ಡಾ.ಸುಮತಿ ರಾಮಕೃಷ್ಣ ಗೌಡ  
ಮೈಸೂರು

ವಿದ್ಯಾರ್ಥಿಗಳಿಂದ ಲಂಚ ಕೇಳಿರುವ ಕೆಎಸ್ಒಯು ಪ್ರಾಧ್ಯಾಪಕಿ ಡಾ.ಸುಮತಿ ಅಮಾನತು

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳು ಇ-ಮೇಲ್ ಪತ್ರಗಳ ಮೂಲಕ ವಿಶ್ವವಿದ್ಯಾಲಯಕ್ಕೆ ದೂರು
  • ದೂರಿಗೆ ಸಂಬಂಧಿಸಿದಂತೆ ವ್ಯಾಟ್ಸ್‌ಆ್ಯಪ್ ಗ್ರೂಪ್‌ಗಳ ಸ್ಕ್ರೀನ್ ಶಾಟ್ಸ್, ವಾಯ್ಸ ಮೆಸೇಜ್ ಸೇರಿದಂತೆ ವಿವಿಧ ದಾಖಲೆ ಸಲ್ಲಿಕೆ
  • ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಇವರನ್ನು ಅಮಾನತು
ಮೈಸೂರು: ವಿದ್ಯಾರ್ಥಿಗಳಿಂದ  ದ ಮೇರೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗಣಕವಿಜ್ಞಾನ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಸುಮತಿ ರಾಮಕೃಷ್ಣ ಗೌಡ ಅವರನ್ನು ಅಮಾನತು ಮಾಡಲಾಗಿದೆ.
ಪ್ರಾಜೆಕ್ಟ್ ಕಾರ್ಯ ಪೂರ್ಣಗೊಳಿಸಲು ಲಂಚ ಪಡೆದಿದ್ದಾರೆ ಎಂದು ಬಿಸಿಎ ವಿದ್ಯಾರ್ಥಿಗಳು ಇ-ಮೇಲ್ ಪತ್ರಗಳ ಮೂಲಕ ವಿಶ್ವವಿದ್ಯಾಲಯಕ್ಕೆ ದೂರು ಸಲ್ಲಿಸಿದ್ದರು. 
ಈ ವಿಷಯವಾಗಿ ಇದೇ ವಿಭಾಗದ ಸಹ ಪ್ರಾಧ್ಯಾಪಕಿ ಸುನಿತಾ ಅವರು ಸಹ ದೂರು ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ವ್ಯಾಟ್ಸ್‌ಆ್ಯಪ್ ಗ್ರೂಪ್‌ಗಳ ಸ್ಕ್ರೀನ್ ಶಾಟ್ಸ್, ವಾಯ್ಸ ಮೆಸೇಜ್, ಮಧ್ಯವರ್ತಿಗಳ ಕ್ಯೂಆರ್ ಕೋಡ್, ಆತನ ದೂರವಾಣಿ ಸಂಖ್ಯೆ ಸೇರಿದಂತೆ ವಿವಿಧ ದಾಖಲೆಗಳನ್ನೂ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಕರಾಮುವಿ ವ್ಯವಸ್ಥಾಪನಾ ಮಂಡಳಿ ತೀರ್ಮಾನ ಮತ್ತು ಕುಲಪತಿ ಅನುಮೋದನೆ ಮೇರೆಗೆ ಕುಲಸಚಿವ ಪ್ರೊ.ಎಸ್.ಕೆ.ನವೀನ್‌ಕುಮಾರ್ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡದೆ ಲಂಚ ಕೇಳಿರುವ ಡಾ.ಸುಮತಿ ಅವರ ವರ್ತನೆ ಅಶಿಸ್ತಿನಿಂದ ಕೂಡಿದೆ. ವಿವಿ ಉದ್ಯೋಗಿಗಳ ನಡತೆ ಪರಿನಿಯಮದ ಸ್ಪಷ್ಟ ಉಲ್ಲಂಘನೆಯಾಗಿದೆ.
 ವಿಶ್ವವಿದ್ಯಾಲಯದ ಘನತೆಗೆ ಧಕ್ಕೆ ಮಾಡಿರುವ ಇವರ ನಡವಳಿಕೆ ಅಧ್ಯಾಪಕ ವೃತ್ತಿಗೆ ತರವಲ್ಲದ ವರ್ತನೆಯಾಗಿದೆ. ಆದ್ದರಿಂದ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಇವರನ್ನು ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.