ಮೈದಾನದಲ್ಲಿ ಶ್ರೀ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಶಾಸಕ ದರ್ಶನ್ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಚಾಲನೆ ನೀಡಿದರು. ಮೆರವಣಿಗೆಯು ಆರ್‌ಪಿ ರಸ್ತೆಯ ಮೂಲಕ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿ ಮೆರುಗು ನೀಡಿದವು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕನಕ ಜಯಂತಿ ಸಮಿತಿ ಅಧ್ಯಕ್ಷ ತಾಂಡವಪುರ ಮೋಹನ್, ಮೆರವಣಿಗೆ ಸಮಿತಿ ಅಧ್ಯಕ್ಷ ಸಿದ್ದರಾಜು, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಎಸ್ಸಿ ಬಸವರಾಜು, ಲತಾ ಸಿದ್ದಶೆಟ್ಟಿ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಮಾರುತಿ, ರಾಜ್ಯ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ, ಬಿ.ಎನ್.ರಾಮು, ಸಿದ್ದರಾಜು, ರೈತ ಮುಖಂಡ ಟಿ.ಆರ್.ವಿದ್ಯಾಸಾಗರ್, ಕೆಂಪಣ್ಣ, ಸಿ.ಎಂ.ಶಂಕರ್, ಪ್ರಭಾವತಿ, ಕುರಿಹುಂಡಿ ರಾಜಣ್ಣ, ಬಸವಣ್ಣ, ಜಯಮಾಲಾ ಬೀರೇಗೌಡ, ಕುಳ್ಳಯ್ಯ, ತಹಸೀಲ್ದಾರ್ ಶಿವಕುಮಾರ್ ಕಸನೂರು, ಆಯುಕ್ತ ಬಸವರಾಜು, ಇಒ ಜರಾಲ್ಡ್ ರಾಜೇಶ್ ಇದ್ದರು.