ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಎಡಗೈ ಸಮುದಾಯದವರು ನಗರದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು. ರಾಚಪ್ಪ ಹುಣಸೂರು, ರಾಜಣ್ಣ ಬೀಬಿಕೇರಿ, ತಿಲಕ್‌ನಗರದ ಸ್ವಾಮಿ ಇನ್ನಿತರರಿದ್ದರು.
- ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿ ಎಡಗೈ ಸಮುದಾಯದ ಸಂಘಟನೆಗಳು ಹಾಗೂ ಒಳಮೀಸಲಾತಿ ಹೋರಾಟಗಾರರು ಡಾ.ಬಾಬು ಜಗಜೀವನರಾಮ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಬಂದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಬಾಬೂಜಿ ಪ್ರತಿಮೆ ಬಳಿ ಜಮಾವಣೆಗೊಂಡ ಸಂಘಟನೆಗಳ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಾಬೂಜಿ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಆಗಮಿಸಿದ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಶಾಸಕ ಕೆ.ಹರೀಶ್ ಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ವಿರುದ್ಧ ಕಿಡಿಕಾರಿದರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿರುದ್ಧವೂ ಆಕ್ರೋಶ ಹೊರಹಾಕಿದರು.
ಒಳ ಮೀಸಲಾತಿ ಅನುಷ್ಠಾನಗೊಳಿಸಲು ವಿಳಂಬ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಬಾಬೂಜಿ ಜಯಂತಿ ಆಚರಿಸುವ ಅರ್ಹತೆ ಇಲ್ಲ. ಮೀಸಲು ವಂಚಿತರ ಜೀವನದಲ್ಲಿ ಆಟವಾಡುತ್ತಿರುವ ಸರ್ಕಾರದ ಪ್ರತಿನಿಧಿಯಾಗಿರುವ ಯಾರೊಬ್ಬರೂ ಬಾಬೂಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಬೇಡಿ ಎಂದು ಆಗ್ರಹಿಸಿದರು.
ಏ.9ರೊಳಗೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದೂ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಿಮ್ಮಯ್ಯ ಅವರು, ಒಳ ಮೀಸಲಾತಿ ಅನುಷ್ಠಾನಕ್ಕೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ. ಯಾವ ಸಮುದಾಯಕ್ಕೂ ಅನ್ಯಾಯ ಆಗದಂತೆ ಸರ್ಕಾರ ಅನುಷ್ಠಾನಕ್ಕೆ ತರಲಿದೆ. ಉಪಚುನಾವಣೆ ನಂತರ ಪ್ರಕ್ರಿಯೆ ಚುರುಕುಗೊಳ್ಳಲಿದೆ. ಯಾರದ್ದೋ ಪ್ರಚೋದನೆಗೆ ಒಳಗಾಗಿ ಪ್ರತಿಭಟಿಸುವುದು ಸರಿಯಲ್ಲ ಎಂದು ಹೇಳಿದರು.
ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ ಶಾಸಕ ಕೆ.ಹರೀಶ್‌ಗೌಡ ಅವರು, ‘ಒಳ ಮೀಸಲಾತಿ ಹೋರಾಟವನ್ನು ಕೆಲವರು ಪ್ರಾಮಾಣಿಕವಾಗಿ ಮಾಡುತ್ತಿದ್ದರೆ ಮತ್ತೆ ಕೆಲವರು ರಾಜಕೀಯ ಕಾರಣದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಒಳ ಮೀಸಲಾತಿ ವಿಚಾರದಲ್ಲಿ ಯಾವ ಸಮುದಾಯಕ್ಕೂ ಅನ್ಯಾಯವಾಗದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೋಡಿಕೊಳ್ಳಲಿದ್ದಾರೆ. ಇದರ ಬಗ್ಗೆ ಗೊಂದಲ ಬೇಡ. ಮಾದಿಗ ಸಮುದಾಯಕ್ಕೆ ಅನ್ಯಾಯವಾಗಲು ಮುಖ್ಯಮಂತ್ರಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಳಿಕ ಬಾಬೂಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಿರ್ಗಮಿಸಿದರು.
ಹೋರಾಟಗಾರರಾದ ರಾಚಪ್ಪ ಹುಣಸೂರು, ರಾಜಣ್ಣ ಬೀಬಿಕೇರಿ, ತಿಲಕ್‌ನಗರದ ಸ್ವಾಮಿ, ಆನಂದ ಪಾಲ್ಗೊಂಡಿದ್ದರು.