ಮಹಿಳಾ ದಿನಾಚರಣೆ ಅಂಗವಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮೈಸೂರು ಕೇಂದ್ರದಿಂದ ಆಯೋಜಿಸಿದ್ದ ‘ಅಭಿವ್ಯಕ್ತಿ ಸಂಹಿತೆ’ ಕಾರ್ಯಕ್ರಮದಲ್ಲಿ ಎಂ.ಕೆ.ಸವಿತಾ, ಡಾ.ಸಂಧ್ಯಾ ಆರ್.ಅನ್ವೇಕರ್, ಡಾ.ಎಚ್.ಎಂ.ನಂಜುಂಡಸ್ವಾಮಿ, ಡಾ.ಆರ್.ಪುಷ್ಪಲತಾ, ಪಿ.ಪ್ರಕೃತಿ, ಶ್ರೀದೇವಿ ಇದ್ದರು. 
ಮೈಸೂರು

ತಂತ್ರಜ್ಞಾನದ ಜತೆಗೆ ಭಾಷೆಗಳ ಜ್ಞಾನ ಅಗತ್ಯ: ಕುಲಸಚಿವೆ ಎಂ.ಕೆ. ಸವಿತಾ ಹೇಳಿಕೆ

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ಸ್ಪರ್ಧಾತ್ಮಕ ಯುಗವಾಗಿರುವುದರಿಂದ ತಂತ್ರಜ್ಞಾನದ ಜತೆಗೆ ವಿವಿಧ ಭಾಷೆಯ ಜ್ಞಾನವೂ ಅತ್ಯಗತ್ಯ
  • ವಿದ್ಯಾರ್ಥಿಗಳು ತಮ್ಮ ಪಾಲಕರ ಕನಸನ್ನು ನನಸು ಮಾಡಲು ಪ್ರಾಮಾಣಿಕವಾಗಿ ಶ್ರಮವಹಿಸಬೇಕು
ಮೈಸೂರು:ಪ್ರಸ್ತುತ ಸ್ಪರ್ಧಾತ್ಮಕ ಯುಗವಾಗಿರುವುದರಿಂದ ತಂತ್ರಜ್ಞಾನದ ಜತೆಗೆ ವಿವಿಧ ಭಾಷೆಯ ಜ್ಞಾನವೂ ಅತ್ಯಗತ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ. ಸವಿತಾ ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮೈಸೂರು ಕೇಂದ್ರದಿಂದ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಅಭಿವ್ಯಕ್ತಿ ಸಂಹಿತೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಪ್ರಸ್ತುತ ಸ್ಪರ್ಧಾತ್ಮಕ ಯುಗವಾಗಿರುವುದರಿಂದ ತಂತ್ರಜ್ಞಾನದ ಜತೆಗೆ ವಿವಿಧ ಭಾಷೆಯ ಜ್ಞಾನವೂ ಅತ್ಯಗತ್ಯ. ಆದ್ದರಿಂದ ಮಾತೃ ಭಾಷೆಯ ಜತೆಗೆ ಇಂಗ್ಲಿಷ್ ಕಲಿಯುವುದು ಇಂದು ಅವಶ್ಯಕವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಪಾಲಕರ ಕನಸನ್ನು ನನಸು ಮಾಡಲು ಪ್ರಾಮಾಣಿಕವಾಗಿ ಶ್ರಮವಹಿಸಬೇಕು. ಪಾಲಕರು ಹಲವಾರು ಕನಸು ಹೊತ್ತು ತಮ್ಮ ಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಸೇರಿಸುತ್ತಾರೆ. ಆದರೆ, ಮಕ್ಕಳು ದುಶ್ಚಟಗಳಿಗೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗಾಗಿ, ಯಾವುದೇ ಕೆಲಸ ಮಾಡುವ ಮೊದಲು ಒಮ್ಮೆ ತಮ್ಮ ತಂದೆ-ತಾಯಿಯ ಶ್ರಮ, ಕನಸನ್ನು ನೆನಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಟಿಯು ಮಹಿಳಾ ಘಟಕ ಸಂಯೋಜಕಿ ಡಾ.ಸಂಧ್ಯಾ ಆರ್.ಅನ್ವೇಕರ್ ಮಾತನಾಡಿ, ಪುರುಷರು-ಮಹಿಳೆಯರು ಎಂಬ ತಾರತಮ್ಯವಿಲ್ಲ. ಎಲ್ಲ ವಲಯದಲ್ಲೂ ಪುರುಷರಿಗೆ ಸಮಾನವಾಗಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ಯಾವುದೇ ಕ್ಷೇತ್ರವಿರಲಿ ಮಹಿಳೆಯರು ಹಿಂಜರಿಯದೆ ಧೈರ್ಯದಿಂದ ಮುನ್ನುಗ್ಗಬೇಕು. ಆಗ ಮಾತ್ರ ಯಶಸ್ಸು ಸಾಧ್ಯ. ವಿದ್ಯಾರ್ಥಿನಿಯರು ಕ್ರೀಡೆ, ಸಾಂಸ್ಕೃತಿಕ ಜತೆಗೆ ರಾಜಕೀಯ ಕ್ಷೇತ್ರದಲ್ಲೂ ಆಸಕ್ತಿ ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಮಹಿಳೆಯರಿಗಾಗಿ ಆಯೋಜಿಸಿದ್ದ ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಟಿಯು ಮೈಸೂರು ಪ್ರಾದೇಶಿಕ ಕೇಂದ್ರ ನಿರ್ದೇಶಕ ಡಾ.ಎಚ್.ಎಂ.ನಂಜುಂಡಸ್ವಾಮಿ, ವಿಟಿಯು ಮೈಸೂರು ಕೇಂದ್ರ ಮಹಿಳಾ ಘಟಕ ಸಂಯೋಜಕಿ ಡಾ.ಆರ್.ಪುಷ್ಪಲತಾ, ವಿಟಿಯು ಸಿಒಇ ವಿಶೇಷಾಧಿಕಾರಿ ಪಿ.ಪ್ರಕೃತಿ, ಸ್ಥಳ ನಿಯೋಜನಾಧಿಕಾರಿ ಶ್ರೀದೇವಿ ಇದ್ದರು.