ಮೈಸೂರು: ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣಕ್ಕಾಗಿ ಭೂಮಿ ವಶಪಡಿಸಿಕೊಂಡ ಅಶ್ವಿನಿ ಲೇಔಟ್ ಬಡಾವಣೆ ಸಂತ್ರಸ್ತರಿಗೆ ಕೆಐಎಡಿಬಿ ಈ ಮೊದಲು ತಾನು ಒಪ್ಪಿಕೊಂಡಂತೆ ಪರಿಹಾರ ನೀಡದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಬಡಾವಣೆಯ ಸಂತ್ರಸ್ತರು ಎಚ್ಚರಿಸಿದರು.
ತಾಲೂಕಿನ ವರುಣ ಹೋಬಳಿ ಮರಸೆ ಗ್ರಾಮದಲ್ಲಿ ಸುಮಾರು 142 ಜನರ ನಿವೇಶನಗಳಿವೆ. ಇವುಗಳನ್ನು ವಿಮಾನ ನಿಲ್ದಾಣ ಅಭಿವೃದ್ಧಿ ಹಾಗೂ ರನ್ ವೇ ವಿಸ್ತರಣೆಗಾಗಿ ಕೆಐಎಡಿಬಿ ಈ ಹಿಂದೆ ವಶಕ್ಕೆ ಪಡೆದಿದೆ. ಈ ವೇಳೆ ಪ್ರತಿ ಚದರ ಅಡಿಗೆ 2500 ರೂ. ನೀಡುವುದಾಗಿ ಸಂಧಾನ ಸಭೆಯಲ್ಲಿ ಒಪ್ಪಿತ್ತು. ಆದರೆ ಇದುವರೆಗೂ ನೀಡಿಲ್ಲ. ಈಗ ಕೇಳಿದಲ್ಲಿ ಆ ನಿವೇಶನ ಇರುವ ಬಡಾವಣೆಯಲ್ಲಿ ರಸ್ತೆ, ಚರಂಡಿ, ಉದ್ಯಾನ ಇಲ್ಲ ಎಂಬ ಸಬೂಬು ಹೇಳುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತ ಸುಂದರ್ ದೂರಿದರು.
ತಮ್ಮ ನಿವೇಶನ ಅಥವಾ ಆಸ್ತಿ ಇರುವ ಪ್ರದೇಶ ಮರಸೆ ಗ್ರಾಮ ಠಾಣಾ ಪಕ್ಕದಲ್ಲಿ ಹಾಗೂ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿದೆ. ಈಗ ಇಲ್ಲಿ ದುಬಾರಿ ಬೆಲೆ ನೀಡಿದರೂ ನಿವೇಶನ ದೊರೆಯುತ್ತಿಲ್ಲ. ಆದ್ದರಿಂದ ಕೂಡಲೇ ಕೆಐಎಡಿಬಿ ಸೂಕ್ತ ಪರಿಹಾರ ನೀಡಬೇಕು, ಈ ಕುರಿತು ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಮೊದಲಾದವರ ಗಮನಕ್ಕೂ ತರಲಾಗಿದೆ. ಕೂಡಲೇ ಪರಿಹಾರ ನೀಡಲು ಮುಂದಾಗದಿದ್ದಲ್ಲಿ ತೀವ್ರ ಕಾನೂನು ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಸಂತ್ರಸ್ತರಾದ ಚಂದ್ರು, ವೆಂಕಟೇಶ್, ರಾಮಮೂರ್ತಿ, ಸುರೇಶ್, ಕೆ.ಎಸ್.ರಮಾಮಣಿ ಇದ್ದರು.