ಮಾನಸಗಂಗೋತ್ರಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಕನ್ನಡ ಪುನಶ್ಚೇತನ ಶಿಬಿರವನ್ನು ಬುಧವಾರ ಕುಲಪತಿ ಪ್ರೊ.ಲೋಕನಾಥ್ ಉದ್ಘಾಟಿಸಿದರು. ಪ್ರೊ.ಬಸವರಾಜು ಕಲ್ಗುಡಿ,ಪ್ರೊ.ಎಚ್.ಪಿ.ಜ್ಯೋತಿ, ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರೊ.ಎಸ್.ಡಿ. ಶಶಿಕಲಾ ಇದ್ದರು.
- ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲೋಕನಾಥ್ ಅಭಿಪ್ರಾಯ
ಇತ್ತೀಚಿನ ದಿನಗಳಲ್ಲಿ ವಿದ್ಯಾವಂತರೇ ಹೆಚ್ಚು ಕನ್ನಡವನ್ನು ತಪ್ಪಾಗಿ ಅರ್ಥೈಸಿ ಮಾತನಾಡುತ್ತಿರುವುದು ವಿಷಾದನೀಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಲೋಕನಾಥ್ ಹೇಳಿದರು.
ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಮಾನಸಗಂಗೋತ್ರಿಯ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಪದವಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರಿಗಾಗಿ ಆಯೋಜಿಸಿರುವ 53ನೇ ಕನ್ನಡ ಪುನಶ್ಚೇತನ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಭಾಷೆಯ ಬಗ್ಗೆ ಗಂಭೀರ ಚಿಂತನೆ ಅಗತ್ಯವಾಗಿದೆ. ಕುವೆಂಪು ಅವರು ರಾಮಾಯಣ ದರ್ಶನಂ ಮೂಲಕ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ವಿಶ್ವಕ್ಕೆ ಪರಿಚಯಿಸಿದರೆ, ಎಸ್.ಎಲ್.ಭೈರಪ್ಪ ಅವರು ಕನ್ನಡದ ಮೂಲಕ ಜಗತ್ತಿನ ಓದುಗರನ್ನು ಸೆಳೆದಿದ್ದಾರೆ ಎಂದು ಬಣ್ಣಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದರೂ ಅದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ. ಭಾಷೆ ಬೆಳೆಯುವುದು ಕೇವಲ ಚರ್ಚೆಯಿಂದಲ್ಲ, ಅರ್ಥಪೂರ್ಣ ಸಂವಾದದಿಂದ. ಶೈಕ್ಷಣಿಕ ಚರ್ಚೆಗಳು, ಉಪನ್ಯಾಸಗಳು ಹಾಗೂ ಸಂವಾದಗಳು ನಿರಂತರವಾಗಿ ನಡೆಯಬೇಕು. ಕನ್ನಡ ವಿಭಾಗದಲ್ಲಿ ನಡೆಯುವ ಚಟುವಟಿಕೆಗಳು ಇತರ ವಿಭಾಗಗಳಿಗೂ ವಿಸ್ತರಿಸಬೇಕು ಎಂದರು.
ಕನ್ನಡ ಭಾಷೆಯು ತನ್ನದೇ ಆದ ಶಕ್ತಿ ಮತ್ತು ಸೌಂದರ್ಯವನ್ನು ಹೊಂದಿದ್ದು, ಅದರ ಮೌಲ್ಯವನ್ನು ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ತಿಳಿಸುವ ಜವಾಬ್ದಾರಿ ಕನ್ನಡ ಬೋಧಕರ ಮೇಲಿದೆ. ಮಾನಸಗಂಗೋತ್ರಿಯಲ್ಲಿ ಕುವೆಂಪು ಅವರ ಹೆಜ್ಜೆ ಗುರುತುಗಳು ಉಳಿದಿರುವುದಕ್ಕೆ ಕನ್ನಡ ಭಾಷೆಯ ಶಕ್ತಿಯೇ ಕಾರಣ. ಕನ್ನಡ ಭಾಷೆ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅಪಾರವಾಗಿದೆ. ಬಿಎಂಶ್ರೀ, ದ.ರಾ.ಬೇಂದ್ರೆ, ಕುವೆಂಪು ಸೇರಿದಂತೆ ಅನೇಕ ಮಹನೀಯರು ಮೂಲತಃ ಶಿಕ್ಷಕರೇ ಆಗಿದ್ದರು. ಕನ್ನಡ ಇನ್ನಷ್ಟು ವ್ಯಾಪಕವಾಗಬೇಕಾದರೆ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನ ಬೆಳೆಸಬೇಕು ಎಂದು ಹೇಳಿದರು.
ಪ್ರಾಧ್ಯಾಪಕ ಪ್ರೊ.ಬಸವರಾಜು ಕಲ್ಗುಡಿ ಮಾತನಾಡಿ, ಬುಡಕಟ್ಟು, ಜಾನಪದ ಮತ್ತು ಸ್ಥಳೀಯ ಸಂಸ್ಕೃತಿಗಳ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಆಧುನಿಕತೆಯ ಹೆಸರಿನಲ್ಲಿ ರಾಜಕಾರಣಿಗಳು ಹಾಗೂ ಬಂಡವಾಳಶಾಹಿಗಳು ನಿಸರ್ಗವನ್ನು ಹೇಗೆ ನಾಶ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. 12 ದಿನಗಳ ಶಿಬಿರದ ಸಂಪನ್ಮೂಲಗಳನ್ನು ಶಿಬಿರಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ.ಎಚ್.ಪಿ.ಜ್ಯೋತಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ.ನಂಜಯ್ಯ ಹೊಂಗನೂರು, ಪ್ರಾಧ್ಯಾಪಕರಾದ ಪ್ರೊ.ಎಸ್.ಡಿ.ಶಶಿಕಲಾ, ಡಾ.ಎಲ್.ನಂಜುಂಡಸ್ವಾಮಿ ಇದ್ದರು.