ತಿ.ನರಸೀಪುರ ತಾಲೂಕು ತಲಕಾಡು ವಿನಾಯಕ ನಗರದ ಅಂಬೇಡ್ಕರ್ ಕಾಲನಿಯಲ್ಲಿ ಅಂಬೇಡ್ಕರ್ ಜಯಂತಿ ಹಾಗೂ ಬುದ್ಧ ಪೂರ್ಣಿಮ ದಿನದ ಅಂಗವಾಗಿ ಆಯೋಜಿಸಿದ್ದ ನಮ್ಮ ನಡೆ ಜ್ಞಾನದ ಕಡೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಎಚ್.ಕೆ.ಮಹಾನಂದ, ಪ್ರೊ.ಟಿ.ಎಸ್.ಜಗದೀಶ್ ಕುಮಾರ್, ಡಾ.ಜಗನ್ನಾಥ್, ಜಯಶೀಲ, ಧನಂಜಯ, ಟಿ.ಎಸ್.ಬಸವಣ್ಣ ಸ್ವಾಮಿ ಇದ್ದರು.
ತಿ.ನರಸೀಪುರ: ಯುವ ಜನತೆ ಜ್ಞಾನದ ಕಡೆಗೆ ಚಿಂತನೆ ಮಾಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್, ಭಗವಾನ್ ಬುದ್ಧರ ಜಯಂತ್ಯುತ್ಸವವನ್ನು ಅರಿವಿನ ಹಬ್ಬವಾಗಿ ಆಚರಿಸಬೇಕು ಎಂದು ಬೆಂಗಳೂರು ಸಿಸಿಬಿ ಸಹಾಯಕ ಪೊಲೀಸ್ ಆಯುಕ್ತ ಎಚ್.ಕೆ.ಮಹಾನಂದ ಹೇಳಿದರು.
ತಾಲೂಕಿನ ತಲಕಾಡು ಪಟ್ಟಣದ ವಿನಾಯಕ ನಗರದ ಅಂಬೇಡ್ಕರ್ ಕಾಲನಿಯಲ್ಲಿ ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಬುದ್ಧ ಪೂರ್ಣಿಮೆ ದಿನದ ಅಂಗವಾಗಿ ಆಯೋಜಿಸಿದ್ದ ನಮ್ಮ ನಡೆ ಜ್ಞಾನದ ಕಡೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಮನೆಗೆ ಬಂದಿರುವ ಬುದ್ಧ ಮನಕ್ಕೆ ಬರಬೇಕು. ರಾಜನಾಗಿದ್ದವದು ವೈರಾಗಿಯಾಗಿ ಕಾಡಿಗೆ ಹೋಗಿ ಲೋಕ ಜ್ಞಾನಿ ಆಗಿದ್ದನ್ನು ಅರಿಯಬೇಕು ಎಂದರು.
ಗೌತಮ ಬುದ್ಧರ ಶಾಂತಿ, ಸಮಾನತೆ ಹಾಗೂ ಸೋದರತ್ವವನ್ನೇ ಅಂಬೇಡ್ಕರ್ ಪಾಲಿಸಿಕೊಂಡು ಬಂದರು. ಮನೆಗಳಲ್ಲಿರುವ ಅಂಬೇಡ್ಕರ್ ಮತ್ತು ಸಂವಿಧಾನ ಪೀಠಿಕೆ ಪ್ರತಿಯೊಬ್ಬರ ಮನಕ್ಕೆ ಬರಬೇಕು. ನಾಮಫಲಕ, ಫ್ಲೆಕ್ಸ್, ಬ್ಯಾನರ್‌ಗಳಲ್ಲಿ ರಾರಾಜಿಸುವ ಅಂಬೇಡ್ಕರ್ ಅವರ ವಿಚಾರ ಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೂರು ದಿನಗಳ ಕಾರ್ಯಕ್ರಮದಲ್ಲಿ ಮೊದಲ ದಿನ ಅಂಬೇಡ್ಕರ್ ಅವರ ಕುರಿತ ನುಡಿ ನಮನಗಳ ಫ್ಲೆಕ್ಸ್ ಅನಾವರಣ, ರಂಗೋಲಿ ಸ್ಪರ್ಧೆ ಮತ್ತು ಬುದ್ಧ ವಂದನೆ ಜೊತೆಗೆ ಬುದ್ಧರ ಮೂರ್ತಿ ಮೆರವಣಿಗೆ ಮಾಡಲಾಯಿತು. ಎರಡನೇ ದಿನ ಯುವಕ, ಯುವತಿಯರಿಗೆ ಪ್ರಬಂಧ, ರಸಪ್ರಶ್ನೆ ಸ್ಪರ್ಧೆ, ಸ್ಥಳದಲ್ಲೇ ಆಶುಭಾಷಣ ಸ್ಪರ್ಧೆ, ಸಂವಿಧಾನ ಪೀಠಿಕೆ ಪಠಣ ಸ್ಪರ್ಧೆ ನಡೆದವು.
ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಟಿ.ಎಸ್.ಜಗದೀಶ್ ಕುಮಾರ್, ಬೌದ್ಧ ಉಪಾಸಕ ಡಾ.ಜಗನ್ನಾಥ್, ತಲಕಾಡು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಯಶೀಲ, ಪೊಲೀಸ್ ವೃತ್ತ ನಿರೀಕ್ಷಕ ಧನಂಜಯ, ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿ.ಜಿ.ಸಿದ್ದರಾಜು, ಕರ್ನಾಟಕ ಭೀಮಸೇನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ್, ವಿದ್ಯೋದಯ ಪಿಯು ಕಾಲೇಜು ಪ್ರಾಂಶುಪಾಲ ಟಿ.ಎಸ್.ಬಸವಣ್ಣಸ್ವಾಮಿ, ಚಿಂತಕ ಡಾ.ಕೆ.ಪಿ.ರಮೇಶ್, ಪ್ರಾಧ್ಯಾಪಕ ಪ್ರೊ ಎಂ.ನಂಜುಂಡಯ್ಯ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ವಿಭಾಗಿಯ ಸಂಚಾಲಕ ಯಡದೊರೆ ಮಹದೇವಯ್ಯ, ಗ್ರಾಪಂ ಮಾಜಿ ಸದಸ್ಯ ನಾಗೇಶ್, ಮಹದೇವಮ್ಮ ಭಾಗವಹಿಸಿದ್ದರು.