ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಎನ್.ಆರ್.ಪಂಡಿತ್ ಆರಾಧ್ಯ, ವೂಡೆ ಪಿ.ಕೃಷ್ಣ, ಎಂ.ಎಸ್.ನಟರಾಜ್ ಇದ್ದರು.
- ಸ್ವತಂತ್ರಹಾಗೂ ಸಮರ್ಪಕವಾದ ವಿಷಯ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಬಿಡಬೇಕು
- ತಾಂತ್ರಿಕ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳೂ ಅಗತ್ಯ
ಮೈಸೂರು:ವಿದ್ಯಾರ್ಥಿಗಳು ಸ್ವತಂತ್ರ ಹಾಗೂ ಸಮರ್ಪಕವಾಗಿ ವಿಷಯ ಆಯ್ಕೆ ಮಾಡಿಕೊಳ್ಳಲು ಪಾಲಕರು ಪ್ರೋತ್ಸಾಹಿಸಬೇಕು ಎಂದು ಸುತ್ತೂರು ಮಠದ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥ್ಥೆಯಿಂದ ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಿರುವ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಇಂದು ಸಾಕಷ್ಟು ವಿಜ್ಞಾನ, ತಂತ್ರಜ್ಞಾನ ಬೆಳವಣಿಗೆ ಹೊಂದಿದ್ದು ಕೃತಕ ಬುದ್ಧಿಮತ್ತೆವರೆಗೆ ಬೆಳೆದು ಬಂದಿದೆ. ಹಾಗಾಗಿ ಪಾಲಕರು ಬಲವಂತ ಮಾಡದೆ ಇಂದಿನ ಅಗತ್ಯಕ್ಕೆ ತಕ್ಕಂತೆ ಸ್ವತಂತ್ರಹಾಗೂ ಸಮರ್ಪಕವಾದ ವಿಷಯ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ವಿದ್ಯಾರ್ಥಿಗಳಿಗೆ ಬಿಡಬೇಕು ಎಂದರು.
ಶೇಷಾದ್ರಿಪುರಂ ಶಿಕ್ಷಣ ಟ್ರಸ್ಟ್ ಸಂಸ್ಥಾಪಕರಾದ ಆನಂದಮ್ಮ ಮತ್ತು ಸೀತಮ್ಮ ಅವರ ದೂರದೃಷ್ಟಿತ್ವದಿಂದ ಇಂದು ಸಂಸ್ಥೆ ಬೃಹತ್ ಅಗಿ ಬೆಳೆದಿದೆ. ಇದರಿಂದ ಶಿಕ್ಷಣವು ಬೆಳಕಿನಂತೆ ಹರಡುತ್ತಿದೆ ಎಂದರು.
ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಮಾತನಾಡಿ, ಮೌಲ್ಯಾಧಾರಿತ ಶಿಕ್ಷಣ, ಸೌಹಾರ್ದತೆ ಮತ್ತು ಆರ್ಥಿಕ ಜ್ಞಾನದ ಮಹತ್ವ ಇಂದಿನ ಅಗತ್ಯವಾಗಿದೆ. ಕಡಿಮೆ ವೆಚ್ಚದಲ್ಲಿ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಟ್ರಸ್ಟ್ ಕಾರ್ಯ ಶ್ಲಾಘನೀಯ. ತಾಂತ್ರಿಕ ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳೂ ಅಗತ್ಯ ಎಂದು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕುಲಪತಿ ಡಾ.ವಿದ್ಯಾಶಂಕರ್ ಮಾತನಾಡಿ, ರಾಜ್ಯ ಮತ್ತು ವಿಶ್ವವಿದ್ಯಾಲಯದ ಗುಣಮಟ್ಟದ ತಾಂತ್ರಿಕ ಶಿಕ್ಷಣದ ಅಗತ್ಯವಿದೆ. ಇಂಟರ್ನ್‌ಶಿಪ್‌ಗಳು, ಕೈಗಾರಿಕಾ ಸಹಭಾಗಿತ್ವ ಹಾಗೂ ನವೀನ ಅಧ್ಯಯನ ವಿಧಾನಗಳ ಮಹತ್ವ ಇಂದು ಬೇಕಿದೆ ಎಂದರು.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡಿಸೈನ್ ಥಿಂಕಿಂಗ್ ಹಾಗೂ ಕ್ರಿಟಿಕಲ್ ಥಿಂಕಿಂಗ್ ಅತ್ಯಗತ್ಯವಾಗಿದ್ದು, ಎಐ ಎಲ್ಲ ಶಾಖೆಗಳಲ್ಲೂ ಅನ್ವಯಿಸಬಹುದು. ವಿದ್ಯಾರ್ಥಿಗಳು ವಿಷಯ ಆಯ್ಕೆಯಲ್ಲಿ ಒತ್ತಡಕ್ಕೆ ಒಳಗಾಗಬಾರದು. ಆದರೆ ಎಲೆಕ್ಟ್ರಿಕಲ್, ಮೆಕಾನಿಕಲ್ ಮತ್ತು ಸಿವಿಲ್ ಶಾಖೆಗಳಿಗೂ ಭವಿಷ್ಯ ಇದೆ ಎಂದು ಹೇಳಿದರು.
ಟ್ರಸ್ಟ್‌ನ ಗೌರವ ಕಾರ್ಯದರ್ಶಿ ನಾಡೋಜ ವೂಡೆ ಪಿ.ಕೃಷ್ಣ ಮಾತನಾಡಿ, ಗುಣಮಟ್ಟದ ತಾಂತ್ರಿಕ ಶಿಕ್ಷಣ ಮಹತ್ವ ಪಡೆದುಕೊಂಡಿದ್ದು, ಅದಕ್ಕೆ ಅನುಗುಣವಾಗಿ ನಿಪುಣ ಇಂಜಿನಿಯರ್‌ಗಳನ್ನು ರೂಪಿಸುವಲ್ಲಿ ಟ್ರಸ್ಟ್ ಬದ್ಧತೆ ಹೊಂದಿದೆ. 1944ರಲ್ಲಿ ಸ್ಥಾಪಿತವಾದ ಟ್ರಸ್ಟ್ ಪ್ರಸ್ತುತ ಕರ್ನಾಟಕದಾದ್ಯಂತ 34 ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದು, ಸುಮಾರು 1,500 ಅಧ್ಯಾಪಕರು ಹಾಗೂ 26 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಎನ್.ಆರ್.ಪಂಡಿತ್ ಆರಾಧ್ಯ ಮಾತನಾಡಿ, ವಿದ್ಯಾರ್ಥಿಗಳು ತಂತ್ರಜ್ಞಾನದ ಜತೆಗೆ ಸಂಸ್ಕೃತಿಯನ್ನೂ ಅಳವಡಿಸಿಕೊಳ್ಳಬೇಕು. ಕಲಿಕೆಯನ್ನು ಉತ್ತಮಗೊಳಿಸಲು ಹೊಸ ಬೋಧನಾ ವಿಧಾನಗಳನ್ನು ನಮ್ಮ ಸಂಸ್ಥೆ ಅನುಸರಿಸುತ್ತಿದೆ. ಕಲಿತ ಬಳಿಕ ಸರ್ಕಾರಿ ಉದ್ಯೋಗವನ್ನೇ ನಂಬಿ ಕೂರದೆ ಸ್ವಯಂ ಉದ್ಯೋಗಿಗಳಾಗಿ ಇತರರಿಗೂ ಉದ್ಯೋಗ ನೀಡಿ ಎಂದು ಸಲಹೆ ನೀಡಿದರು.
ಟ್ರಸ್ಟ್‌ನ ಗೌರವ ಸಹ ಕಾರ್ಯದರ್ಶಿ ಎಂ.ಎಸ್.ನಟರಾಜ್ ಇತರರು ಇದ್ದರು.