ಕೆ.ಆರ್.ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಭಕ್ತ ಕನಕದಾಸರ ಪ್ರತಿಮೆಯನ್ನು ಶಾಸಕ ಡಿ.ರವಿಶಂಕರ್, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಕೆ. ಎನ್.ದಯಾನಂದ್ ಅನಾವರಣಗೊಳಿಸಿದರು. ಎಲ್. ರಂಗಸ್ವಾಮಿ, ಕೆ. ಪಿ. ಶ್ರೀನಿವಾಸ್ ಇದ್ದರು. 
ಮೈಸೂರು

ಸಮಾಜದ ಏಳಿಗೆಗೆ ಶ್ರಮಿಸಿದ ಮಹನೀಯರ ಆದರ್ಶ ಪಾಲಿಸಿ

ಕೆ.ಆರ್.ನಗರ: ಸಮಾಜದ ಏಳಿಗೆಗೆ ಶ್ರಮಿಸಿದ ಮಹನೀಯರ ಜೀವನದ ತತ್ವ, ಸಿದ್ಧಾಂತ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ತಮ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಭಾನುವಾರ ಕನಕ ಉತ್ಸವ ಸಮಿತಿಯ ವತಿಯಿಂದ ಆಯೋಜಿಸಿದ್ದ  ದಾಸಶ್ರೇಷ್ಠ ಭಕ್ತ ಕನಕದಾಸರ 538ನೇ ಜಯಂತಿ ಮತ್ತು ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಅವರು, ಧನಿಕನಾಗಿ ಕನಕನಾದ ದಾಸಶ್ರೇಷ್ಠರ ಜೀವನ ಮತ್ತು ಸಾರ್ಥಕ ಬದುಕು ಜಗತ್ತಿಗೆ ಮಾದರಿ ಎಂದರು.
ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಸುಳ್ಳು ಅಪಪ್ರಚಾರ ಮಾಡುವವರು ಆತ್ಮ ವಿಮರ್ಶೆ ಮಾಡಿಕೊಂಡು ಉತ್ತಮ ಕೆಲಸಗಳಿಗೆ ಸಹಕಾರ ನೀಡಬೇಕು. ಪರೋಕ್ಷವಾಗಿ ಮಾಜಿ  ಶಾಸಕ ಸಾ.ರಾ.ಮಹೇಶ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ದೊಡ್ಡಸ್ವಾಮೇಗೌಡರು.  ಚುನಾಯಿತರಾದವರ ಕೆಲಸ ಜನಸೇವೆ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯವುದಾಗಿದ್ದು ಇದನ್ನು ಅರಿತು ಜವಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಹೇಳಿದರು. 
ಶಾಸಕ ಡಿ. ರವಿಶಂಕರ್ ಮಾತನಾಡಿ ಭಕ್ತ ಕನಕದಾಸರು ನಮಗೆಲ್ಲ ಪ್ರೇರಣಾ ಶಕ್ತಿ ಹಾಗೂ ಮಾರ್ಗದರ್ಶಕರಾಗಿದ್ದು ಅವರ ಜೀವನ ಸರ್ವರಿಗೂ ಸಂದೇಶವಾಗಿದೆ. ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ಅವರ ಜೀವನದ ಕಠಿಣ ಸವಾಲು ಹಾಗೂ ಸಾಧನೆಯ ಹಿಂದಿನ ಪರಿಶ್ರಮವನ್ನು ಗಮನಿಸಿ ಅವುಗಳನ್ನು ಅರಿತು ಪಾಲಿಸಬೇಕೆಂದು ಕಿವಿಮಾತು ಹೇಳಿದರು.
ಕೆಸ್ತೂರು ಗೇಟ್ ಬಳಿ ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಗೆ 60 ಕೋಟಿ ರೂ., ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಇದರಿಂದ ಮಾವತ್ತೂರು, ಕೆಸ್ತೂರು, ಸಿದ್ದಾಪುರ ಮತ್ತು ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗುತ್ತದೆ. ಕೆಸ್ತೂರು ಕೊಪ್ಪಲು ಗ್ರಾಮದ ಹರಳಯ್ಯನ ಹಳ್ಳದ ಆಕ್ವಿಡೇಟ್ ಕಾಮಗಾರಿಗೆ 15 ಕೋಟಿ ರೂ., ಅನುದಾನ ನೀಡಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಶೀಘ್ರ ಕೆಲಸ ಆರಂಬಿಸಲಾಗುತ್ತದೆಂದ ಶಾಸಕರು ಇದರ ಜತೆಗೆ ಗ್ರಾಮದಲ್ಲಿ ಕೆಪಿಎಸ್ ಶಾಲೆ ಆರಂಬಿಸಲಾಗುತ್ತದೆಂದು ಪ್ರಕಟಿಸಿದರು.
ವೇದಿಕೆ ಕಾರ್ಯಕ್ರಮಕ್ಕು ಮುನ್ನ ಸಂತಶ್ರೇಷ್ಠ ಕನಕದಾಸರ ಪ್ರತಿಮೆಯನ್ನು ಗಣ್ಯರೆಲ್ಲಾ ಸೇರಿ ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಕೆಸ್ತೂರು ಗ್ರಾ.ಪಂ. ಅಧ್ಯಕ್ಷೆ ಮಂಜುಳ ಶ್ರೀನಿವಾಸ್, ಉಪಾಧ್ಯಕ್ಷೆ ರುಕ್ಮಿಣಿರವಿ, ಸದಸ್ಯರಾದ ಸುಶೀಲಾ,  ಜಗದೀಶ್, ತಾ.ಪಂ ಮಾಜಿ ಅಧ್ಯಕ್ಷೆ  ಹರಿಣಿಪ್ರಕಾಶ್, ಮಾಜಿ ಉಪಾಧ್ಯಕ್ಷ ಕೆ. ಎಸ್. ಅರವಿಂದ್, ಮಾಜಿ ಸದಸ್ಯ ಲೋಕೇಶ್, ಕ್ರಾಂತಿವೀರ ಆರ್ಟ್ಸ್ ಮಾಲೀಕ ಉಗರಗೋಳ ನಂದಕುಮಾರ್, ಕವಿರತ್ನ ಕಾಳಿದಾಸ ಯುವಕರ ಸಂಘದ ಗೌರವಾಧ್ಯಕ್ಷ ಕೆ. ಎಲ್. ರಂಗಸ್ವಾಮಿ, ಅಧ್ಯಕ್ಷ ಜಿ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಕೆ. ಪಿ. ಶ್ರೀನಿವಾಸ್, ಖಜಾಂಚಿ ಮಹದೇವ ಸೇರಿದಂತೆ ಇನ್ನಿತರರು ಇದ್ದರು.