ಡಾ.ಕೆ.ಅನಂತರಾಮು ಉಪನ್ಯಾಸ ನೀಡಿದರು. 
ಮೈಸೂರು

ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಅವರಿಂದ ‘ವಡ್ಡಾರಾಧನೆ’ ಕುರಿತು ಉಪನ್ಯಾಸ

ಅವಿನಾಶ್ ಜೈನಹಳ್ಳಿ
ಮೈಸೂರು: ಅರಮನೆ ಪದ್ಮರಾಜ ಪಂಡಿತರ ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯ ಹಾಗೂ 1008 ಶ್ರೀ ಪಾರ್ಶ್ವನಾಥ ಪೂಜಾ ಸೇವಾ ಟ್ರಸ್ಟ್ ವತಿಯಿಂದ ವಾರ್ಷಿಕ ಪೂಜಾ ರಜತ ಮಹೋತ್ಸವ ಆಚರಣೆ ಅಂಗವಾಗಿ ಜೆಎಲ್‌ಬಿ ರಸ್ತೆಯ ಜೈನ ಬ್ರಾಹ್ಮಣ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಒಂದು ವರ್ಷ ಕಾಲ ಸರಣಿ ಉಪನ್ಯಾಸ ಕಾರ್ಯಕ್ರಮದ ಪ್ರಯುಕ್ತ ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಅವರು ‘ವಡ್ಡಾರಾಧನೆ’ ವಿಷಯ ಕುರಿತು 11ನೇ ಉಪನ್ಯಾಸ ಮಾಲಿಕೆ ನಡೆಸಿಕೊಟ್ಟರು. ವಡ್ಡಾರಾಧನೆ ಕಥೆಗಳಲ್ಲಿ ಒಂದಾದ ‘ಲಲಿತ ಘಟೆಯ’ ಕಥೆಯ ಬಗ್ಗೆ ತಿಳಿಸಿಕೊಟ್ಟರು. ಐತಿಹಾಸಿಕ ಸಂಗತಿಗಳನ್ನು ಒಳಗೊಂಡಿದ್ದಾಗಿದೆ. ‘ಕೌಶಾಂಬಿಯ ’ ರಾಜನಾದ ’ಹರಿದ್ವಜ’ ರಾಜನ 32 ಗಂಡು ಮಕ್ಕಳು ಹಾಗೂ ಅವನ ಸಂಗಾತಿಗಳು 500 ಜನ ಸೇರಿ ಕಾಡಿಗೆ ಬೇಟೆಗೆ ಹೋದರು. ಆ ಸಂದರ್ಭದಲ್ಲಿ ‘ಅಭಯ ಘೋಷ ಮುನಿಯ’ ದರ್ಶನದಿಂದ, ಅಹಿಂಸಾ ಪರಮೋ ಧರ್ಮದ ತತ್ವವನ್ನು ತಿಳಿದರು. ಜೀವ ಮಾಡುವ ಶುಭ, ಅಶುಭ, ಪರಿಣಾಮಗಳು, ಪಾಪದಿಂದ ವಿಮುಕ್ತನಾದರೆ ಮನುಷ್ಯ ಜನ್ಮ ದೊರೆಯುವ ಕಾರಣಗಳು, ಶ್ರಾವಕ ಧರ್ಮದ ಮಹಿಮೆ, ಹಾಗೂ ಹುಟ್ಟು ಸಾವು ಮೀರಿ ಮೋಕ್ಷಕ್ಕೆ ಕಾರಣವಾದ ಅನಂತ ದರ್ಶನ, ಅನಂತ ಜ್ಞಾನ, ಅನಂತ ಸುಖ, ಅನಂತ ವೀರ್ಯದ, ಪ್ರಾಮುಖ್ಯತೆಯನ್ನು ಕುರಿತು ತಿಳಿಸಿದರು.
ಶಾಮಾನಂದ ಸಾಗರ್, ನಿಲಯದ ಅಧ್ಯಕ್ಷ ಲಕ್ಷ್ಮೀರಮಣ, ಸದಸ್ಯ ನಮಿತೇಜ, ಪಾರ್ಶ್ವನಾಥ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಪಿ.ನಾಭಿರಾಜ್, ಕೆ.ಬಿ.ಎಲ್.ಕುಮಾರ್, ನೂತನ್ ಪಂಡಿತ್, ಕಾರ್ಯಕ್ರಮದ ಪ್ರಾಯೋಜಕರಾದ ಕೆ.ಶಾಮಲಾ ದೇವಿ ಇತರರಿದ್ದರು.
2026 ಮಾರ್ಚ್‌ವರೆಗೆ ಪ್ರತಿ ತಿಂಗಳ ಎರಡನೇ ಭಾನುವಾರ ಸಂಜೆ 4 ರಿಂದ 5.30ರವರೆಗೆ ಸರಣಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.