ಕೆ.ಆರ್.ನಗರ ತಾಲೂಕು ಹಂಪಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಶ್ರೀರಾಮ ಮಂದಿರದ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಹಂಪಾಪುರ ಕುಮಾರ್, ನಾಗಣ್ಣ, ಗುರು, ಅಣ್ಣಯ್ಯಪ್ಪ, ಪರಮೇಶ್, ಪ್ರಕಾಶ್, ನರಸಿಂಹ, ಮನೋಹರ್, ಜಯರಾಮೇಗೌಡ ಇದ್ದರು.
ಕೆ.ಆರ್.ನಗರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದು ಮೈತ್ರಿಕೂಟದ ಅಭ್ಯರ್ಥಿ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ತಾಲೂಕಿನ ಹಂಪಾಪುರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀರಾಮ ಮಂದಿರದ ಮೊದಲನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಿಂದಿನ ಮುಖ್ಯಮಂತ್ರಿಗಳು ಉತ್ತಮ ಆಡಳಿತ ನೀಡಿದ್ದರು. ಆದರೆ, ಈಗಿನ ಮುಖ್ಯಮಂತ್ರಿಗಳು ಆರೂವರೆ ಲಕ್ಷ ಕೋಟಿ ರೂ. ಸಾಲ ಮಾಡಿ ಜನತೆಯ ತಲೆಯ ಮೇಲೆ ಸಾಲದ ಹೊರೆ ಹೊರಿಸಿರುವುದು ಮತ್ತು ನಾಡಿನ ಜನತೆಗೆ ಬೆಲೆ ಏರಿಕೆಯ ಹೊರೆ ಹೊರಿಸಿರುವುದು ದೊಡ್ಡ ಸಾಧನೆಯಾಗಿದೆ ಎಂದು ಆರೋಪಿಸಿದರು.
ಸರ್ಕಾರದ ಬೊಕ್ಕಸ ಬರಿದಾಗಿದ್ದು ಜನತೆಯ ಕಲ್ಯಾಣಕ್ಕೆ ಹಣವಿಲ್ಲದಾಗಿದೆ. ಈಗಿನ ಸರ್ಕಾರ ಸಾಮಾನ್ಯ ಜನರು ಉಪಯೋಗಿಸುವ ಎಲ್ಲ ಪದಾರ್ಥಗಳಿಗೆ ಬೆಲೆ ಏರಿಕೆ ಮಾಡಿರುವುದೇ ದೊಡ್ಡ ಸಾಧನೆಯಾಗಿದೆ. 2028ಕ್ಕೆ ಜನತೆ ಇವರಿಗೆ ತಕ್ಕಪಾಠ ಕಲಿಸಲಿದ್ದು ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ನಾನೆಂದೂ ನನ್ನ ಅಧಿಕಾರದ ಅವಧಿಯಲ್ಲಿ ಕೆಲಸ ಕೊಡಿಸುತ್ತೇನೆ, ಕಾಂಟ್ಯಾಕ್ಟ್ ಕೊಡಿಸುತ್ತೇನೆ ಎಂದು ಯಾರ ಬಳಿಯೂ ದುಡ್ಡಿಗಾಗಿ ಕೈಚಾಚಿಲ್ಲ, ಚಾಚುವುದೂ ಇಲ್ಲ. ಶ್ರೀರಾಮನ ಮುಂದೆ ಪ್ರಮಾಣವಾಗಿ ಹೇಳುತ್ತೇನೆ. ಮುಂದಿನ ದಿನಗಳಲ್ಲಿ ನಾನು ರಾಜಕಾರಣದಲ್ಲಿ ಇರಲಿ ಇಲ್ಲದಿರಲಿ ಕ್ಷೇತ್ರದ ಜನತೆಯ ಸೇವೆ ಸದಾ ಮಾಡುತ್ತೇನೆ. ನನ್ನ ಅವಧಿಯಲ್ಲಿ ಅನುದಾನ ನೀಡಿ ಉತ್ಸವ ಮೂರ್ತಿಯನ್ನು ನೀಡಿ ಭೂಮಿ ಪೂಜೆಯಾಗಿ ಉದ್ಘಾಟನೆ ಹಂತಕ್ಕೆ ಬಂದಿದ್ದ ಶ್ರೀರಾಮ ಮಂದಿರವನ್ನು ಉದ್ಘಾಟನೆ ಮಾಡುವಂತೆ ನೀವು ಕರೆದಿರಿ. ಆದರೆ, ನಾನು ಸೋತಿದ್ದರಿಂದ ಬರಲಿಲ್ಲ ಎಂದರು.
ಈಗ ವಾರ್ಷಿಕೋತ್ಸವಕ್ಕೆ ಕರೆದಿದ್ದೀರಿ ಇದನ್ನು ಯಾರೂ ಟೀಕಿಸಲು ಸಾಧ್ಯವಿಲ್ಲ ಬಂದಿದ್ದೇನೆ. ಆದರೆ ಈಗಿನ ಶಾಸಕರು, ನಾನು ಶಾಸಕನಾಗಿದ್ದಾಗ ದೊಡ್ಡಕೊಪ್ಪಲು, ಬಡಕನಕೊಪ್ಪಲಿನಲ್ಲಿ ಸರ್ಕಾರಿ ಕಾರ್ಯಕ್ರಮವನ್ನು ನನ್ನನ್ನು ಕರೆಯದೆ ಮಾಡಿದರು. ತಿಪ್ಪೂರು ಬಳಿಯೂ ಮುಖ್ಯಮಂತ್ರಿ ಕರೆಸಿ ಉದ್ಘಾಟನೆ ಮಾಡಿದರು ಎಂದು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದನ್ನು ನೆನಪಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್, ತಾಪಂ ಮಾಜಿ ಸದಸ್ಯ ದೊಡ್ಡಕೊಪ್ಪಲು ನಾಗಣ್ಣ, ಮುಖಂಡ ಮಂಚನಹಳ್ಳಿಗುರು, ಮುಖಂಡರಾದ ಅಣ್ಣಯ್ಯಪ್ಪ, ಪರಮೇಶ್, ಪ್ರಕಾಶ್, ನರಸಿಂಹ, ಮನೋಹರ್, ಜಯರಾಮೇಗೌಡ, ರಮೇಶ, ಎಚ್.ಎ.ರವಿಕುಮಾರ, ಎಚ್.ಎನ್.ಮನು, ಅರ್ಜುನ್, ಎಚ್.ಪಿ.ಕಾರ್ತಿಕ್, ಮಹೇಶ್, ಮಹಾಲಿಂಗ, ಎಚ್.ಬಿ.ಕಾರ್ತಿಕ್ ಮತ್ತಿತರರು ಇದ್ದರು.