ಕೊಪ್ಪ ಭಾರತ ಮಾತಾ ವಿದ್ಯಾ ಸಂಸ್ಥೆಯ 50ನೇ ವಾರ್ಷಿಕೋತ್ಸವವನ್ನು ನಿತಿನ್ ಕೆ.ವೆಂಕಟೇಶ್ ಉದ್ಘಾಟಿಸಿದರು. ಆಗಸ್ಟಿನ್, ಸಿಟಿಕರ್ ಪೌಲ್, ರಾಯ್, ಗೀತಾ ಇತರರು ಇದ್ದರು. 
ಮೈಸೂರು

ಶಿಕ್ಷಣದ ಜತೆಗೆ ಸಂಸ್ಕಾರ ಕಲಿಯಿರಿ

ನಾಗೇಶ ಎಸ್
ಬೈಲುಕುಪ್ಪೆ: ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಣದ ಜತೆಗೆ ಸಂಸ್ಕಾರ ಕಲಿತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಮತ್ತು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ಕೆ.ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಭಾರತ ಮಾತಾ ವಿದ್ಯಾ ಸಂಸ್ಥೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಸಂಸ್ಥೆಯ 50ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಶಿಕ್ಷಕರು ಪಾಠ ಪ್ರವಚನದ ಜತೆಗೆ ರಾಜರು. ಹೋರಾಟಗಾರರ ಕಥೆಗಳನ್ನು ಹೇಳುತ್ತಾ ಕಥೆಗಳಿಂದ ಪ್ರಭಾವಿತರಾಗುವಂತೆ ಬೆಳೆಸಬೇಕು. ಬದುಕಿನಲ್ಲಿ ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು. ಮಕ್ಕಳಲ್ಲಿರುವ ವಿವಿಧ ಪ್ರತಿಭೆಗಳನ್ನು ಹೊರ ತರಲು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಆಗಸ್ಟಿನ್ ಮಾತನಾಡಿ, ಈ ಭಾಗದಲ್ಲಿ ನಮ್ಮ ಸಂಸ್ಥೆಯು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಕೆಲಸ ನಡೆಯುತ್ತಿದೆ. ಸಂಪನ್ಮೂಲಗಳನ್ನು ಕ್ರೂಢೀಕರಿಸಿ ಸಂಸ್ಥೆಯನ್ನು ಸ್ಥಾಪಿಸಿದ್ದು, ಯಶಸ್ವಿಯೊಂದಿಗೆ ವರ್ಷದಿಂದ ವರ್ಷಕ್ಕೆ ಸಾಧನೆಯ ಪಥದಲ್ಲಿ ಸಾಗುತ್ತಿದೆ. ಸಂಸ್ಥೆ ಯಶಸ್ಸಿಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಮನವಿ ಮಾಡಿದರು.
ಬೆಂಗಳೂರಿನ ಲೋಕಾಯುಕ್ತ ಬಿ.ಆರ್.ಪ್ರದೀಪ್ ಮಾತನಾಡಿ, ಇದೇ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿ ಜೀವನ ಅಳವಡಿಸಿಕೊಂಡು ಇಲಾಖೆಗೆ ಸೇರಿದೆ. ಇತ್ತೀಚಿನ ದಿನಗಳಲ್ಲಿ ಕಠಿಣವಾದಂತಹ ಕಾನೂನುಗಳು ಹೊರ ಬರುತ್ತಿದ್ದು, ಪಾಲಕರು ಮಕ್ಕಳ ಬಗ್ಗೆ ತುಂಬ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಕ್ಕಳ ಮನೋರಂಜನ ಕಾರ್ಯಕ್ರಮ ನಡೆಯಿತು. ಬೈಲುಕುಪ್ಪೆ ವೃತ್ತ ನಿರೀಕ್ಷಕ ಎಂ.ಕೆ.ದೀಪಕ್, ಪಿಎಸ್‌ಐ ರವಿಕುಮಾರ್, ಬೈಲುಕುಪ್ಪೆ ಟಿಬೇಟಿಯನ್ ಕರ್ಮ ರೆಂಪೋಜಿ, ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ, ಸದಸ್ಯರಾದ ಸೈಯದ್ ರಿಯಾಜ್, ಸಂಸ್ಥೆಯ ವ್ಯವಸ್ಥಾಪಕ ರಾಯ್, ಸಿಟಿಕರ್ ಪೌಲ್, ಅಮರ್ಜಿತ್, ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ, ಸಿಆರ್‌ಪಿ ಮೂಬಿನಾ, ಶಿಕ್ಷಕ ಸೋಮಶೇಖರ್ ಇದ್ದರು.