ಕೃತಕ ಬುದ್ಧಿಮತ್ತೆ ಆಧಾರಿತ ಎಂಜಿನಿಯರಿಂಗ್ ಪರಿಹಾರಗಳ ಹೊಸ ಅಲೆಗೆ ಚಾಲನೆ
- ಕೃತಕ ಬುದ್ಧಿಮತ್ತೆ ಆಧಾರಿತ ಎಂಜಿನಿಯರಿಂಗ್ ಪರಿಹಾರಗಳ ಹೊಸ ಅಲೆಗೆ ಚಾಲನೆ
ಇಂಜಿನಿಯರಿಂಗ್ ಇಂಟೆಲಿಜೆನ್ಸ್ ಪರಿಹಾರಗಳು ಮತ್ತು ಎಂಜಿನಿಯರಿಂಗ್ ಸಂಶೋಧನೆ ಹಾಗೂ ಅಭಿವೃದ್ಧಿ ಸಲಹಾ ಸೇವೆಗಳಲ್ಲಿ ಜಾಗತಿಕ ಮುಂಚೂಣಿ ಕಂಪನಿಯಾಗಿರುವ ಎಲ್‌ಆ್ಯಂಡ್‌ಟಿ ಟೆಕ್ನಾಲಜಿ ಸರ್ವೀಸಸ್, ಜಾಗತಿಕ ನಾವೀನ್ಯತೆಯ ಸವಾಲು ಆಗಿರುವ ಎಂಜಿನಿಯರಿಂಗ್ ಇಂಟೆಲಿಜೆನ್ಸ್ (ಇಐ) ಓಪನ್‌ಹ್ಯಾಕ್ 2026 ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಇದೇ ಮೊದಲ ಬಾರಿಗೆ ಭಾರತ, ಅಮೆರಿಕ ಮತ್ತು ಯುರೋಪ್‌ನ ಒಂಬತ್ತು ಕೇಂದ್ರಗಳಲ್ಲಿ ಏಕಕಾಲದಲ್ಲಿ ಆಯೋಜಿಸಿದ್ದ ಈ ಹ್ಯಾಕಥಾನ್‌ನಲ್ಲಿ ಬೆಂಗಳೂರು, ಮೈಸೂರು, ಚೆನ್ನೈ, ಹೈದರಾಬಾದ್, ಪುಣೆ, ವಡೋದರಾ, ಮುಂಬೈ, ಡಲ್ಲಾಸ್ ಮತ್ತು ಮ್ಯೂನಿಕ್ ನಗರಗಳ 770ಕ್ಕೂ ಹೆಚ್ಚು ತಂಡಗಳ 4,000 ಎಂಜಿನಿಯರ್‌ಗಳು ಭಾಗವಹಿಸಿದ್ದರು. ಕೃತಕ ಬುದ್ಧಿಮತ್ತೆ ಆಧಾರಿತ ಸಂಕೀರ್ಣ ಸ್ವರೂಪದ ಎಂಜಿನಿಯರಿಂಗ್ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಸಿದರು.
ಕಂಪನಿಯ ಕಾರ್ಯತಂತ್ರದ ಬೆಳವಣಿಗೆಯ ಆದ್ಯತೆಗಳಿಗೆ ಅನುಗುಣವಾಗಿ 500ಕ್ಕೂ ಹೆಚ್ಚು ಸವಾಲುಗಳನ್ನು ರೂಪಿಸಲಾಗಿತ್ತು. ಇವು ತಂತ್ರಾಂಶ-ನಿರ್ಧರಿತ ಸಂಚಾರ, ಕೈಗಾರಿಕಾ ಘಟಕಗಳ ನಿರ್ಮಾಣ ಮತ್ತು ಆಧುನೀಕರಣ, ಇಂಧನ ಮತ್ತು ಯಾಂತ್ರೀಕರಣ, ಮುಂದಿನ ತಲೆಮಾರಿನ ಗಣಕ ವ್ಯವಸ್ಥೆ ಮತ್ತು ಕೃತಕ ಬುದ್ಧಿಮತ್ತೆ ಮೂಲಸೌಕರ್ಯ, ಡಿಜಿಟಲ್ ಉತ್ಪಾದನೆ, ವೈದ್ಯಕೀಯ ತಂತ್ರಜ್ಞಾನ ಹಾಗೂ ತಂತ್ರಾಂಶ ವೇದಿಕೆಗಳು ಮತ್ತು ಕೃತಕ ಬುದ್ಧಿಮತ್ತೆ ಸೇರಿದಂತೆ ಹಲವು ಕ್ಷೇತ್ರಗಳನ್ನು ಒಳಗೊಂಡಿದ್ದವು.
ಹ್ಯಾಕಥಾನ್‌ನಲ್ಲಿ ಭಾಗವಹಿಸಿದ್ದ ತಂಡಗಳು ತಮ್ಮ ಕ್ಷೇತ್ರ ಪರಿಣತಿ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನಗಳನ್ನು ಸಂಯೋಜಿಸಿ ಉಪಯುಕ್ತ ಪರಿಹಾರಗಳನ್ನು ಅಭಿವೃದ್ಧಿಪಡಿಸಿವೆ. ಕೈಗಾರಿಕಾ ಯಾಂತ್ರೀಕರಣ, ಸೈಬರ್ ಸುರಕ್ಷತೆ, ಸ್ವಯಂಚಾಲಿತ ವ್ಯವಸ್ಥೆಗಳು, ಪೂರೈಕೆ ಸರಪಳಿ ಬುದ್ಧಿವಂತಿಕೆ, ಸಂಸ್ಥೆಗಳ ಕಾರ್ಯಕ್ಷಮತೆ ಸುಧಾರಣೆ ಮತ್ತು ಆರೋಗ್ಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಂಸ್ಥೆಗಳು ತಮ್ಮ ಉತ್ಪನ್ನಗಳು,
ಕಾರ್ಯವಿಧಾನಗಳು ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳನ್ನು ಹೊಸ ದೃಷ್ಟಿಕೋನದಿಂದ ಮರುರೂಪಿಸಲು ನೆರವಾಗುವುದು ಈ ಎಲ್ಲ ಪರಿಹಾರಗಳ ಉದ್ದೇಶವಾಗಿದೆ. ಎಲ್‌ಟಿಟಿಎಸ್‌ನ ಹಿರಿಯ ನಾಯಕರು ಮತ್ತು ತಂತ್ರಜ್ಞಾನ ತಜ್ಞರನ್ನು ಒಳಗೊಂಡ ತೀರ್ಪುಗಾರರ ಮಂಡಳಿಯು ಹಲವು ಹಂತಗಳಲ್ಲಿ ಈ ಎಲ್ಲ ಪರಿಹಾರಗಳ ಮೌಲ್ಯಮಾಪನ ನಡೆಸಿದೆ. ನಾವೀನ್ಯತೆ, ತಾಂತ್ರಿಕ ಶ್ರೇಷ್ಠತೆ, ಕಾರ್ಯಸಾಧ್ಯತೆಯ ಸಾಮರ್ಥ್ಯ ಹೆಚ್ಚಳ, ವಾಸ್ತವ ಜಗತ್ತಿನ ಅಗತ್ಯಗಳು ಹಾಗೂ ಸಮಸ್ಯೆಗಳಿಗೆ ಪ್ರಸ್ತುತವಾಗುವ ಹಾಗೂ ಕೃತಕ ಬುದ್ಧಿಮತ್ತೆಯ ಪರಿಣಾಮಕಾರಿ ಬಳಕೆ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಈ ಎಲ್ಲ ಪ್ರಸ್ತಾವನೆಗಳನ್ನು ಪರಿಶೀಲಿಸಲಾಯಿತು.
ವಿಜೇತ ತಂಡಗಳಿಗೆ ₹ 30 ಲಕ್ಷಕ್ಕೂ ಅಧಿಕ ನಗದು ಬಹುಮಾನಗಳನ್ನು ನೀಡಲಾಯಿತು. ಹೆಚ್ಚು ಗಮನ ಸೆಳೆದ ನಾವೀನ್ಯತಾ ಪರಿಹಾರಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಅವಕಾಶ ಕಲ್ಪಿಸಿಕೊಡಲಾಗಿದೆ. ಭರವಸೆ ಮೂಡಿಸಿದ ಹಾಗೂ ಹೆಚ್ಚು ಕಾರ್ಯಸಾಧ್ಯತೆಯ ಪರಿಹಾರಗಳಿಗೆ ಉತ್ತೇಜನ ನೀಡುವ ಎಲ್‌ಟಿಟಿಎಸ್‌ನ ‘ಪ್ರಾಜೆಕ್ಟ್ ಇಕ್ವಿನಾಕ್ಸ್’ (Project Equinox) ವೇದಿಕೆಯ ಮೂಲಕ ಮುಂದಿನ ಹಂತದ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗಿದೆ. ಪೇಟೆಂಟ್ ಪಡೆಯುವ ಸಾಮರ್ಥ್ಯ ಹೊಂದಿರುವ ನಾವೀನ್ಯತೆಯ ಪರಿಹಾರಗಳನ್ನು ವಿಶೇಷ ಮಾನ್ಯತೆಗಾಗಿ ಆಯ್ಕೆ ಮಾಡಲಾಗಿದೆ. ತಮ್ಮ ಹೊಸ ಆಲೋಚನೆಗಳನ್ನು ಮೌಲ್ಯಯುತ ಬೌದ್ಧಿಕ ಆಸ್ತಿಯನ್ನಾಗಿ ಪರಿವರ್ತಿಸಿಕೊಳ್ಳುವುದಕ್ಕೂ ಈ ಹ್ಯಾಕಥಾನ್‌ನಲ್ಲಿ ಭಾಗವಹಿಸಿದವರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಹ್ಯಾಕಥಾನ್‌ನಲ್ಲಿ ಭಾಗವಹಿಸಿದ ಹಾಗೂ ಪ್ರಶಸ್ತಿ – ಬಹುಮಾನ ಪಡೆದ ತಂಡಗಳನ್ನು ಅಭಿನಂದಿಸಿರುವ ಎಲ್‌ಆ್ಯಂಡ್‌ಟಿ ಟೆಕ್ನಾಲಜಿ ಸರ್ವೀಸಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃತ್ಯುಂಜಯ್ ಕುಮಾರ್ ಸಿಂಗ್ ಅವರು, “ಎಂಜಿನಿಯರಿಂಗ್ ಇಂಟೆಲಿಜೆನ್ಸ್ (ಇಐ) ಓಪನ್‌ಹ್ಯಾಕ್ 2026 ಕಾರ್ಯಕ್ರಮವು ಎಂಜಿನಿಯರಿಂಗ್ ಪರಿಣತಿ ಮತ್ತು ಕೃತಕ ಬುದ್ಧಿಮತ್ತೆ ಒಗ್ಗೂಡಿಸಿ ವಾಸ್ತವ ಜಗತ್ತಿನ ಕೈಗಾರಿಕಾ ಸವಾಲುಗಳಿಗೆ ಪರಿಹಾರ ಕಂಡುಹಿಡಿಯುವ ಎಲ್‌ಟಿಟಿಎಸ್‌ನ ‘ಎಂಜಿನಿಯರಿಂಗ್ ಇಂಟೆಲಿಜೆನ್ಸ್’ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಗಮನಾರ್ಹ ಸಂಖ್ಯೆಯ ಎಂಜಿನಿಯರುಗಳ ಭಾಗವಹಿಸುವಿಕೆಯ ಜೊತೆಗೆ , ನಮ್ಮ ಎಂಜಿನಿಯರ್‌ಗಳು ಸಂದರ್ಭದ ಅರಿವು, ಕ್ಷೇತ್ರ ಪರಿಣತಿ ಮತ್ತು ಕೃತಕ ಬುದ್ಧಿಮತ್ತೆಯ ಸಾಮರ್ಥ್ಯ ಬಳಸಿಕೊಂಡು ವ್ಯವಹಾರಿಕವಾಗಿ ಮಹತ್ವ ಹೊಂದಿರುವ ಪರಿಹಾರಗಳನ್ನು ಅಭಿವೃದ್ಧಿಪಡಿಸಿರುವುದು ವಿಶೇಷವಾಗಿದೆ. ಓಪನ್‌ಹ್ಯಾಕ್‌ನಂತಹ ಉಪಕ್ರಮಗಳು ನಮ್ಮ ಪ್ರತಿಭಾವಂತ ಸಿಬ್ಬಂದಿಗೆ ಹೊಸ ಪ್ರಯೋಗಗಳನ್ನು ನಡೆಸಲು, ಪರಸ್ಪರ ಸಹಯೋಗದೊಂದಿಗೆ ಕಾರ್ಯನಿರ್ವಹಿಸಲು ಹಾಗೂ ಎಂಜಿನಿಯರಿಂಗ್‌ನ ಭವಿಷ್ಯವನ್ನು ರೂಪಿಸುವ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಒದಗಿಸುತ್ತವೆ” ಎಂದು ಹೇಳಿದ್ದಾರೆ.