ಶಾರದಾವಿಲಾಸ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಎಂ.ಯೋಗೇಂದ್ರ ಅವರನ್ನು ಗೌರವಿಸಲಾಯಿತು. ಆರ್.ದಿನೇಶ್, ಸಿ.ಕೆ.ಅಶೋಕ್‌ಕುಮಾರ್, ಡಿ.ಶಿವಶಂಕರ್, ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಮನೋಜ್ ಕುಮಾರ್, ಡಾ.ಡಿ.ಸಿ.ಉಮೇಶ್ ಇದ್ದರು.
- ಕ್ರೀಡೆಯಿಂದ ಮನುಷ್ಯನ ಆರೋಗ್ಯ ಮತ್ತು ಮನಸ್ಸು ಚಟುವಟಿಕೆಯಿಂದ ಉಲ್ಲಾಸದಾಯಕ
- ವಿದ್ಯಾರ್ಥಿಗಳು ಓದಿನ ಜತೆಗೆ ಕನಿಷ್ಠ ಒಂದು ಗಂಟೆ ಕ್ರೀಡೆಯಲ್ಲಿ ತೊಡಗಿ
ಮೈಸೂರು: ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನುಷ್ಯನ ಆರೋಗ್ಯ ಮತ್ತು ಮನಸ್ಸು ಉಲ್ಲಾಸದಾಯಕವಾಗಿರುತ್ತದೆ ಎಂದು ರಾಜ್ಯೋತ್ಸವ ಗೌರವ ಪುರಸ್ಕೃತ ಕ್ರೀಡಾಪಟು ಎಂ.ಯೋಗೇಂದ್ರ ಹೇಳಿದರು.
ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಸಮಷ್ಠಿ ವಾರ್ಷಿಕ ಕ್ರೀಡಾಕೂಟ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡಾ ಚಟುವಟಿಕೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು. ಇದರಿಂದ ಮನುಷ್ಯನ ಆರೋಗ್ಯ ಮತ್ತು ಮನಸ್ಸು ಚಟುವಟಿಕೆಯಿಂದ ಉಲ್ಲಾಸದಾಯಕವಾಗುತ್ತದೆ. ಪಠ್ಯಚಟುವಟಿಕೆಗಳ ಜತೆಗೆ ಸಹ ಪಠ್ಯ ಚಟುವಟಿಕೆಗಳಾದ ಕಬಡ್ಡಿ, ಖೋಖೋ, ಥ್ರೋಬಾಲ್, ವಾಲಿಬಾಲ್, ಬಾಲ್ ಬ್ಯಾಡ್ಮಿಂಟನ್, ಕ್ರಿಕೆಟ್ ಇತರ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಓದಿನ ಜತೆಗೆ ಕನಿಷ್ಠ ಒಂದು ಗಂಟೆಗಳ ಕಾಲ ನಿತ್ಯ ಕ್ರೀಡೆಯಲ್ಲಿ ಭಾಗವಹಿಸಬೇಕು. ನಿಮಗೆ ಇಷ್ಟದ ಕ್ರೀಡೆಯಲ್ಲಿ ಪ್ರತಿನಿತ್ಯವೂ ಅಭ್ಯಾಸದಲ್ಲಿ ತೊಡಗಿಸಿಕೊಂಡಾಗ ಆರೋಗ್ಯ ವೃದ್ಧಿಸುವುದರ ಜತೆಗೆ ಹೆಚ್ಚು ಕಾಲ ರೋಗದಿಂದ ದೂರವಿರಬಹುದು ಎಂದು ಅಭಿಪ್ರಾಯಿಸಿದರು.
ಶಾರದಾವಿಲಾಸ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ಆರ್.ದಿನೇಶ್ ಮಾತನಾಡಿ, ವಿದ್ಯಾರ್ಥಿ ಸಮುದಾಯ ಚಂಚಲ ಮನಸ್ಸನ್ನು ಬಿಟ್ಟು ಏಕಾಗ್ರತೆಯಿಂದ ತಮಗೆ ಇಷ್ಟವಾದ ಕ್ಷೇತ್ರಗಳಲ್ಲಿ ಸಾಧನೆ ತೋರುವಲ್ಲಿ ಮುಂದಾಗಬೇಕು. ಗುರಿ ಮುಟ್ಟುವವರೆಗೆ ಸತತ ಅಭ್ಯಾಸ ಮತ್ತು ಶ್ರಮ ಪಡಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸಿ.ಕೆ.ಅಶೋಕ್‌ಕುಮಾರ್ ಮಾತನಾಡಿ, ಕ್ರೀಡೆಯಲ್ಲಿಯೂ ವಿದ್ಯಾರ್ಥಿಗಳು ಪರಿಶ್ರಮಪಟ್ಟಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ. ಸ್ಫರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಇದಕ್ಕೆ ತಕ್ಕ ಅಭ್ಯಾಸವೂ ಅಗತ್ಯ. ನಮ್ಮ ಗ್ರಂಥಾಲಯದಲ್ಲಿ ಸಿಗುವ ಪುಸ್ತಕಗಳನ್ನು ಓದಿ ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕ ಡಿ.ಶಿವಶಂಕರ್, ಉಪನ್ಯಾಸಕ ರಾಜೇಂದ್ರಪ್ರಸಾದ್ ಹೊನ್ನಲಗೆರೆ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಮನೋಜ್ ಕುಮಾರ್ ಇತರರು ಇದ್ದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಗೌರವ ಪುರಸ್ಕೃತ ಕ್ರೀಡಾಪಟು ಎಂ.ಯೋಗೇಂದ್ರ ಅವರನ್ನು ಗೌರವಿಸಲಾಯಿತು.