ಕೆ.ಆರ್.ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಆಯೋಜಿಸಿದ್ದ ನಶಾ ಮುಕ್ತ ಭಾರತ ಅಭಿಯಾನ ಹಾಗೂ ಮದ್ಯ ಮಾದಕ ವ್ಯಸನಗಳ ಅರಿವು ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶ ಚಂದನ್ ರವರನ್ನು ಸನ್ಮಾನಿಸಲಾಯಿತು. ಪ್ರಾಂಶುಪಾಲ ಎಚ್.ಕೆ.ಕೃಷ್ಣಯ್ಯ, ಅರ್ಥಶಾಸ್ತ್ರ ಹಿರಿಯ ಉಪನ್ಯಾಸಕ ಡಿ. ಶ್ರೀನಿವಾಸ್, ಉಪನ್ಯಾಸಕರಾದ ಎಸ್.ಕೆ.ಮಂಜು, ಜಗದೀಶ್, ಸುರುಚಿ, ಕುಮಾರ್, ಕೃಷ್ಣ, ಗುರುರಾಜ್, ದಿವ್ಯಾ ಇದ್ದರು.
ಕೆ.ಆರ್.ನಗರ: ಮನವನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ಸಾಧನೆಗೆ ಪೂರಕವಾಗುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಚಂದನ್ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಶಾ ಮುಕ್ತ ಭಾರತ ಅಭಿಯಾನ ಹಾಗೂ ಮದ್ಯ ಮಾದಕ ವ್ಯಸನಗಳ ಕುರಿತು ಸೋಮವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರಿ ಸಾಧನೆಗೆ ದೇಹ ಮತ್ತು ಮನಸ್ಸು ಪೂರಕವಾಗಿರಬೇಕು. ಧನಾತ್ಮಕವಾಗಿ ಕೆಲಸ ಮಾಡಬೇಕು. ವಿವಿಧ
ಕಾರಣಗಳಿಗೆ ಮೊಬೈಲ್ ೆನ್ ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ಸಾಮಾಜಿಕ ಜಾಲ ತಾಣಗಳನ್ನು ರಚನಾತ್ಮಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಬೇಕು. ತಾತ್ಕಾಲಿಕವಾದ ಸುಖಕ್ಕಾಗಿ ತಂಬಾಕು, ಬೀಡಿ, ಸಿಗರೇಟ್ ಇತ್ಯಾದಿಗಳಿಗೆ ದಾಸರಾಗಬಾರದು ಎಂದರು.
ಕಾಲೇಜು ಪ್ರಾಂಶುಪಾಲ ಎಚ್.ಕೆ.ಕೃಷ್ಣಯ್ಯ ಮಾತನಾಡಿ ಕಾಲೇಜಿನಲ್ಲಿದ್ದಾಗ ಉತ್ತೀರ್ಣಕ್ಕೆ ಬೇಕಾಗುವಷ್ಟು ಅಂಕ ಪಡೆಯುವುದೇ ಗುರಿಯಾಗಬಾರದು ಎಂದರು. ಚೆನ್ನಾಗಿ ಓದುವುದು ಎಂದರೆ ಅದು ಜ್ಞಾನಾರ್ಜನೆಗೆ. ಉತ್ತಮ ಜೀವನ ರೂಪಿಸಿಕೊಳ್ಳಲು ಇದು ಪೂರಕವಾಗಲಿದೆ. ಶಿಸ್ತು, ಸಂಯಮ ಮತ್ತು ಪ್ರಾಮಾಣಿಕತೆ ರೂಢಿಸಿಕೊಂಡು ವ್ಯಾಸಂಗ ಮಾಡಿದರೆ ಮಾತ್ರ ಜೀವನಕ್ಕೆ ಗಟ್ಟಿತನ ಬರುತ್ತದೆ. ಮಾತ್ರವಲ್ಲ, ಬಲಿಷ್ಟ ಭಾರತವನ್ನು ಕಟ್ಟಲೂ ನೆರವಾಗುತ್ತದೆ ಎಂದರು. ಅರ್ಥಶಾಸ್ತ್ರ ಹಿರಿಯ ಉಪನ್ಯಾಸಕ ಡಿ. ಶ್ರೀನಿವಾಸ್ ಮಾತನಾಡಿ ಭಾರತ ನಶೆ ಮುಕ್ತ ದೇಶವಾಗಬೇಕು. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಒಳಗಾಗದೇ ಜಾಗೃತರಾಗಿ ಇರಬೇಕು ಎಂದರು.
ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಾಲೂಕು ಸಂಯೋಜಕ ಕಾಟ್ನಾಳು ಎಲ್.ಹೇಮಂತ್ ಕುಮಾರ್ ಮಾತನಾಡಿ, ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅಪಾರವಾಗಿದೆ. ಮಾದಕ ವಸ್ತು ಮುಕ್ತ ಭಾರತ ಅಭಿಯಾನಕ್ಕೆ ಯುವಜನರು ಬೆಂಬಲಿಸಬೇಕು ಎಂದರು.
ಉಪನ್ಯಾಸಕರಾದ ಎಸ್.ಕೆ.ಮಂಜು, ಜಗದೀಶ್, ಸುರುಚಿ, ಕುಮಾರ್, ಕೃಷ್ಣ, ಗುರುರಾಜ್, ದಿವ್ಯಾ, ಭಾಗ್ಯಾ, ರೇಖಾ, ಶಿವಾನಂದ, ಸುಧೀಂದ್ರ, ದೀಪಕ್ ಕುಮಾರ್, ಪುಣ್ಯಶೀಲಾ ಇತರರು ಭಾಗವಹಿಸಿದ್ದರು.