ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ 
ಮೈಸೂರು

ಪ್ರತಾಪ್ ಸಿಂಹ ಅತಿವೇಗದ ಸುಳ್ಳುಗಾರ, ಯದುವೀರ್ ನಿಧಾನಗತಿಯ ಸುಳ್ಳುಗಾರ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕೆ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿವೃದ್ಧಿ ಶೂನ್ಯ ಎಂದು ಆರೋಪಿಸಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದರಾಗಿ 20 ತಿಂಗಳು ಕಳೆದಿದ್ದು, ಈ ಅವಧಿಯಲ್ಲಿ ಅವರು ಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ ಎಂಬು ದನ್ನು ಬಹಿರಂಗ ಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಗ್ರಹಿಸಿದರು.
ಸಿದ್ದರಾಮಯ್ಯ ಸೆಪ್ಟೆಂಬರ್‌ನಿಂದ ಇಲ್ಲಿವರೆಗೆ ಮೈಸೂರಿನ ಅಭಿವೃದ್ಧಿಗೆ 3097 ಕೋಟಿ ರೂ. ನೀಡಿದ್ದಾರೆ. ಮೈಸೂರು ವಿಮಾನ ನಿಲ್ದಾಣಕ್ಕೆ 300 ಕೋಟಿ ರೂ.ನೀಡಿದ್ದಾರೆ. ಯದುವೀರ್ ಅವರ ಕೊಡುಗೆ ಏನು ಎಂಬುದನ್ನು ತಿಳಿಸಲಿ. ಮಾಜಿ ಸಂಸದ ಪ್ರತಾಪ್ ಸಿಂಹ ಅತಿವೇಗದ ಸುಳ್ಳುಗಾರ, ಯದುವೀರ್ ನಿಧಾನಗತಿಯ ಸುಳ್ಳುಗಾರ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಪೊಲೀಸರು ವಿವಸ್ತ್ರಗೊಳಿಸಿದ್ದಾರೆ ಎಂದು ಆರೋಪಿಸಿರುವ ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತೆ ಸುಜಾತಾ ಅವರ ಮೇಲೆ 9 ಪೊಲೀಸ್ ಠಾಣೆಗಳಲ್ಲಿ ಕೊಲೆ ಪ್ರಯತ್ನ, ಹನಿಟ್ರಾೃಪ್ ಸೇರಿ 47 ಪ್ರಕರಣಗಳು ದಾಖಲಾಗಿವೆ. ಸುಜಾತಾ ಸ್ವತಃ ಬಟ್ಟೆ ತೆಗೆದುಹಾಕಿ ತಮ್ಮನಿಂದ ವಿಡಿಯೋ ಮಾಡಿಸಿದ್ದಾಳೆ. ಇದೆಲ್ಲದಕ್ಕೂ ವಿಡಿಯೋದಾಖಲೆ ಇದೆ ಎಂದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಮುನ್ನ ನಡೆಸುವ ಕುಟುಂಬ ಸದಸ್ಯರ ಮ್ಯಾಪಿಂಗ್ ವೇಳೆ ಬಿಜೆಪಿ ಕಾರ್ಯಕರ್ತರೂ ಹೋಗಿದ್ದರು. ಅವರಲ್ಲಿ ಸುಜಾತಾ ಕೂಡ ಮನೆಗಳಿಗೆ ಹೋಗಿ ಹೆಸರು ತೆಗೆಸುವ ಕೆಲಸ ಮಾಡುತ್ತಿದ್ದರು. ಇದೆಲ್ಲವನ್ನೂ ಗಮನಿಸಿದರೆ ಚುನಾವಣಾ ಆಯೋಗದ ಮೂಲಕ ಮತಕಳವು ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಕಾಂಗ್ರೆಸ್‌ಆಡಳಿತದಲ್ಲಿರುವ ಕರ್ನಾಟಕದಲ್ಲಿಯೇ ಈ ಕತೆಯಾದರೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮತಕಳವು ಯಾವ ಪ್ರಮಾಣದಲ್ಲಿ ಇರಬಹುದು ಎಂಬುದನ್ನು ಅರಿಯಬಹುದು ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಪದಾಧಿಕಾರಿಗಳಾದ ಹೇಮಂತ್, ಗಿರೀಶ್ ಇದ್ದರು.