ಹುಣಸೂರು ನಗರದ ಗುರುಭವನದಲ್ಲಿ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಉಚಿತವಾಗಿ ಕಿವಿಯ ಸಲಕರಣೆಗಳನ್ನು ನೀಡಲಾಯಿತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಗಣೇಶ್ ಕುಮಾರಸ್ವಾಮಿ, ಚಿಗುರು ಶಂಕರ್, ನಾಗರಾಜ ಮಲ್ಲಾಡಿ, ಗೋಲ್ಡನ್ ಟಿ.ಸುರೇಶ್ ಇತರರಿದ್ದರು.
- ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ
ಹುಣಸೂರು: ಮೈಸೂರಿನ ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿ, ಜಿಲ್ಲಾ ಆರೋಗ್ಯಾಧಿಕಾರಿಗಳ ಕಚೇರಿ, ಬಿಜೆಪಿ ತಾಲೂಕು ಘಟಕ ಸಹಯೋಗದಲ್ಲಿ ನಗರದ ಗುರುಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಶಿಬಿರದಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ತಪಾಸಣೆಗೊಳಗಾದರು.
ಶಿಬಿರದಲ್ಲಿ 8 ಹಿರಿಯರಿಗೆ ಕೃತಕ ಕಾಲು ಜೋಡಣೆ ಮಾಡಿಕೊಡುವ ಭರವಸೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ಕಿವಿ, ಗಂಟಲು, ಮೂಗು, ಕಣ್ಣು, ಚರ್ಮರೋಗ ಮುಂತಾದ ಕಾಯಿಲೆಗಳ ಕುರಿತು ತಪಾಸಣೆ ನಡೆಸಲಾಯಿತು.
ಶಿಬಿರವನ್ನು ಉದ್ಘಾಟಿಸಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಗ್ರಾಮೀಣ ಭಾಗದ ಜನರಲ್ಲಿ ಆರೋಗ್ಯ ನಿರ್ವಹಣೆ ಕುರಿತಾದ ಅರಿವು ಹೆಚ್ಚಿದೆ. ಔಷಧೋಪಚಾರಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ವೈಯಕ್ತಿಕ ಮತ್ತು ಪರಿಸರ ಸ್ವಚ್ಛತೆ ಕೊರತೆ ಕಾಡುತ್ತಿದೆ. ಬಿಜೆಪಿಯ ತಾಲೂಕು ಘಟಕ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾಮಾಜಿಕ ಕಾಳಜಿ ಮೆರೆದಿದೆ ಎಂದರು.
ಶಿಬಿರದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕಾಂತರಾಜು, ನಗರಮಂಡಲ ಅಧ್ಯಕ್ಷ ನಾರಾಯಣ್, ಜಿಲಾ ಉಪಾಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಕಾರ್ಯದರ್ಶಿ ನಾಗಣ್ಣಗೌಡ, ನಾಗರಾಜ ಮಲ್ಲಾಡಿ, ಶಿವಕುಮಾರ್, ರಾಮಚಂದ್ರ, ಸತೀಶ್, ಸುರೇಶ್, ಮುದ್ದುರಾಜ್, ಅಶೋಕ್, ರವಿಶಂಕರ್, ಸತೀಶ್ ಕುಮಾರ್, ವಿವೇಕ್, ಹರೀಶ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರಮೀಳಾ, ಕಾರ್ಯದರ್ಶಿ ಗೋಲ್ಡನ್ ಟಿ.ಸುರೇಶ್, ವೈದ್ಯ ವೃಂದ ಇದ್ದರು.
ಕಾರ್ಯಕ್ರಮದ ನಂತರ ರೈತಮುಖಂಡರು ಸಂಸದರನ್ನು ಭೇಟಿಯಾಗಿ ಶ್ರೀರಂಗಪಟ್ಟಣ-ಕುಶಾಲನಗರ ಚತುಷ್ಪಥ ಹೆದ್ದಾರಿಗೆ ಸರ್ವೀಸ್ ರಸ್ತೆ ನಿರ್ಮಿಸದೆ ರೈತರಿಗೆ ಅನನುಕೂಲವಾಗಿದೆ. ತಂಬಾಕಿಗೆ ಉತ್ತಮ ದರ ದೊರಕುತ್ತಿಲ್ಲ. ಈ ಕುರಿತು ತಾವು ಕ್ರಮವಹಿಸಬೇಕೆಂದು ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಸಂಸದ ಯದುವೀರ್, ಚತುಷ್ಪಥ ರಸ್ತೆ ಕೇಂದ್ರ ಸರ್ಕಾರದಿಂದ ಆಗಿದೆ. ಇದಕ್ಕೆ ಸರ್ವೀಸ್‌ರಸ್ತೆ ನಿರ್ಮಿಸಲು ರಾಜ್ಯ ಸರ್ಕಾರ ಅನುದಾನ ನೀಡಿದರೆ ಮಾತ್ರ ಸಾಧ್ಯ ಎಂದರು. ತಂಬಾಕಿಗೆ ಉತ್ತಮ ದರ ನೀಡಬೇಕೆಂದು ಆಗ್ರಹಿಸಿ ತಾವು ಈಗಾಗಲೇ ಕೇಂದ್ರ ವಾಣಿಜ್ಯ ಮಂತ್ರಿ ಮತ್ತು ತಂಬಾಕು ಮಂಡಳಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಕಾದುನೋಡೋಣ ಎಂದರು.