ಕುಕ್ಕರಹಳ್ಳಿ ಕೆರೆ ಹಬ್ಬ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಹಕ್ಕಿಗಳ ಫೊಟೋಗಳ ಪ್ರದರ್ಶನವನ್ನು ಕುತೂಹಲದಿಂದ ವೀಕ್ಷಿಸುತ್ತಿರುವ ಸಾರ್ವಜನಿಕರು. 
ಮೈಸೂರು

ಗಮನ ಸೆಳೆದ ಕುಕ್ಕರಹಳ್ಳಿ ಕೆರೆ ಹಬ್ಬ

ಪ್ರಮುಖ ಮುಖ್ಯಾಂಶಗಳು

  • ಪರಿಸರ ಪ್ರೇಮಿಗಳು ಭಾಗಿ
  • ಜೀವವೈವಿಧ್ಯ, ಕೆರೆ ಪರಿಸರ ಕುರಿತು ಮಾಹಿತಿ
 ಮೈಸೂರು: ನಗರದ ನೆಚ್ಚಿನ ನೈಸರ್ಗಿಕ ತಾಣವಾದ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಕುಕ್ಕರಹಳ್ಳಿ ಕೆರೆ ಹಬ್ಬ’ ಗಮನ ಸೆಳೆಯಿತು.
ಮೈಸೂರು ವಾಟರ್ ಫೋರಮ್, ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್, ಮೈಸೂರು ವಿಶ್ವವಿದ್ಯಾಲಯ, ಬೆಂಗಳೂರು ಸಸ್ಟೇಬಲ್ ಫೋರಮ್, ಅರಣ್ಯ ಔಟ್‌ರೀಚ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಆಯೋಜಿಸಲಾಗಿತ್ತು. ನೂರಾರು ಜನರು, ಪರಿಸರ ಪ್ರೇಮಿಗಳು ಪಾಲ್ಗೊಂಡು ಜೀವವೈವಿಧ್ಯ, ಕೆರೆ ಪರಿಸರ ಹಾಗೂ ಪೂರ್ಣಯ್ಯ ನಾಲೆ ಸಂರಕ್ಷಣೆಯ ಮಹತ್ವದ ಬಗ್ಗೆ ಮಾಹಿತಿ ಪಡೆದರು.
ಕೆರೆ ಆವರಣದಲ್ಲಿ ಪಕ್ಷಿ ವೀಕ್ಷಣೆ, ಕೆರೆ ವೀಕ್ಷಣೆ, ಗಿಡ-ಮರಗಳ ವೀಕ್ಷಣೆ, ಪೂರ್ಣಯ್ಯ ನಾಲೆ, ಪಕ್ಷಿಗಳ ಛಾಯಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಕುಕ್ಕರಹಳ್ಳಿ ಕೆರೆಯಲ್ಲಿ ತೆಗೆದ ವಿವಿಧ ಪ್ರಬೇಧದ ಪಕ್ಷಿಗಳ ಛಾಯಾಚಿತ್ರ, ಕೆರೆಗೆ ಮಳೆ ನೀರು ಹರಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಪೂರ್ಣಯ್ಯ ನಾಲೆಗೆ ಸಂಬಂಧಿಸಿದ ಚಿತ್ರ ಹಾಗೂ ವಿವಿಧ ಪತ್ರಿಕೆಗಳಲ್ಲಿ ಬಂದ ವರದಿಗಳ ಪ್ರದರ್ಶನವನ್ನು ವಾಯು ವಿಹಾರಿಗಳು ಸೇರಿದಂತೆ ಪರಿಸರ ಪ್ರೇಮಿಗಳು ಕುತೂಹಲದಿಂದ ವೀಕ್ಷಿಸಿದರು.

ಪಕ್ಷಿಗಳ ವೀಕ್ಷಣೆ :

ಇದೇ ವೇಳೆ 100ಕ್ಕೂ ಹೆಚ್ಚು ಜನರ ಐದು ತಂಡಗಳಾಗಿ ವಿಂಗಡಿಸಿ, ಪಕ್ಷಿ ವೀಕ್ಷಣೆಗೆ ಕರೆದೊಯ್ಯಲಾಯಿತು. ಪಕ್ಷಿ ತಜ್ಞರಾದ ಸಪ್ತಗಿರೀಶ್, ಯೋಗೇಶ್, ಎಸ್.ಎಸ್.ಸುನೀಲ್, ಸಹನಾ, ಸಂಜಯ್ ದತ್ತಾತ್ರೇಯ, ಕಶ್ಯಪ್, ಮರಗಳ ತಜ್ಞ ಶ್ರೀಷಾ ಹಾಗೂ ಇತರರು ಪಕ್ಷಿ ಮತ್ತು ಮರಗಳ ಬಗ್ಗೆ ಮಾಹಿತಿ ನೀಡಿದರು. ಪಕ್ಷಿ ವೀಕ್ಷಣೆ ವೇಳೆ 40ಕ್ಕೂ ಹೆಚ್ಚು ವಿವಿಧ  ಪ್ರಬೇಧದಗಳನ್ನು ವೀಕ್ಷಿಸಿದರು. 
 ಛಾಯಾಚಿತ್ರ ಪ್ರದರ್ಶನದ ಕುರಿತು ಶೈಲಜೇಶ್ ಮಾಹಿತಿ ನೀಡಿದರು. ಕಾರ್ಯಕ್ರಮದ ಅಂಗವಾಗಿ ಪಕ್ಷಿ ವೀಕ್ಷಣೆಗೆ ಬೈನಾಕ್ಯುಲರ್ ಇಡಲಾಗಿತ್ತು. 
ಹಲವು ಜನರು ಬೈನಾಕುಲರ್‌ನಿಂದ ಪಕ್ಷಿ ವೀಕ್ಷಿಸಿದರು. ಕೆರೆ ಮತ್ತು ಪೂರ್ಣಯ್ಯ ನಾಲೆ ಸಂರಕ್ಷಣೆಗೆ ಒತ್ತಾಯಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.  
ಜಲತಜ್ಞ ಪ್ರೊ.ಯು.ಎನ್.ರವಿಕುಮಾರ್ ಮಾತನಾಡಿ, ಮೈಸೂರಿನ ಹೃದಯಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆ ನೈಸರ್ಗಿಕ ಪರಿಸರ ಹೊಂದಿದ್ದು, ತಾಪಮಾನ ನಿಯಂತ್ರಣಕ್ಕೆ ಪ್ರಮುಖ ಪಾತ್ರ ವಹಿಸಲಿದೆ. ಈ ಹಿಂದೆ ಅತ್ಯುತ್ತಮವಾಗಿದ್ದ ಈ ಕೆರೆಗೆ ವಲಸೆ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು. ಅಲ್ಲದೆ ಪೂರ್ಣಯ್ಯ ನಾಲೆ ಮೂಲಕ ಮಳೆನೀರು ಕುಕ್ಕರಹಳ್ಳಿ ಕೆರೆಗೆ ಸೇರುತ್ತಿತ್ತು. 
ಆದರೆ ಇದೀಗ ಪೂರ್ಣಯ್ಯ ನಾಲೆ ಒತ್ತುವರಿಯಾಗಿದ್ದು, ಮಳೆ ನೀರಿನ ಬದಲು ಒಳಚರಂಡಿ ನೀರು ಕೆರೆ ಸೇರುತ್ತಿದೆ. ಇದರಿಂದ ಕೆರೆ ಪರಿಸರ ಮಲೀನಗೊಳ್ಳುತ್ತಿದೆ. ಕೆರೆ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಮೈಸೂರು ಸ್ಕೂಲ್ ಆಫ್ ಆರ್ಕಿಟೆಕ್ಚರ್ ಡೀನ್ ಆ್ಯಂಡ್ ಡೈರೆಕ್ಟರ್ ಡಾ.ಎಚ್.ಎಸ್.ಚಂಪಾ ಮಾತನಾಡಿ. ಕುಕ್ಕರಹಳ್ಳಿ ಕೆರೆಗೆ ಶುದ್ಧ ಮಳೆ ನೀರು ಪೂರೈಸುತ್ತಿದ್ದ ಪೂರ್ಣಯ್ಯ ನಾಲೆ 25 ಕಿ.ಮೀ. ವಿಸ್ತೀರ್ಣ ಹೊಂದಿದ್ದು, ಹಲವೆಡೆ ನಾಲೆ ಒತ್ತುವರಿಯಾಗಿದೆ. ಹಲವೆಡೆ ಕಟ್ಟಡ ತ್ಯಾಜ್ಯ ಸುರಿಯಲಾಗಿದೆ. ಈಗ ಇರುವಷ್ಟು ಪ್ರಮಾಣದ ನಾಲೆಯನ್ನು ಸಂರಕ್ಷಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.
ಮಳೆ ನೀರು ನಾಲೆ ಮೂಲಕ ಹರಿದು ಈ ಕೆರೆಗೆ ಸೇರುವುದರಿಂದ ಇಲ್ಲಿಯ ಪರಿಸರ ಸಂರಕ್ಷಿಸಬಹುದಾಗಿದೆ. ದೇಶ ಹಾಗೂ ವಿದೇಶದಲ್ಲಿ ಮಳೆ ನೀರು ಕೆರೆಗೆ ಹರಿದು ಬರಲು ನಾಲೆಗಳನ್ನು ಕಾಂಕ್ರೀಟ್‌ನಿಂದ ನಿರ್ಮಿಸಿರುವ ನಿದರ್ಶನ ಇದೆ. ಆದರೆ ನಮ್ಮಲ್ಲಿ ನೈಸರ್ಗಿಕವಾಗಿಯೇ ನಾಲೆಗಳಿವೆ. ಇದರಿಂದ ಮಳೆ ನೀರು ಹರಿದು ಬರುವಾಗ ಮಾರ್ಗದುದ್ದಕ್ಕೂ ಅಗತ್ಯ ಪ್ರಮಾಣದಷ್ಟು ನೀರು ಭೂಮಿಯಲ್ಲಿ ಇಂಗುತ್ತದೆ. ಈ ಪ್ರಕ್ರಿಯೆಯಿಂದ ಅಂತರ್ಜಲದ ಪ್ರಮಾಣ ಹೆಚ್ಚಾಗುವುದರೊಂದಿಗೆ ಸ್ಥಳೀಯ ವಾತಾವರಣ ತಂಪಾಗಿರುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸಬೇಕಾದರೆ ಕೆರೆಗಳ ಸಂರಕ್ಷಣೆ ಆಗತ್ಯ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿ, ವಾಯುವಿಹಾರಿಗಳು, ಪರಿಸರ ಪ್ರೇಮಿಗಳು, ಆಸಕ್ತರಿಗೆ ಕುಕ್ಕರಹಳ್ಳಿ ಕೆರೆ ಜೀವವೈವಿಧ್ಯ, ಜೀವಸಂಕುಲ, ಪಕ್ಷಿ ಸಂಕುಲ, ಜಲಚರಗಳು, ಗಿಡ-ಮರ, ಪೂರ್ಣಯ್ಯ ನಾಲೆ ಸೇರಿದಂತೆ ಇತರ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ರಮೇಶ್ ಹೆಬ್ಬಾಲೆ, ಸುಜೀತ್, ಚಿನ್ಮಯಿ, ಸಚ್ಚಿತ್ ಹಾಗೂ ಇತರರು ಇದ್ದರು.