ಯಡಹಳ್ಳಿ ಮುಖ್ಯರಸ್ತೆಯಲ್ಲಿ ಲಿಂಗಾಂಬುದಿ ಕೆಬಿಎಲ್ ಸೆಂಚುರಿ ಮೊದಲ ಹಂತ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಹಸಿರು ಹಬ್ಬದಲ್ಲಿ ಜಿ.ಟಿ.ದೇವೇಗೌಡ ಸಸಿಗೆ ನೀರೆದರು. ಎಚ್.ವಿ.ರಾಜೀವ್, ಸುಬ್ರಹ್ಮಣ್ಯಸ್ವಾಮಿ, ಶ್ರೀಧರ್, ಮಂಜುನಾಥ್, ಗೊವಿಂದಯ್ಯ, ಸಿದ್ದಯ್ಯ, ರಜನಿ, ಶ್ರೀನಿವಾಸ್, ಕುಮಾರ್ ಮತ್ತಿತರರು ಇದ್ದರು.
- ಪರಿಸರ ಉಳಿಸಿಕೊಳ್ಳುವುದು ಹೇಗೆ, ಆರೋಗ್ಯ ಕಾಪಾಡುವ ಆಹಾರ ಯಾವುದು ಎನ್ನುವ ತಿಳಿವಳಿಕೆ, ಕಾಳಜಿ ಪ್ರಜ್ಞೆ ಕಡಿಮೆ ಆಗುತ್ತಿದೆ
- ಪರಿಸರ ಪ್ರಜ್ಞೆ ಇಲ್ಲದೇ ಮನುಷ್ಯನಿಗೆ ಹೊಸ, ಹೊಸ ಕಾಯಿಲೆಗಳು ಬರುತ್ತಿವೆ
ಮೈಸೂರು:ಪರಿಸರ, ಆಹಾರ ಕಾಳಜಿಯ ಪ್ರಜ್ಞೆ ಇಲ್ಲದೆ ಇರುವುದರಿಂದ ಮಾನವರು ಹೆಚ್ಚು ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ವಿಷಾದಿಸಿದರು.
ನಗರದ ಹೊರವಲಯದ ಯಡಹಳ್ಳಿ ಮುಖ್ಯರಸ್ತೆಯಲ್ಲಿರುವ ಲಿಂಗಾಂಬುದಿ ಕೆಬಿಎಲ್ ಸೆಂಚುರಿ ಮೊದಲ ಹಂತದಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಆಯೋಜಿಸಿದ್ದ ‘ಹಸಿರು ಹಬ್ಬ’ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ದಿನದಲ್ಲಿ ಶುದ್ಧ ಗಾಳಿ ಇಲ್ಲದೆ ಪರಿಸರದ ವಾತಾವರಣ ಕೆಡುತ್ತಿದೆ. ಪರಿಸರ ಉಳಿಸಿಕೊಳ್ಳುವುದು ಹೇಗೆ, ಆರೋಗ್ಯ ಕಾಪಾಡುವ ಆಹಾರ ಯಾವುದು ಎನ್ನುವ ತಿಳಿವಳಿಕೆ, ಕಾಳಜಿ ಪ್ರಜ್ಞೆ ಕಡಿಮೆ ಆಗುತ್ತಿದೆ. ಇದರಿಂದ ಮನುಷ್ಯನಿಗೆ ಹೊಸ, ಹೊಸ ಕಾಯಿಲೆಗಳು ಬರುತ್ತಿವೆ ಎಂದು ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಸಾಲುಮರದ ತಿಮ್ಮಕ್ಕ ಅವರನ್ನು ಆಹ್ವಾನಿಸಿ ಒಂದು ಲಕ್ಷ ಸಸಿ ನೆಡುವ ಕಾರ್ಯಕ್ರಮ ಮಾಡಿಸಲಾಗಿತ್ತು. ಕೆಆರ್‌ಎಸ್ ರಸ್ತೆಯ ಪಿ.ಕೆ.ಸ್ಯಾನಿಟೋರಿಯಂ ಆಸ್ಪತ್ರೆ ಆವರಣ ಸೇರಿದಂತೆ ನಗರದ ವಿವಿಧೆಡೆ ಗಿಡಗಳನ್ನು ನೆಡಲಾಗಿತ್ತು. ಆದಿಚುಂಚನಗಿರಿ ಮಠದ ಶ್ರೀಬಾಲಗಂಗಾಧರನಾಥ ಸ್ವಾಮೀಜಿ ರಾಜ್ಯಾದ್ಯಂತ 5 ಕೋಟಿ ಗಿಡಗಳನ್ನು ನೆಡುವಂತೆ ಮಾಡಿದ್ದರು. ಎಚ್.ವಿ.ರಾಜೀವ್ ಅವರು ಪರಿಸರ ಕಾಳಜಿಯಿಂದ ಗಿಡಗಳನ್ನು ಬೆಳೆಸಿ ನಗರದ ಎಲ್ಲ ಭಾಗಗಳಿಗೆ ಉಚಿತವಾಗಿ ಗಿಡಗಳನ್ನು ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಸಾಮಾಜಿಕ ಅರಣ್ಯ ವಿಭಾಗದಿಂದ ಹುಣಸೂರು ಪಟ್ಟಣದಿಂದ ಹನಗೋಡು, ಕುಶಾಲನಗರ, ಹಾಸನ ಮಾರ್ಗದಲ್ಲಿ ಗಿಡಗಳನ್ನು ನೆಟ್ಟಿದ್ದರಿಂದ ಇಂದು ಹೆಮ್ಮರವಾಗಿ ಬೆಳೆದಿದೆ. ಒಂದು ಕಾಲದಲ್ಲಿ ಈ ಮಾರ್ಗದಲ್ಲಿ ಹೋಗುತ್ತಿದ್ದ ಮರಗಳು ಕಾಣಿಸುತ್ತಿರಲಿಲ್ಲ.
ನಮ್ಮ ಜನರಿಗೆ ಪರಿಸರ ಪ್ರಜ್ಞೆ, ಆಹಾರದ ಪ್ರಜ್ಞೆ ಮೂಡಿಸಬೇಕಿದೆ. ಬಡಾವಣೆಗಳಲ್ಲಿ ಯುಜಿಡಿ ಮಾಡಿದ್ದರೂ ಅದನ್ನು ನಿರ್ವಹಣೆ ಮಾಡುತ್ತಿಲ್ಲ. ಕೆಲವು ಕಡೆ ಯುಜಿಡಿ ನೀರು ನದಿಗಳಿಗೆ ಸೇರಿ ಕಲುಷಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರದ ಸುತ್ತಮುತ್ತಲಿನ ಬಡಾವಣೆಗಳನ್ನು ಮೈಸೂರು ಮಹಾನಗರ ಪಾಲಿಕೆಗೆ ಸೇರಿಸಬೇಕೆಂಬ ಪ್ರಸ್ತಾವನೆ ಸಲ್ಲಿಸಿದಾಗ ಐದು ಸಾವಿರ ಕೋಟಿ ರೂ. ಅನುದಾನ ಕೊಟ್ಟರೆ ನಗರ ಪಾಲಿಕೆಗೆ ಸೇರಿಸುತ್ತೇವೆಂದು ಹೇಳಿ ತಿರಸ್ಕಾರ ಮಾಡಿದರು. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಒಂದು ನಗರಸಭೆ, ನಾಲ್ಕು ಪಟ್ಟಣ ಪಂಚಾಯಿತಿಗಳನ್ನಾಗಿ ಮಾಡಿ ಈಗ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದರು.
ಗ್ರೇಟರ್ ಮೈಸೂರು ರಚನೆ ಮಾಡಬಾರದು ಎಂದು ಹೇಳಿ ಕೆಲವು ನಗರಪಾಲಿಕೆ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ಹೋಗಿ ವಿರೋಧ ಮಾಡಿದರು. ಆಮೇಲೆ ಸಿದ್ದರಾಮಯ್ಯ, ಭೈರತಿ ಸುರೇಶ್ ಅವರ ಮೇಲೆ ಒತ್ತಡ ಹೇರಿದ್ದರಿಂದಾಗಿ ಘೋಷಿಸಲಾಯಿತು. ಇದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಹಳೇ ಉಂಡುವಾಡಿ ಯೋಜನೆ ಕಾಮಗಾರಿ ಪೂರ್ಣಗೊಂಡರೆ ನಗರದ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಪೈಪ್‌ಲೈನ್ ಕೆಲಸ ಮಾಡಲಾಗುತ್ತಿದ್ದು, ಈ ಕಾಮಗಾರಿ ಮುಗಿದ ತಕ್ಷಣವೇ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥ ಮಾಡಲು ಅಧಿಕಾರಿಗಳಿಗೆ ಪ್ಲಾೃನ್ ಮಾಡುವಂತೆ ಹೇಳಲಾಗಿದೆ ಎಂದು ಹೇಳಿದರು.
ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಹಿರಿಯ ಪತ್ರಕರ್ತ ಚೀ.ಜ.ರಾಜೀವ್, ಹಸಿರು ಮೈಸೂರು ಸಂಘಟನೆಯ ಸುಬ್ರಹ್ಮಣ್ಯಸ್ವಾಮಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಮುಖಂಡರಾದ ಮಂಜುನಾಥ್, ಗೊವಿಂದಯ್ಯ, ಸಿದ್ದಯ್ಯ, ರಜನಿ, ಶ್ರೀನಿವಾಸ್, ಕುಮಾರ್ ಮತ್ತಿತರರು ಇದ್ದರು.