ಉದಯಗಿರಿಯ ಡಿ.ಬನುಮಯ್ಯ ನರ್ಸರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಡಾ.ವಿ.ಬಿ.ಜಯದೇವ, ಮಡ್ಡೀಕೆರೆ ಗೋಪಾಲ್, ಪ್ರೊ.ಮೈಸೂರು ಕೃಷ್ಣಮೂರ್ತಿ, ಅಂಶಿ ಪ್ರಸನ್ನಕುಮಾರ್, ವಿ.ಸಿ.ಕೋಮಲಾ, ಭಾಗ್ಯಲಕ್ಷ್ಮೀ, ರಮೇಶ್ ಕುಮಾರ್ ಇದ್ದರು.
- ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿಕೆ
ಮೈಸೂರು: ಪ್ರತಿಯೊಬ್ಬರೂ ಡಾ.ಬಿ.ಆರ್.ಅಂಬೇಡ್ಕರ್, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರಂತೆ ಓದಿ ಆದರ್ಶ ವ್ಯಕ್ತಗಳಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ವಿದ್ಯಾರ್ಥಿಗಳಿಗೆ ಹೇಳಿದರು.
ನಗರದ ಉದಯಗಿರಿಯ ಡಿ.ಬನುಮಯ್ಯ ನರ್ಸರಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಈ ಮಹನೀಯರು ಸಂಕಷ್ಟದ ಪರಿಸ್ಥಿತಿ ಇದ್ದರೂ ಕಷ್ಟಪಟ್ಟು ಓದಿದರು. ಅಂಬೇಡ್ಕರ್ ಅವರು ವಿಶ್ವಜ್ಞಾನಿ ಎನಿಸಿಕೊಂಡು, ಭಾರತಕ್ಕೆ ಅತ್ಯುತ್ತಮ ಸಂವಿಧಾನ ರಚಿಸಿಕೊಟ್ಟರು. ಅಬ್ದುಲ್ ಕಲಾಂ ಅವರು ವಿಶ್ವಶ್ರೇಷ್ಠ ವಿಜ್ಞಾನಿಯಾದರು. ನಂತರ ರಾಷ್ಟ್ರಪತಿ ಹುದ್ದೆಗೇರಿದರು ಎಂದರು.
ಅಂಬೇಡ್ಕರ್ ಅವರು ಆ ಕಾಲಕ್ಕೆ ಐವತ್ತು ಸಾವಿರ ಪುಸ್ತಕ ಓದಿದ್ದರು. ಹೀಗಾಗಿ ಇದೀಗ ಇಡೀ ವಿಶ್ವದಲ್ಲೇ ವಿಶ್ವಜ್ಞಾನಿ ದಿನವನ್ನು ಅವರ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಉದಯಗಿರಿ ಪ್ರದೇಶ ಒಂದು ರೀತಿಯಲ್ಲಿ ಪುಟ್ಟ ಭಾರತ ಇದ್ದಂತೆ. ಇಲ್ಲಿ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ ಎಂದು ಹೇಳಿದರು.
ಡಿ. ಬನುಮಯ್ಯ ಅವರು ಮೈಸೂರಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿ, ಲಕ್ಷಾಂತರ ಮಕ್ಕಳಿಗೆ ವಿದ್ಯೆ ದೊರೆಯಲು ಕಾರಣಕರ್ತರಾಗಿದ್ದಾರೆ ಎಂದು ಸ್ಮರಿಸಿದರು.
ಡಿ.ಬನುಮಯ್ಯ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ.ವಿ.ಬಿ.ಜಯದೇವ, ಗೌರವ ಕಾರ್ಯದರ್ಶಿ ವಿ.ಸಿ.ಕೋಮಲಾ, ಸಾಹಿತಿ ಪ್ರೊ.ಮೈಸೂರು ಕೃಷ್ಣಮೂರ್ತಿ, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಉತ್ತರ ವಲಯ ಬಿಇಒ ಕಚೇರಿಯ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಭಾಗ್ಯಲಕ್ಷ್ಮೀ, ಆಡಳಿತ ಮಂಡಳಿ ನಿರ್ದೇಶಕ ರಮೇಶ್ ಕುಮಾರ್, ಡಿ.ಬನುಮಯ್ಯ ಪಾಲಿಟೆಕ್ನಿಕ್ ಪ್ರಾಂಶುಪಾಲೆ ಎಲ್.ವೇದಾವತಿ, ಐಟಿಐ ಪ್ರಾಂಶುಪಾಲ ಎಂ.ಎಸ್.ವೆಂಕಟೇಶ್, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸ್ವಾಮಿಗೌಡ, ಮುಖ್ಯ ಶಿಕ್ಷಕಿ ಜಿ.ಬಿ.ವಿಶಾಲಾಕ್ಷಿ ಇನ್ನಿತರರಿದ್ದರು.
ನಂತರ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.