ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮಕುಮಾರ್ ಅವರಿಗೆ ದೇವರಾಜ ಅರಸು-ಹಾವನೂರು ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ, ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಹರೀಶ್‌ಗೌಡ, ಡಿ.ರವಿಶಂಕರ್, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಡಾ.ಸೋಮಾ ಇಳಂಗೋವನ್ ಇತರರಿದ್ದರು.
- ಬಿಸಿಎಂ ವಿದ್ಯಾರ್ಥಿ ಹಿರಿಯ ವಿದ್ಯಾರ್ಥಿಗಳ ಸಂಘದ ವಾರ್ಷಿಕೋತ್ಸವ
- ಪ್ರೊ.ರವಿವರ್ಮಕುಮಾರ್ ಅವರಿಗೆ ದೇವರಾಜ ಅರಸು-ಹಾವನೂರು ಪ್ರಶಸ್ತಿ ಪ್ರದಾನ ಮಾಡಲಾಯಿತು
- ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಘದ ಪ್ರಥಮ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ದೇವರಾಜ ಅರಸು-ಹಾವನೂರು ಪ್ರಶಸ್ತಿ ಪ್ರದಾನ ಸಮಾರಂಭ
ಮೈಸೂರು: ವಿದ್ಯೆ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತಿರಬೇಕು. ಇಲ್ಲದಿದ್ದರೆ ಸಾಕ್ಷರರಾದರೂ ಪ್ರಯೋಜನವಾಗುವುದಿಲ್ಲ. ಕಂದಾಚಾರ, ಮೂಢನಂಬಿಕೆಗೆ ಮಾರು ಹೋಗದೆ, ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದರು.
ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಘದ ಪ್ರಥಮ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ದೇವರಾಜ ಅರಸು-ಹಾವನೂರು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಪಡೆದು ಇಂದು ಉನ್ನತ ಸ್ಥಾನದಲ್ಲಿರುವವರು ಸಮಾಜದ ಋಣ ತೀರಿಸಬೇಕು. ಸಮಾಜದಿಂದ ಸಹಾಯ ಪಡೆದುಕೊಂಡು ಶಕ್ತಿವಂತರಾಗಿರುವವರು, ಸಮಾಜಕ್ಕೆ ಏನನ್ನಾದರೂ ಕೊಡಬೇಕು. ಆಗ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ನನ್ನ ಮೇಲೂ ಸಮಾಜದ ಋಣ ಇದ್ದು, ಅದನ್ನು ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಗುಲಾಮಗಿರಿಯಿಂದ ಬದುಕಬಾರದು: ಬಸವಾದಿ ಶರಣರು 12ನೇ ಶತಮಾನದಲ್ಲೇ ಮೌಢ್ಯ, ಕಂದಾಚಾರ ತೊರೆಯುವಂತೆ ಕರೆ ಕೊಟ್ಟಿದ್ದರು. ಆದರೆ, ಇಂದಿಗೂ ಅವುಗಳಿಂದ ಹೊರಬರಲು ಸಾಧ್ಯವಾಗಿಲ್ಲ. ನನ್ನ ಕಾರಿನ ಮೇಲೆ ಕಾಗೆ ಕೂತಿದ್ದಕ್ಕೆ ಏನೇನೋ ಹೇಳಿದರು. ಜ್ಯೋತಿಷಿಯೊಬ್ಬರು ಟಿವಿಯಲ್ಲಿ ಕುಳಿತು ನಾನು ಬಜೆಟ್ ಮಂಡಿಸುವುದೇ ಇಲ್ಲ ಎಂದರೆ, ಮತ್ತೊಬ್ಬರು ಬಜೆಟ್ ಮಂಡಿಸಿದ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದರು. ಆದರೆ, ನಾನು ಮೊದಲ ಅವಧಿ ಪೂರ್ವಗೊಳಿಸಿ, 2ನೇ ಅವಧಿಯಲ್ಲೂ ಎರಡೂವರೆ ವರ್ಷ ಪೂರ್ಣಗೊಳಿಸಿದ್ದೇನೆ. ಎಲ್ಲವನ್ನೂ ಮೌಢ್ಯ, ಕಂದಾಚಾರದ ದೃಷ್ಟಿಯಿಂದ ನೋಡುವುದನ್ನು ಬಿಡಬೇಕು. ಗುಲಾಮಗಿರಿಯಿಂದ ಬದುಕಬಾರದು ಎಂದು ಹೇಳಿದರು.
ಕನ್ನಡದ ವಾತಾವರಣ ನಿರ್ಮಾಣದ ಅಗತ್ಯ
ಕರ್ನಾಟಕದಲ್ಲಿ ಕನ್ನಡವನ್ನೇ ಮಾತನಾಡುತ್ತೇನೆ, ಕನ್ನಡದಲ್ಲೇ ವ್ಯವಹರಿಸುತ್ತೇನೆ ಎಂದು ಪ್ರತಿಯೊಬ್ಬರೂ ಶಪಥ ಮಾಡಬೇಕು. ಇಂದು ಬೆಂಗಳೂರಿಗೆ ಹೋದರೆ ಬೇರೆ ರಾಜ್ಯದಲ್ಲಿರುವ ಅನುಭವ ಆಗುತ್ತಿದ್ದು, ಕನ್ನಡದ ವಾತಾವರಣ ನಿರ್ಮಿಸುವ ಅಗತ್ಯ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಪ್ರೊ.ರವಿವರ್ಮ ಕುಮಾರ್ ಅಮಾವಾಸ್ಯೆಯ ರಾಹುಕಾಲದಲ್ಲೇ ಮದುವೆಯಾದವರು. ಆದರೂ ಸಾರ್ಥಕ ದಾಂಪತ್ಯ ಅವರದ್ದು. ನನಗೆ ಅಮಾವಾಸ್ಯೆ ಮೇಲೆ ನಂಬಿಕೆ ಇಲ್ಲದಿದ್ದರೂ ನಮ್ಮ ಮನೆಯವರು ನಂಬುತ್ತಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜಕೀಯ ತೀರ್ಮಾನವಲ್ಲ. ಸಂವಿಧಾನದ ಆಶಯದಂತೆ ಸಮಾನತೆ, ಸಮಾನ ಅವಕಾಶದ ಪೂರಕವಾದ ನಿರ್ಧಾರ ಎಂದರು.
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಜನರ ಬದುಕಿನ ಸ್ಥಿತಿಗತಿಗೆ ಅನುಗುಣವಾಗಿ ಮಾಹಿತಿ ಸಂಗ್ರಹಿಸಬೇಕು. ಸಿಎಂ ಹಿಂದುಳಿದ ವರ್ಗಗಳ ಆಯೋಗಕ್ಕೆ ನೂರಾರು ಕೋಟಿ ರೂ. ಕೊಟ್ಟಿದ್ದಾರೆ. ಹಿಂದುಳಿದವರ ಸಮೀಕ್ಷೆಗೆ ಸವಾಲು, ವಿರೋಧ ಎದುರಿಸಬೇಕಾಯಿತು. ಸಂವಿಧಾನಬದ್ಧ ಅವಕಾಶ ಕೊಡಲು ಎಷ್ಟೊಂದು ವಿರೋಧ ಅವರು ಎದುರಿಸಬೇಕಾಯಿತು. ಆದರೆ ಸಿದ್ದರಾಮಯ್ಯ ಎಂದಿಗೂ ದಕ್ಕುವುದಿಲ್ಲ ಎಂದು ಶ್ಲಾಘಿಸಿದರು.
ಹಿರಿಯ ನ್ಯಾಯವಾದಿ ಪ್ರೊ.ರವಿವರ್ಮ ಕುಮಾರ್ ಮಾತನಾಡಿ, ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ನಿಷ್ಕ್ರಿಯಗೊಳಿಸಿದೆ. ಹೊರ ದೇಶದ ಮಾರ್ವಾಡಿಗಳು ಜಮೀನು ಖರೀದಿಸುತ್ತಿದ್ದಾರೆ. ಸರ್ಕಾರ ಈ ಕಾಯ್ದೆಯನ್ನು ಮರು ಪ್ರತಿಷ್ಠಾಪಿಸಬೇಕು. ಹಾಸ್ಟೆಲ್‌ಗಳಲ್ಲಿ ಓದುವವರು ಕೆಲಸ ಪಡೆದುಕೊಂಡ ಮೇಲೆ ಹಾಸ್ಟೆಲ್‌ಗೆ ತಾವು ಓದಿದ ಖರ್ಚು ನೀಡುವಂತೆ ಮಾಡಬೇಕು. ಮುಸಲ್ಮಾನರನ್ನು 2ಬಿಯಿಂದ ಕೈಬಿಟ್ಟಿದ್ದು, ಮರು ಸೇರ್ಪಡೆ ಮಾಡಬೇಕು. ಗೋ ಹತ್ಯೆ ನಿಷೇಧ ಕಾಯ್ದೆಯಿಂದ ಮುಸಲ್ಮಾನರನ್ನು ಕೊಲ್ಲಲಾಗುತ್ತಿದೆ. ಹೀಗಾಗಿ ಈ ಕಾಯ್ದೆಯನ್ನು ರದ್ದು ಮಾಡಬೇಕು ಎಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದರು.
ದೇವರಾಜ ಅರಸು ಅವರು ಲಿಂಗಾಯತರು ಮತ್ತು ಬ್ರಾಹ್ಮಣರಿಗೂ ಮೀಸಲಾತಿ ನೀಡಿದ್ದರು. ಕುಷ್ಠರೋಗ ನಿರ್ಮೂಲನಾ ಕೇಂದ್ರ ತೆರೆಯಲು ಪಾದ್ರಿಯೊಬ್ಬರಿಗೆ 165 ಎಕರೆ ನೀಡಿದರು. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಅದನ್ನು ಹಿಂದಕ್ಕೆ ಪಡೆಯಲು ಉದ್ದೇಶಿಸಿದ್ದಾಗಿ ತಿಳಿಸಿದರು.
ಅರಸು-ಹಾವನೂರು ಪ್ರಶಸ್ತಿ ಪ್ರದಾನ
ಇದೇ ವೇಳೆ ಪ್ರೊ.ರವಿವರ್ಮಕುಮಾರ್ ಅವರಿಗೆ ದೇವರಾಜ ಅರಸು-ಹಾವನೂರು ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಹರೀಶ್‌ಗೌಡ, ಡಿ.ರವಿಶಂಕರ್, ಎಂಎಲ್‌ಸಿಗಳಾದ ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಡಾ.ಸೋಮಾ ಇಳಂಗೋವನ್, ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಮಂಡ್ಯ ಜಿಲ್ಲಾಧಿಕಾರಿ ಕುಮಾರ್, ಸಂಘದ ಗೌರವಾಧ್ಯಕ್ಷ ರಾಮಯ್ಯ, ಅಧ್ಯಕ್ಷ ಶಿವಸ್ವಾಮಿ, ಕಾರ್ಯದರ್ಶಿ ಬಿ.ಪಿ.ರಾಜೇಶ್, ಉಪಾಧ್ಯಕ್ಷ ಆರ್.ಮಹದೇವು ಇತರರಿದ್ದರು.
ಹೈ ಕಮಾಂಡ್ ತೀರ್ಮಾನಿಸುತ್ತದೆ
ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಅಸಮಾನತೆ ವಿರುದ್ಧ ಮಾತನಾಡುವಾಗ ಸಭಿಕರು ಎದ್ದು ನಿಂತು ‘ಸಮ ಸಮಾಜ ನಿರ್ಮಾಣವಾಗಬೇಕಾದರೆ ಐದು ವರ್ಷಗಳ ಕಾಲ ನೀವೇ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು’ ಎಂದು ಹೇಳಿದರು.
ತಕ್ಷಣ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಏಯ್ ಇದು ಕಾಂಗ್ರೆಸ್ ಸಮಾವೇಶ ಅಲ್ಲ ಕೂತ್ಕಳಪ್ಪ. ನಾನು 16 ಚುನಾವಣೆಯಲ್ಲಿ ಸ್ಪರ್ಧಿಸಿ 9 ಬಾರಿ ಗೆದ್ದು, 4 ಬಾರಿ ಸೋತಿದ್ದೇನೆ. ಜನರ ಆಶೀರ್ವಾದ ಇದ್ದರೆ ಮಾತ್ರ ಅಧಿಕಾರದಲ್ಲಿರಲು ಸಾಧ್ಯ. ಅದಕ್ಕೆ ಅವಕಾಶ ಸಿಗಬೇಕು. ಮುಖ್ಯಮಂತ್ರಿಯಾಗಿ ಮುಂದುವರಿಯುವುದನ್ನು ಕಾಂಗ್ರೆಸ್ ಹೈ ಕಮಾಂಡ್ ತೀರ್ಮಾನಿಸುತ್ತದೆ ಎಂದರು.