ಬೆಟ್ಟದಪುರದ ಕುವೆಂಪು ವೃತ್ತದಲ್ಲಿ ಕನ್ನಡ ಸಾಹಿತ್ಯ ಪರಿಷತ್ತುವತಿಯಿಂದ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರ ಜಯಂತಿಯನ್ನು ಆಚರಣೆ ಮಾಡಲಾಯಿತು. ಮಂಜುನಾಥ್, ಗೊರಲ್ಲಿ ಜಗದೀಶ್, ರಾಜಶೇಖರ್, ನವೀನ್ ಕುಮಾರ್, ಕೆಂಪರಾಜು, ಮಹೇಶ್, ವೆಂಕಟೇಶ್ ಇದ್ದರು.
ಬೆಟ್ಟದಪುರ: ರಾಷ್ಟ್ರಕವಿ ಕುವೆಂಪು ಮಾನವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು ಎಂದು ಬೆಟ್ಟದಪುರದ ಶಿಕ್ಷಣ ತಜ್ಞ ಬಿ.ವಿ.ಮಂಜುನಾಥ್ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಕುವೆಂಪು ವೃತ್ತದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಆಯೋಜಿಸಿದ್ದ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುವೆಂಪು ಅವರು ಎಲ್ಲ ಪ್ರಕಾರದ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಈ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ಮನುಜ ಮತ ವಿಶ್ವಪಥ ಎಂದು ಸಾರಿ ಮಾನವ ಸಮಾಜಕ್ಕೆ ಅನೇಕ ಸಂದೇಶ ನೀಡಿದ್ದಾರೆ. ಹಾಗಾಗಿ ಅವರನ್ನು ವಿಶ್ವಮಾನವ ಎಂದು ಹೇಳಲಾಗುತ್ತದೆ ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ನವೀನ್‌ಕುಮಾರ್ ಮಾತನಾಡಿ, ಕುವೆಂಪು ಅವರು ಜಾತಿ, ಮತ, ಪಂಥಕ್ಕೆ ಆದ್ಯತೆ ನೀಡದೆ ಮಾನವೀಯ ಧರ್ಮ ಮೇಲು ಎಂದು ಸಾರಿದ್ದರು. ಇವರ ಸಾಹಿತ್ಯ ಎಲ್ಲ ವರ್ಗದ ವಯೋಮಾನದವರಿಗೆ ಅನ್ವಯವಾಗುವಂತೆ ವಿಶಾಲ ವ್ಯಾಪ್ತಿ ಹಾಗೂ ಹಲವು ಆಯಾಮಗಳನ್ನು ಒಳಗೊಂಡಿದೆ. ಇಂದಿನ ವಿದ್ಯಾರ್ಥಿಗಳು ಕುವೆಂಪು ಅವರು ರಚಿಸಿರುವ ಕೃತಿಗಳನ್ನು ಓದಿ ಅವರನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಗಣ್ಯರು ರಾಷ್ಟ್ರಕವಿ ಕುವೆಂಪು ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಕಸಾಪ ನಿಕಟ ಪೂರ್ವ ಅಧ್ಯಕ್ಷ ಗೊರಳ್ಳಿ ಜಗದೀಶ್, ಪ್ರಧಾನ ಕಾರ್ಯದರ್ಶಿ ಆಲನಹಳ್ಳಿ ಕೆಂಪರಾಜು, ಹೋಬಳಿ ಘಟಕದ ಗೌರವಾಧ್ಯಕ್ಷ ಬಿ.ಜೆ ದೇವರಾಜು, ಸುರಗಹಳ್ಳಿ ವಿದ್ಯಾಶಂಕರ್, ಹೋಬಳಿ ಘಟಕ ಅಧ್ಯಕ್ಷ ಸುರಗಹಳ್ಳಿ ವೆಂಕಟೇಶ್, ಕಾರ್ಯದರ್ಶಿ ಆಲೂರು ಮಹೇಶ್, ಉಪಾಧ್ಯಕ್ಷ ಬೆಕ್ಕರೆ ಮನೋಹರ್, ನಮೋ ಮಲ್ಲೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಧುರೇಶ್, ಪಿಡಿಒ ಮಂಜುನಾಥ್, ಕಾರ್ಯದರ್ಶಿ ಪಾಂಡು ಸೇರಿದಂತೆ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.