- ಕ್ರೀಡಾಭಿಮಾನಿಗಳ ವಲಯದಲ್ಲಿ ಹೆಚ್ಚಿದ ಒತ್ತಾಯ
- ಕಾಮನ್‌ವೆಲ್ತ್ ಸ್ಪೋರ್ಟ್ಸ್‌ನಲ್ಲಿ ದೇಶಕ್ಕೆ ಕೀರ್ತಿ ತಂದ ಮೈಸೂರು ಜಿಲ್ಲೆಯ ಸಾಧಕಿ
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಆಯೋಜಿಸುವ ರಾಜ್ಯಮಟ್ಟದ ‘ದಸರಾ ಮುಖ್ಯಮಂತ್ರಿ ಕಪ್’ ಕ್ರೀಡಾಕೂಟಕ್ಕೆ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವ ಮೈಸೂರು ಜಿಲ್ಲೆಯ ಕ್ರೀಡಾಪಟು ಕೆ.ಎಸ್.ಶಿಲ್ಪಾ ಅವರೇ ಚಾಲನೆ ನೀಡಬೇಕು ಎಂಬ ಒತ್ತಾಯ ಕ್ರೀಡಾಭಿಮಾನಿಗಳ ವಲಯದಲ್ಲಿ ಕೇಳಿಬಂದಿದೆ.
ಪ್ರತಿವರ್ಷ ದಸರಾ ಕ್ರೀಡಾಕೂಟಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಆಹ್ವಾನಿಸಿ ಉದ್ಘಾಟಿಸುವುದು ವಾಡಿಕೆ. ಸಾಧಕರ ಸಮ್ಮುಖದಲ್ಲಿ ನಡೆಯುವ ಕ್ರೀಡಾಕೂಟ ಯುವ ಪ್ರತಿಭೆಗಳಿಗೆ ಪ್ರೇರಣೆ ನೀಡುವ ಜತೆಗೆ, ಕ್ರೀಡಾ ಸಾಧನೆಗೆ ಸನ್ಮಾನ ನೀಡುವ ವೇದಿಕೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯವರೇ ಆಗಿರುವ ಶಿಲ್ಪಾ ಅವರಿಗೆ ಈ ಬಾರಿ ಉದ್ಘಾಟನೆ ಅಥವಾ ಮುಖ್ಯ ಅತಿಥಿಯ ಗೌರವ ನೀಡಬೇಕು ಎಂಬ ಬೇಡಿಕೆ ಬಲಗೊಂಡಿದೆ. ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಸಿಟ್ಟಿಂಗ್ ಶಾಟ್‌ಪುಟ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಪ್ಯಾರಾ ಅಥ್ಲೀಟ್ ಶಿಲ್ಪಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಹೆಚ್ಚಿಸಿದ ಸಾಧಕಿ. ಕೆ.ಆರ್.ನಗರ ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದವರು.
ಸ್ಥಳೀಯ ಸಾಧಕಿಗೆ ವೇದಿಕೆ
ರಾಜ್ಯದ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ದಸರಾ ಕ್ರೀಡಾಕೂಟದ ಉದ್ಘಾಟನೆಗೆ ಜಿಲ್ಲೆಯ ಅಂತಾರಾಷ್ಟ್ರೀಯ ಸಾಧಕಿಯನ್ನು ಆಹ್ವಾನಿಸುವುದು ಸ್ಥಳೀಯ ಪ್ರತಿಭೆಗಳಿಗೆ ನೀಡುವ ಗೌರವದ ಜತೆಗೆ, ಯುವ ಕ್ರೀಡಾಪಟುಗಳಿಗೆ ದೊಡ್ಡ ಪ್ರೇರಣೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಗ್ರಾಮೀಣ ಪ್ರತಿಭೆಯ ಸಾಹಸಗಾಥೆ
ರೈತ ಶೈಲ ಹಾಗೂ ಗೃಹಿಣಿ ಶಾಂತಾ ದಂಪತಿ ಪುತ್ರಿಯಾಗಿರುವ ಶಿಲ್ಪಾ, ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್ ಪೂರ್ಣಗೊಳಿಸಿ ಮೈಸೂರಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸ್ನೇಹಿತೆ ಗೀತಾ ಅವರ ಪ್ರೇರಣೆಯಿಂದ 2019ರಲ್ಲಿ ಪ್ಯಾರಾ ಕ್ರೀಡಾ ಕ್ಷೇತ್ರ ಪ್ರವೇಶಿಸಿದರು. ಆರಂಭದಲ್ಲಿ ಸಿಟ್ಟಿಂಗ್ ವಾಲಿಬಾಲ್‌ನಲ್ಲಿ ಕರ್ನಾಟಕ ತಂಡವನ್ನು ನಾಲ್ಕು ಬಾರಿ ಮುನ್ನಡೆಸಿದ ಅವರು, ಬಳಿಕ ಕೋಚ್ ರಾಘವೇಂದ್ರ ಸಲಹೆಯಂತೆ ಶಾಟ್‌ಪುಟ್‌ನತ್ತ ಗಮನಹರಿಸಿದರು. ಬೆಂಗಳೂರಿನ ಶ್ರೀಕಂಠೀರವ ಕ್ರೀಡಾಂಗಣದಲ್ಲಿ ಕೋಚ್ ಎಸ್.ಡಿ.ಈಶಾನ್ ಅವರಿಂದ ತರಬೇತಿ ಪಡೆದರು. ಕ್ರೀಡೆಯನ್ನೇ ಪೂರ್ಣಕಾಲಿಕವಾಗಿ ಆಯ್ಕೆ ಮಾಡಿಕೊಳ್ಳುವ ಉದ್ದೇಶದಿಂದ 2024ರಲ್ಲಿ ಶಿಕ್ಷಕಿಯ ಉದ್ಯೋಗಕ್ಕೆ ರಾಜೀನಾಮೆ ನೀಡಿ ಕ್ರೀಡಾ ಬದುಕಿಗೆ ಸಮರ್ಪಿಸಿಕೊಂಡರು. ಈ ನಿರ್ಧಾರಕ್ಕೆ ಕಾಮನ್‌ವೆಲ್ತ್ ಪದಕದ ರೂಪದಲ್ಲಿ ಪ್ರತಿಫಲ ದೊರೆತಿದೆ. ಇಂತಹ ಸಾಧಕಿಯನ್ನು ದಸರಾ ಕ್ರೀಡಾಕೂಟದ ಉದ್ಘಾಟನೆಗೆ ಕರೆತರುವುದು ಸೂಕ್ತ ಎನಿಸಿದೆ.
ಈ ಹಿಂದೆ ಖ್ಯಾತ ಕ್ರೀಡಾಪಟುಗಳಿಗೆ ಗೌರವ:
ಹೆಚ್ಚು ತೂಕದ ಕಾರಣದಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅನರ್ಹಗೊಂಡು ಪದಕ ವಂಚಿತರಾಗಿದ್ದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ 2025ನೇ ಸಾಲಿನ ಮೈಸೂರು ದಸರಾ ಮಹೋತ್ಸವದ ರಾಜ್ಯ ಮಟ್ಟದ ‘ದಸರಾ ಮುಖ್ಯಮಂತ್ರಿ ಕಪ್’ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು.
ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮಹಿಳಾ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ಕೊಟ್ಟ ಸಾಕ್ಷಿ ಮಲಿಕ್ 2022ನೇ ಸಾಲಿನ ದಸರೆಯಲ್ಲಿ ಭಾಗಿಯಾಗಿದ್ದರು. 2024ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಮುಖ್ಯ ಅತಿಥಿಯಾಗಿದ್ದರು. 2019ರಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು, 2018ರಲ್ಲಿ ಅಂತಾರಾಷ್ಟ್ರೀಯ ಅಥ್ಲೀಟ್ ಹಾಗೂ ಕೊಡಗಿನ ಎಂ.ಆರ್.ಪೂವಮ್ಮ, 2017ರಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರಾದ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್, 2014ರಲ್ಲಿ ಪರ್ವತಾರೋಹಿ ಅರುಣಿಮಾ ಸಿನ್ಹಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ್ದರು. ಕೋವಿಡ್ ಕಾರಣದಿಂದ 2020 ಮತ್ತು 2021ರಲ್ಲಿ ದಸರಾ ಕ್ರೀಡಾಕೂಟ ನಡೆದಿರಲಿಲ್ಲ. ಇಂತಹ ಸಾಧಕರ ಸಾಲಿನಲ್ಲಿಯೇ ಇರುವ ಶಿಲ್ಪಾ ಅವರಿಗೆ ಈ ಬಾರಿಯ ದಸರಾ ಕ್ರೀಡಾಕೂಟದ ಉದ್ಘಾಟನಾ ಗೌರವ ದೊರೆಯಲಿ ಎನ್ನುವುದು ಕ್ರೀಡಾಭಿಮಾನಿಗಳ ಒತ್ತಾಯ.
ಈ ಬಾರಿಯ ದಸರಾ ಮಹೋತ್ಸವದ ರಾಜ್ಯ ಮಟ್ಟದ ದಸರಾ ಮುಖ್ಯಮಂತ್ರಿ ಕಪ್ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೆ.ಎಸ್.ಶಿಲ್ಪಾ ಅವರನ್ನು ಆಹ್ವಾನಿಸುವ ಕುರಿತು ದಸರಾ ಸಮಿತಿಯಲ್ಲಿ ಚರ್ಚೆ ನಡೆಯುತ್ತಿದೆ. ಕ್ರೀಡಾ ಇಲಾಖೆ ಹಾಗೂ ದಸರಾ ಕ್ರೀಡಾ ಉಪಸಮಿತಿಯಲ್ಲಿ ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.