ನಗರದಲ್ಲಿ ಬುಧವಾರ ಆಯೋಜಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಜನ್ಮ ದಿನ ಪ್ರಯುಕ್ತ ಅವರ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.ಪ್ರತಾಪ್ ಸಿಂಹ, ಎಲ್.ನಾಗೇಂದ್ರ, ಎಂ.ಜೆ.ರವಿಕುಮಾರ್, ಸುಬ್ಬಣ್ಣ, ಪ್ರಮೀಳಾ ಭರತ್, ಪೊಂಜಾಂಡ ಎ.ಗಣಪತಿ, ಮುಕ್ಕಾಟಿರ ಸಿ.ಅಶೋಕ್, ನಾಯಕಂಡ ತಿಮ್ಮಯ್ಯ ಇತರರಿದ್ದರು. 
ಮೈಸೂರು

ಕೆ.ಎಂ.ಕಾರ್ಯಪ್ಪ ದೇಶಕ್ಕೆ ನೀಡಿರುವ ಸೇವೆ ಅನನ್ಯ

ಮೈಸೂರು: ಕೊಡವ ಸಮಾಜ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅಭಿಮಾನಿ ಬಳಗದಿಂದ ವತಿಯಿಂದ ಬುಧವಾರ ನಗರದ ಕಾರ್ಯಪ್ಪ ವೃತ್ತದಲ್ಲಿ ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನ ಆಚರಿಸಲಾಯಿತು.
ಕೆ.ಎಂ.ಕಾರ್ಯಪ್ಪ ಅವರ ಪ್ರತಿಮೆಗೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ದೇಶಕ್ಕೆ ನೀಡಿರುವ ಸೇವೆಯನ್ನು ಸೂರ್ಯ, ಚಂದ್ರ ಇರುವವರೆಗೂ ಪ್ರತಿಯೊಬ್ಬರು ನೆನಪಿಸಿಕೊಳ್ಳಬೇಕು. ಈ ದೇಶಕ್ಕೆ ಕೊಡಗಿನ ಕೊಡುಗೆಯೂ ಅಪಾರ. ಕೊಡಗಿನ ಪರಂಪರೆಯಂತಹ ದೇಶ ಪ್ರೇಮಿಗಳು, ವೀರರು ಮತ್ತೆಲ್ಲೂ ಹುಟ್ಟಲು ಸಾಧ್ಯವಿಲ್ಲ. ದೇಶಭಕ್ತಿ ಅವರಲ್ಲಿ ಪಾರಂಪರಿಕವಾಗಿ ಬೆಳೆದು ಬಂದಿದೆ. ಕೊಡವ ಸಮಾಜ ಸಣ್ಣ ಸಮುದಾಯವಾದರೂ ಸೈನ್ಯಕ್ಕೆ ಅವರ ಸೇವೆ ದೊಡ್ಡದು ಎಂದು ಬಣ್ಣಿಸಿದರು.
ಇಂತಹ ಪರಂಪರೆಯಲ್ಲಿ ಹುಟ್ಟಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಸ್ಮರಣೆ ಈ ನಾಡಿಗೆ ದೊರೆತಿರುವ ಸೌಭಾಗ್ಯ. ಅವರ ಸೇವೆ ಇಡೀ ಜಗತ್ತಿಗೆ ಮಾದರಿ. ಅವರಿಗೆ ಭಾರತರತ್ನ ದೊರೆಯದೆ ಇರಬಹುದು. ಆದರೆ, ಭಾರತ ಸೈನ್ಯದ ಅತ್ಯುನ್ನತ ಪದವಿ ಫೀಲ್ಡ್ ಮಾರ್ಷಲ್ ಹುದ್ದೆ ದೊರಕಿದೆ. ಇದು ಕೊಡವ ಸಮಾಜ ಮಾತ್ರವಲ್ಲದೇ, ಕನ್ನಡ ನಾಡು ಹೆಮ್ಮೆಪಡುವಂತಹದ್ದು ಎಂದರು.
ಇವತ್ತಿಗೂ ಭಾರತೀಯ ಸೈನ್ಯದಲ್ಲಿ 30ಕ್ಕೂ ಹೆಚ್ಚು ಲೆಫ್ಟಿನೆಂಟ್ ಕರ್ನಲ್‌ಗಳು ಹಾಗೂ ಭಾರತದ ಹಾಕಿ ಕ್ರೀಡೆಗೆ ಹೆಚ್ಚು ಆಟಗಾರರನ್ನು ಕೊಡವ ಸಮುದಾಯ ನೀಡಿದೆ ಎಂದರು.
ಮಾಜಿ ಶಾಸಕ ಎಲ್.ನಾಗೇಂದ್ರ ಮಾತನಾಡಿದರು. ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ಪಾಲಿಕೆ ಮಾಜಿ ಸದಸ್ಯರಾದ ಮಾಳೇಟಿರ ಸುಬ್ಬಣ್ಣ, ಪ್ರಮೀಳಾ ಭರತ್, ಮೈಸೂರು ಕೊಡವ ಸಮಾಜ ಅಧ್ಯಕ್ಷ ಪೊಂಜಾಂಡ ಎ.ಗಣಪತಿ, ಮೈಸೂರು ಕೊಡವ ಸಮಾಜ ಸಾಂಸ್ಕೃತಿಕ ಮತ್ತು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮುಕ್ಕಾಟಿರ ಸಿ.ಅಶೋಕ್, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಅಭಿಮಾನಿ ಬಳಗದ ಅಧ್ಯಕ್ಷ ನಾಯಕಂಡ ತಿಮ್ಮಯ್ಯ ಇತರರಿದ್ದರು.