ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ಹಾಗೂ ಇತಿಹಾಸ ವಿಭಾಗದ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರೂಪಾ, ರಾಜಗೋಪಾಲ್, ವಿ.ಎಂ.ಶಾಕಿರ್, ಡಾ.ಪಿ.ಪದ್ಮಾವತಿ, ದೇವಾನಂದ್ ಇತರರು ಇದ್ದರು.
ಬೆಟ್ಟದಪುರ: ಮಹಿಳೆಯರು ತಮ್ಮ ಹಕ್ಕುಗಳು, ಹಾಗೂ ಕಾನೂನಿನ ಅರಿವು ಹೊಂದುವುದು ಅವಶ್ಯ ಎಂದು ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರೂಪಾ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ಹಾಗೂ ಇತಿಹಾಸ ವಿಭಾಗಗಳ ವತಿಯಿಂದ ಬುಧವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಶಿಕ್ಷಣ, ಆತ್ಮವಿಶ್ವಾಸ ಹಾಗೂ ಸರ್ಕಾರದ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಸ್ವಾವಲಂಬನೆಯಿಂದ ಮುನ್ನಡೆಯಬಹುದು ಎಂದರು.
ಅಲ್ಲದೆ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಕಾಯ್ದೆ 2013, ಮಹಿಳೆಯರ ವಿವಿಧ ಕಾನೂನು ಹಕ್ಕುಗಳು ಹಾಗೂ ಆಂತರಿಕ ದೂರು ಸಮಿತಿಯ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಸಹಾಯಕ ಪ್ರಾಧ್ಯಾಪಕ ರಾಜಗೋಪಾಲ್ ಮಾತನಾಡಿ, ಲಿಖಿತ ದಾಖಲೆಗಳು, ಶಾಸನಗಳು, ನಾಣ್ಯಗಳು, ಪುರಾತತ್ವ ಸಾಕ್ಷ್ಯಗಳು ಹಾಗೂ ಮೌಖಿಕ ಮಾಹಿತಿಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುವ ಮೂಲಕ ಇತಿಹಾಸವನ್ನು ಕಟ್ಟಿಕೊಳ್ಳಲಾಗುತ್ತದೆ. ಇತಿಹಾಸದ ಅಧ್ಯಯನವು ಕೇವಲ ಹಿಂದಿನ ಘಟನೆಗಳ ತಿಳಿವಳಿಕೆಯಲ್ಲ, ವರ್ತಮಾನವನ್ನು ಅರ್ಥಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲ ವಿ.ಎಂ.ಶಾಕಿರ್, ಡಾ.ಪಿ.ಪದ್ಮಾವತಿ, ದೇವಾನಂದ್, ಗ್ರಂಥಪಾಲಕ ಎಚ್.ಪ್ರಶಾಂತ್, ಕಾವ್ಯಾ ಸೇರಿದಂತೆ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.