ಕಾವೇರಿ ಕೊಡವ ಅಸೋಸಿಯೇಷನ್ ಮೈಸೂರು ಪೂರ್ವದ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಡಾ. ತೀತಿರಾ ರೋಷನ್ ಅಪ್ಪಚ್ಚು, ಮುಕ್ಕಾಟಿರ ಪುನೀತ್ ಕುಟ್ಟಯ್ಯ,ಪೊಂಜಾಂಡ ಎ.ಗಣಪತಿ, ಪಟ್ಟಡ ದೇವಯ್ಯ, ನೆರವಂಡ ಮುತ್ತಪ್ಪ, ಕಡೆಮಾಡ ಬೆಳ್ಳಿಯಪ್ಪ, ಪಟ್ಟಮಾಡ ಚೇರ್ಮಣ್ಣ, ಪಂದ್ಯಂಡ ಪದ್ಮಾ ಬೋಪಯ್ಯ ಇತರರು ಇದ್ದರು.
ಪ್ರಕೃತಿಯ ಮಡಿಲಿನಲ್ಲಿರುವ ಕೊಡಗು ಜಿಲ್ಲೆ ಅತ್ಯುತ್ತಮ ಪ್ರವಾಸಿ ತಾಣವೂ ಆಗಿದ್ದು, ಅಲ್ಲಿನ ಸಂಸ್ಕೃತಿ ಮಹತ್ವದ್ದಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಕಾವೇರಿ ಕೊಡವ ಅಸೋಸಿಯೇಷನ್ ಮೈಸೂರು ಪೂರ್ವ ಸಂಸ್ಥೆಯ 25ನೇ ವಾರ್ಷಿಕೋತ್ಸವದ ಅಂಗವಾಗಿ ಶಕ್ತಿ ನಗರದ ವಿದ್ಯಾಶಂಕರ ಬಡಾವಣೆಯ ಕೊಡವ ಮಾದರಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೊಡವರ ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದೆ. ಅವರ ಆಚಾರ-ವಿಚಾರಗಳು ಗಮನಾರ್ಹದ್ದಾಗಿವೆ ಎಂದರು.
ಕೊಡಗಿನಿಂದ ಬಂದವರು ಸಂಘಟಿತರಾಗಿ ಮೈಸೂರಿನಲ್ಲಿ ಕಾವೇರಿ ಕೊಡವ ಅಸೋಸಿಯೇಷನ್ ಸ್ಥಾಪಿಸಿ ಅದನ್ನು 25 ವರ್ಷಗಳ ಕಾಲ ಸಮರ್ಥವಾಗಿ ನಡೆಸಿದ್ದಾರೆ. ಸಂಸ್ಥೆ ಈಗ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಂಘದ ಹಿರಿಯ ಸದಸ್ಯರು ಹಾಗೂ ಪದಾಧಿಕಾರಿಗಳು ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದರು.
ಹೈದರಾಬಾದ್‌ನ ತೆರಿಗೆ ಇಲಾಖೆಯ ಡೆಪ್ಯುಟಿ ಕಮಿಷನರ್ ಮುಕ್ಕಾಟಿರ ಪುನೀತ್ ಕುಟ್ಟಯ್ಯ, ರಾಜ್ಯ ಸರ್ಕಾರದ ವಿದ್ಯುತ್ ನಿರೀಕ್ಷಣಾಧಿಕಾರಿ ಡಾ. ತೀತಿರಾ ರೋಷನ್ ಅಪ್ಪಚ್ಚು, ಕೊಡವ ಸಮಾಜ ಮೈಸೂರು ಘಟಕ ಅಧ್ಯಕ್ಷ ಪೊಂಜಾಂಡ ಎ.ಗಣಪತಿ, ಸಂಘಟಕರಾದ ಪಟ್ಟಡ ದೇವಯ್ಯ, ನೆರವಂಡ ಮುತ್ತಪ್ಪ, ಕಡೆಮಾಡ ಬೆಳ್ಳಿಯಪ್ಪ, ಪಟ್ಟಮಾಡ ಚೇರ್ಮಣ್ಣ, ಉಪಾಧ್ಯಕ್ಷೆ ಪಂದ್ಯಂಡ ಪದ್ಮಾ ಬೋಪಯ್ಯ,ಕಾವೇರಿ ಕೊಡವ ಅಸೋಸಿಯೇಷನ್ ಮೈಸೂರು ಪೂರ್ವ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ: ಬೆಳ್ಳಿ ಹಬ್ಬದ ಅಂಗವಾಗಿ ಬೆಳಗಿನಿಂದ ಸಂಜೆವರೆಗೂ ಕೊಡವ ಸಾಂಪ್ರದಾಯಿಕ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಘಟನೆ ನಡೆದು ಬಂದ ಹಾದಿ ಕುರಿತು ಕಿರುಚಿತ್ರ ಪ್ರದರ್ಶಿಸಲಾಯಿತು. ವಿವಿಧ ಸಾಂಪ್ರದಾಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಂಘದ ಸದಸ್ಯರು ಭಾಗಿಯಾಗಿ ಕೊಡವ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸಿದರು. ಉತ್ತಮ ಪ್ರದರ್ಶನಕ್ಕೆ ಬಹುಮಾನ ವಿತರಿಸಲಾಯಿತು.