ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಓರಿಯೆಂಟೇಷನ್;
- ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಓರಿಯೆಂಟೇಷನ್; ‘ವಿಶ್ವಮಾನವರಾಗಿ ರೂಪುಗೊಳ್ಳಿ’—ಹೇಮಂತ್ ಕುಮಾರ್
ಮೈಸೂರು: ವಿದ್ಯಾರ್ಥಿಗಳು ಜ್ಞಾನ, ಮೌಲ್ಯ ಹಾಗೂ ಮಾನವೀಯತೆಯನ್ನು ಮೈಗೂಡಿಸಿಕೊಂಡು ವಿಶ್ವಮಾನವರಾಗಿ ರೂಪುಗೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಹಾಗೂ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ಉಪಾಧ್ಯಕ್ಷ ಡಾ. ಹೇಮಂತ್ ಕುಮಾರ್ ಕರೆ ನೀಡಿದರು.
ತಾಂಡವಪುರದ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶನಿವಾರ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಆರಂಭ’ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯನ್ನು ಉಲ್ಲೇಖಿಸಿದ ಅವರು, ಇಂಜಿನಿಯರಿಂಗ್ ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಉದ್ದೇಶಕ್ಕೆ ಸೀಮಿತವಾಗದೆ, ಉತ್ತಮ ವ್ಯಕ್ತಿತ್ವ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವಂತಿರಬೇಕು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸಮಾಜದ ಒಳಿತಿಗೆ ಬಳಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿ ಒಡೆಯರಹಳ್ಳಿ ಸುವರ್ಣಮುಖಿ ಸಂಸ್ಕೃತಿ ಧಾಮದ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ನಾಗರಾಜು ಮಾತನಾಡಿ, ಗುರಿ ಸಾಧಿಸುವವರೆಗೆ ನಿರಂತರ ಪ್ರಯತ್ನ ನಡೆಸಬೇಕು. ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
CII ಮೈಸೂರು ವಲಯದ 2025–26ನೇ ಸಾಲಿನ ಉಪಾಧ್ಯಕ್ಷ ಹಾಗೂ Bhoruka Fabcons Pvt. Ltd. ನಿರ್ದೇಶಕ ಉತ್ಸವ್ ಅಗರ್ವಾಲ್ ಮಾತನಾಡಿ, ಕೈಗಾರಿಕಾ ಕ್ಷೇತ್ರದ ಬೆಳವಣಿಗೆ, ಉತ್ಪಾದನಾ ವಲಯದಲ್ಲಿನ ಅವಕಾಶಗಳು ಹಾಗೂ ವಿದ್ಯಾರ್ಥಿಗಳಿಗೆ ಲಭ್ಯವಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.
10ನೇ ವರ್ಷದ ಲೋಗೋ ಅನಾವರಣ
ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲ ಡಾ. ವೈ.ಟಿ. ಕೃಷ್ಣೇಗೌಡ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಸ್ಥಾಪನೆ, ಬೆಳವಣಿಗೆ ಹಾಗೂ ಗುಣಮಟ್ಟದ ಶಿಕ್ಷಣದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಮಹಾವಿದ್ಯಾಲಯದ 10ನೇ ವರ್ಷದ ಲೋಗೋವನ್ನು ಡಿಜಿಟಲ್ ಮೂಲಕ ಅನಾವರಣಗೊಳಿಸಲಾಯಿತು.
ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಹೆಚ್.ಕೆ. ಚೇತನ್ ಆಡಳಿತ ಮಂಡಳಿ ಪರವಾಗಿ ಸ್ವಾಗತಿಸಿದರು. ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.
ವಿದ್ಯಾರ್ಥಿನಿ ಅಮೂಲ್ಯ ಪ್ರಾರ್ಥನಾ ಗೀತೆ ಹಾಡಿದರು. ತೃತೀಯ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ ತೇಜಸ್ವಿನಿ ಹಾಗೂ ತಂಡ ಭರತನಾಟ್ಯ ಪ್ರದರ್ಶಿಸಿದರು.
ಸಾಧಕರಿಗೆ ಪುರಸ್ಕಾರ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರಗಳ ಸಾಧನೆಯನ್ನು ಗುರುತಿಸಿ ಪ್ರಶಸ್ತಿ, ಪುರಸ್ಕಾರಗಳನ್ನು ವಿತರಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಶೇ.100 ಅಂಕ ಗಳಿಸಿ ಪ್ರಥಮ ವರ್ಷದ ಇಂಜಿನಿಯರಿಂಗ್‌ಗೆ ಪ್ರವೇಶ ಪಡೆದ ನಾಲ್ವರು ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು. ಅಲ್ಯೂಮಿನಿ ವಿದ್ಯಾರ್ಥಿಗಳಿಗೂ ಬಹುಮಾನ ನೀಡಿ, ತಮ್ಮ ಅನುಭವ ಹಾಗೂ ಅನಿಸಿಕೆ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಯಿತು.
ಇದೇ ಸಂದರ್ಭದಲ್ಲಿ PALS ಮೂಲಕ IIT ಮದ್ರಾಸ್‌ನಲ್ಲಿ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯಕ್ಕೆ ಲಭಿಸಿದ ‘Best College Award’ ಅನ್ನು IQAC ನಿರ್ದೇಶಕ ಹಾಗೂ PALS ಸಂಯೋಜಕ ಡಾ. ರಂಜಿತ್ ಕೆ.ಎನ್. ಅವರು ಪ್ರಾಂಶುಪಾಲ ಡಾ. ವೈ.ಟಿ. ಕೃಷ್ಣೇಗೌಡ ಅವರಿಗೆ ಹಸ್ತಾಂತರಿಸಿದರು. ಸಂಸ್ಥೆಯ ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿಗಳ ಸಾಧನೆ ಹಾಗೂ ನವೀನ ಚಟುವಟಿಕೆಗಳಿಗೆ ದೊರೆತ ಮಹತ್ವದ ಗೌರವ ಇದಾಗಿದೆ.
ಡಾ. ಡಿ.ಎಸ್. ಗುರು ಮಾತನಾಡಿ, ವಿದ್ಯಾರ್ಥಿಗಳು ಸಂಸ್ಥೆಯನ್ನು ತಮ್ಮದೇ ಸಂಸ್ಥೆ ಎಂಬ ಭಾವನೆಯಿಂದ ಒಪ್ಪಿಕೊಂಡು ಮುನ್ನಡೆದರೆ ಭವಿಷ್ಯ ಮತ್ತಷ್ಟು ಉಜ್ವಲವಾಗಲಿದೆ ಎಂದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ರಂಜಿತ್ ಕೆ.ಎನ್. ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು. ಉಪಪ್ರಾಂಶುಪಾಲ ಶಂಕರ್ ಉಪಾಧ್ಯಾಯ ವಂದಿಸಿದರು.
ಹೊಸ ವಿದ್ಯಾರ್ಥಿಗಳಿಗೆ ಸಂಸ್ಥೆಯ ಶೈಕ್ಷಣಿಕ ವಾತಾವರಣ, ಅವಕಾಶಗಳು, ಮೌಲ್ಯಗಳು ಹಾಗೂ ಭವಿಷ್ಯದ ಗುರಿಗಳ ಪರಿಚಯ ಮಾಡಿಕೊಡುವ ಮೂಲಕ ‘ಆರಂಭ’ ಕಾರ್ಯಕ್ರಮವು ಅವರ ಇಂಜಿನಿಯರಿಂಗ್ ಶಿಕ್ಷಣದ ಪಯಣಕ್ಕೆ ಸ್ಫೂರ್ತಿದಾಯಕ ಚಾಲನೆ ನೀಡಿತು.