ಹುಣಸೂರಿನಲ್ಲಿ ನಡೆದ ನ್ಯೂ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವವನ್ನು ಶಾಸಕ ಹರೀಶ್‌ಗೌಡ ಉದ್ಘಾಟಿಸಿದರು. ಸಂಸ್ಥಾಪಕ ಸಿದ್ದರಾಮಯ್ಯ, ಅಂಶಿಪ್ರಸನ್ನಕುಮಾರ್, ನಾರಾಯಣ್ ಮತ್ತಿತರ ಇದ್ದರು. 
ಮೈಸೂರು

ಗ್ರಾಮೀಣ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಅನಿವಾರ್ಯ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯ
  • ಶಾಲಾ ವಾರ್ಷಿಕೋತ್ಸವ ಸಮಾರಂಭ
ಹುಣಸೂರು: ವಿದ್ಯಾರ್ಥಿಗಳಲ್ಲಿ ಓದಿನೊಂದಿಗೆ ಭಾಷೆಯ ಮೇಲೆ ಹಿಡಿತ ಹಾಗೂ ಕೌಶಲ ಹೊಂದಿದ್ದಲ್ಲಿ ಸಾಧನೆಗೆ ಪ್ರೇರಣೆಯಾಗಲಿದೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ನಗರದ ಮುನೇಶ್ವರಕಾವಲ್ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ನ್ಯೂ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್‌ನ 16ನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಾತೃಭಾಷೆಯೊಂದಿಗೆ ಇಂಗ್ಲಿಷ್ ಭಾಷೆಯನ್ನು ಪ್ರಾಮುಖ್ಯವಾಗಿಸಿಕೊಂಡಲ್ಲಿ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ. ಪ್ರಸ್ತುತ ಸ್ಪರ್ಧಾತ್ಮಕ ಯುಗವಾಗಿದ್ದು, ನಗರ ಪ್ರದೇಶದ ಮಕ್ಕಳಿಗೆ ಸ್ಪರ್ಧೆಯೊಡ್ಡಲು ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆ ಅನಿವಾರ್ಯವಾಗಿದ್ದು ಆಸಕ್ತಿಯಿಂದ ಕಲಿಯಬೇಕೆಂದು ಆಶಿಸಿದರು.
ಕೇಂಬ್ರಿಡ್ಜ್ ವಿದ್ಯಾಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಡಿಪ್ಲೊಮಾ ಹಾಗೂ ಇಂಜಿನಿಯರಿಂಗ್ ಸೇರಿದಂತೆ ಉದ್ಯೋಗಾಧಾರಿತ ಶಿಕ್ಷಣ ಕೇಂದ್ರ ಆರಂಭಿಸುವಂತೆ ಮನವಿ ಮಾಡಿ, ಶೈಕ್ಷಣಿಕ ಪ್ರಗತಿಗಾಗಿ ಸದಾ ಪ್ರೋತ್ಸಾಹ ನೀಡುವೆ ಎಂದರು.
ಹಿರಿಯ ಪತ್ರಕರ್ತ ಅಂಶಿಪ್ರಸನ್ನಕುಮಾರ್ ಮಾತನಾಡಿ, ಪ್ರತಿಯೊಬ್ಬರಿಗೂ ಶಿಕ್ಷಣ ಮತ್ತು ಆರೋಗ್ಯ ಅತೀ ಮುಖ್ಯ, ಶಿಕ್ಷಣದಿಂದಲೇ ಎಲ್ಲವೂ ಎಂಬುದನ್ನರಿತು ಪ್ರತಿಯೊಬ್ಬರೂ ಶಿಕ್ಷಣಕ್ಕೆ ಮಹತ್ವ ನೀಡಬೇಕು. ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ ನೀಡಿ. ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಕ್ರೀಡೆ, ಎನ್‌ಎಸ್‌ಎಸ್‌ನಂತಹ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಗುಣಾತ್ಮಕ ಶಿಕ್ಷಣದ ಜತೆಗೆ ಇಂಗ್ಲಿಷ್‌ಗೂ ಆದ್ಯತೆ ನೀಡಬೇಕೆಂದರು.
ಸಂಸ್ಥೆಯ ಸಂಸ್ಥಾಪಕ ಸಿದ್ದರಾಮಯ್ಯ ಮಾತನಾಡಿ, ವಿದ್ಯೆ ಎಂಬುದು ಅದ್ಭುತ ಚಿನ್ನದ ಗಣಿ ಇದ್ದಂತೆ, ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ದೇಶದ ಆಸ್ತಿಯಾಗಿಸಿ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಪಾಲಕರು ಮತ್ತು ಮಕ್ಕಳ ಕನಸನ್ನು ನನಸಾಗಿಸಲು ಶ್ರಮಿಸುತ್ತಿದೆ. ಇಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿರುವುದು ಹೆಮ್ಮೆ ಎಂದು ಹೇಳಿ, ಕ್ಷೇತ್ರದ ಶಾಸಕ ಜಿ.ಡಿ.ಹರೀಶ್‌ಗೌಡ ಒಬ್ಬ ಕ್ರಿಯಾಶೀಲ, ಭವಿಷ್ಯದ ನಾಯಕರೆಂದು ಬಣ್ಣಿಸಿದರು.
ಸಂಸ್ಥೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಧರ್ಮಾಪುರ ನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಮೆಡಿಕಲ್ ವಿದ್ಯಾರ್ಥಿನಿ ಮಜನಿ, ವಿಜ್ಞಾನಿ ಸ್ವಾತಿ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಪಾಲಕರು ಸಹ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಿಂದೆದ್ದರು.
ಸಂಸ್ಥೆಯ ಅಧ್ಯಕ್ಷೆ ಪ್ರಿಯಾಂಕಾ ಎಸ್.ರಾಮ್, ಆಡಳಿತಾಧಿಕಾರಿ ಭರತ್, ನಿವೃತ್ತ ಪೊಲೀಸ್ ಅಧಿಕಾರಿ ನಾರಾಯಣ್, ಮಹಾರಾಣಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಭಾಸ್ಕರ್, ಉದ್ಯಮಿ ಕಾಯಿಶೇಖರ್, ಪ್ರಾಂಶುಪಾಲರಾದ ರಾಣಿ ಇತರರಿದ್ದರು.