ಕೆ.ಆರ್.ನಗರ ತಾಲೂಕು ಅರ್ಕೇಶ್ವರಸ್ವಾಮಿ ಅಂಗವಿಕಲರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಕಾರ್ಯದರ್ಶಿ ಮಾಲೇಗೌಡ, ರಾಘವೇಂದ್ರ ಪ್ರಸಾದ್ ಮತ್ತಿತರರಿದ್ದರು. 
ಮೈಸೂರು

ಮಾಸಾಶನ ಸ್ಥಗಿತ, ಅಂಗವಿಕಲರ ಬದುಕು ಅತಂತ್ರ

ಕೆ.ಆರ್.ನಗರ:

ಕಳೆದ 4 ತಿಂಗಳಿಂದ ಅಂಗವಿಕಲರ ಮಾಸಾಶನ ಸ್ಥಗಿತಗೊಂಡಿರುವುದರಿಂದ ಅಂಗವಿಕಲರ ಬದುಕು ಅತಂತ್ರವಾಗಿದ್ದು, ಸರ್ಕಾರ ಕೂಡಲೇ ಮಾಸಾಶನ ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಾಲೂಕು ಅರ್ಕೇಶ್ವರಸ್ವಾಮಿ ಅಂಗವಿಕಲರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ನೇತೃತ್ವದಲ್ಲಿ ಇತ್ತೀಚೆಗೆ ಮೌನ ಮೆರವಣಿಗೆ ನಡೆಸಿ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಪದಾಧಿಕಾರಿಗಳು ಪಟ್ಟಣದ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ತ್ರಿಚಕ್ರ ವಾಹನಗಳೊಂದಿಗೆ ಮೌನ ಮೆರವಣಿಗೆಯಲ್ಲಿ ತಹಸೀಲ್ದಾರ್ ಕಚೇರಿಯವರೆವಿಗೆ ಮೆರವಣಿಗೆ ತೆರಳಿ ತಮ್ಮ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿದರು.
ಈ ವೇಳೆ ಮಾತನಾಡಿದ ಸಂಘದ ಪದಾಧಿಕಾರಿಗಳು, ಅಂಗವಿಕಲರಿಗೆ ಕಳೆದ 4 ತಿಂಗಳಿಂದ ಮಾಸಾಶನ ಸ್ಥಗಿತಗೊಂಡಿದ್ದು, ಅದೇ ಹಣವನ್ನು ನಂಬಿಕೊಂಡಿರುವ ಹಲವಾರು ಅಂಗವಿಕಲರು ಚಿಕಿತ್ಸೆಗೆ ಹಣವಿಲ್ಲದೆ ಪರದಾಡುವಂತಾಗಿದೆ ಎಂದು ಅಳಲು ತೋಡಿಕೊಂಡರು.
ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿರುವುದರಿಂದ ಅಂಗವಿಕಲರ ಜೀವನ ಮತ್ತು ಸಂಸಾರದ ಭಾರ ಹೆಚ್ಚಾಗಿದೆ. ನಾವು ಅಂಗವಿಕಲರಾಗಿರುವುದರಿಂದ ಕೆಲಸ ಮಾಡಲು ಅಶಕ್ತರಾಗಿದ್ದು ನಮಗೆ ಯಾವುದೇ ತರಹದ ಕೆಲಸಗಳು ದೊರೆಯುವುದಿಲ್ಲ. ಆದ್ದರಿಂದ ನಮಗೆ ಈಗ ನೀಡುತ್ತಿರುವ ಮಾಸಾಶನವು ಜೀವನ ನಿರ್ವಹಿಸಲು ಕಷ್ಟಸಾಧ್ಯವಾಗಿರುತ್ತದೆ. ಆದ್ದರಿಂದ ಮಾಸಾಶನವನ್ನು 5 ಸಾವಿರ ರೂ.ಗೆ ಹೆಚ್ಚಿಸಬೇಕು, ರಾಜ್ಯಾದ್ಯಂತ ಉಚಿತ ಬಸ್‌ಪಾಸ್ ವಿತರಣೆ ಮಾಡಬೇಕು, ಉಚಿತ ನಿವೇಶನ ಮಂಜೂರು ಮಾಡುವುದರ ಜತೆಗೆ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ನೀಡಬೇಕು, ಕೇಂದ್ರ ಸರ್ಕಾರ ತಂದಿರುವ 2016ರ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಮಾಲೇಗೌಡ, ರಾಘವೇಂದ್ರ ಪ್ರಸಾದ್ ಇನ್ನಿತರರು ಹಾಜರಿದ್ದರು.