ನೇರಳಕುಪ್ಪೆಯಲ್ಲಿ ವಿವಿಧ ವೇಷ-ಭೂಷಣಗಳನ್ನು ತೊಟ್ಟು ಆದಿವಾಸಿ ಯುವಕರು ಕುಂಡೆ ಹಬ್ಬ ಆಚರಿಸಿದರು. 
ಮೈಸೂರು

ಸಂಭ್ರಮದ ಕುಂಡೆ ಹಬ್ಬ

ಹನಗೋಡು: ಆದಿವಾಸಿಗಳು ಶ್ರೀ ಭದ್ರಕಾಳಿ ಹಾಗೂ ಅಯ್ಯಪ್ಪ ಸ್ವಾಮಿ ದೇವರನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾ ಹಳ್ಳಿಗಳಲ್ಲಿ ಭಿಕ್ಷೆ ಬೇಡುತ್ತಾ ಕುಣಿದು-ಕುಪ್ಪಳಿಸುತ್ತಾ ಕುಂಡೆ ಹಬ್ಬವನ್ನು ಬುಧವಾರ ಸಂಭ್ರಮದಿಂದ ಆಚರಿಸಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿರುವ ಗಿರಿಜನರು ತಮ್ಮ ಆರಾಧ್ಯ ದೇವರಾದ ಶ್ರೀ ಭದ್ರಕಾಳಿ, ಶ್ರೀ ಅಯ್ಯಪ್ಪ ಸ್ವಾಮಿಯ ಹೆಸರಿನಲ್ಲಿ ನಡೆಯುವ ಈ ಹಬ್ಬಕ್ಕೆ ಹನಗೋಡು ಹೋಬಳಿ ವ್ಯಾಪ್ತಿಯಲ್ಲಿರುವ 35ಕ್ಕೂ ಹೆಚ್ಚು ಹಾಡಿಯ ಗಿರಿಜನರು ಕಾಡಿನಲ್ಲಿ ಸಿಗುವ ಸೊಪ್ಪು, ಹಳೇ ಹರಿದ ಬಟ್ಟೆ ಹಾಗೂ ಗೋಣಿ ಚೀಲಗಳಿಂದ ವಿವಿಧ ವೇಷಗಳನ್ನು ತೊಟ್ಟು, ಒಣಗಿದ ಸೋರೆಕಾಯಿ ಬುರುಡೆ, ಪ್ಲಾಸ್ಟಿಕ್ ಡಬ್ಬಿ ಹಾಗೂ ಟಿನ್‌ಗಳನ್ನು ಡೋಲಿನ ರೀತಿಯಲ್ಲಿ ಬಡಿಯುತ್ತಾ ಆಕರ್ಷಕವಾಗಿ ಕುಣಿಯುತ್ತಾ, ಸಿಕ್ಕ-ಸಿಕ್ಕವರನ್ನು ನಿಂದಿಸುತ್ತಾ ಭಿಕ್ಷಾಟನೆ ಮಾಡುತ್ತಾ ಹಣ, ದವಸ-ಧಾನ್ಯಗಳನ್ನು ಸಂಗ್ರಹಿಸಿದರು.
ಈ ಹಬ್ಬವನ್ನು ಮೂಲನಿವಾಸಿ ಗಿರಿಜನ ಜನಾಂಗಕ್ಕೆ ಸೇರಿದ ಜೇನುಕುರುಬ, ಬೆಟ್ಟಕುರುಬ, ಎರವ ಜನಾಂಗಕ್ಕೆ ಸೇರಿದ ಬುಡಕಟ್ಟು ಜನರು ಹೆಚ್ಚಾಗಿ ಆಚರಿಸುತ್ತಾರೆ. ಕುಂಡೆ ಹಬ್ಬದ ಸಂಭ್ರಮದಲ್ಲಿ ಕೊಡಗಿನ ಕಾಡಂಚಿನ ಜನರು ಪಾಲ್ಗೊಳ್ಳುವರು.
ಕಾಡಿನ ದಾರಿಯಲ್ಲೇ ನಡೆದು ಸಂಗ್ರಹಿಸಿದ ಹಣ, ದವಸ-ಧಾನ್ಯಗಳನ್ನು ಕೊಡಗು ಜಿಲ್ಲೆಯ ಗೋಣಿಕೊಪ್ಪ ರಸ್ತೆಯ ತಿತಿಮತಿ ಪಕ್ಕಲ್ಲಿರುವ ದೇವರಪುರದಲ್ಲಿರುವ ಅಯ್ಯಪ್ಪ ಸ್ವಾಮಿ ಹಾಗೂ ಭದ್ರಕಾಳಿ ದೇವಾಲಯಕ್ಕೆ ತಂದು ಅರ್ಪಿಸಿ ದೇವರ ಉತ್ಸವದಲ್ಲಿ ಪಾಲ್ಗೊಂಡು ತಾವು ಮಾಡಿದ ತಪ್ಪಿಗಾಗಿ ದೇವರಲ್ಲಿ ಕ್ಷಮೆಯಾಚಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಹಬ್ಬದ ಹಿನ್ನೆಲೆ:
ಈ ಹಿಂದೆ ಕೊಡಗಿನ ಜಮೀನ್ದಾರರು ಬುಡಕಟ್ಟು ಜನಾಂಗದ ಕೂಲಿ ಕಾರ್ಮಿಕರನ್ನು ವರ್ಷವಿಡೀ ಬೈಯ್ಯುತ್ತಾ ದುಡಿಸಿಕೊಳ್ಳುತ್ತಿದ್ದರು. ಇದನ್ನು ಗಿರಿಜನರು ದೇವರ ಹಬ್ಬದ ನೆಪದಲ್ಲಿ ಒಂದು ದಿನ ಜಮೀನ್ದಾರರಿಗೆ ಬೈದು ಗಿರಿಜನರು ತಮ್ಮ ಆಕ್ರೋಶ ತೋಡಿಕೊಂಡು ದೇವರಲ್ಲಿ ಪೂಜೆ ಸಲ್ಲಿಸಿ ಕ್ಷಮೆ ಕೇಳಿ ಕೋಪ ತಣಿಸಿಕೊಳ್ಳುವುದೇ ಕುಂಡೆ ಹಬ್ಬದ ವಿಶೇಷವಾಗಿದೆ.
ಪ್ರತಿ ವರ್ಷದ ಮೇ ತಿಂಗಳ ಕೊನೆಯ ಬುಧವಾರ ಹಬ್ಬ ಆಚರಣೆ ಮಾಡುತ್ತಾರೆ. ದೇವರಲ್ಲಿ ಹೆಚ್ಚು ಭಯ, ಭಕ್ತಿ ಇರುವ ಈ ಜನಾಂಗ ದೇವರನ್ನು ಭಕ್ತಿಯಿಂದ ಪ್ರಾರ್ಥನೆ ಮಾಡಿ ವೇಷ ಹಾಕುತ್ತಾರೆ (ಕಳಿ ಕಟ್ಟುವುದು). ನಂತರ ಕಾಲ್ನಡಿಗೆಯಲ್ಲೇ ಸುತ್ತಲ ಹಳ್ಳಿಗಳು ಸೇರಿದಂತೆ ನಗರಪ್ರದೇಶಗಳಲ್ಲಿ ಸುತ್ತಾಡಿ ಭಿಕ್ಷೆ ಬೇಡುತ್ತಾರೆ.