ಆದಿವಾಸಿ ಕುಟುಂಬದ ಸದಸ್ಯರು 
ಮೈಸೂರು

4 ತಿಂಗಳಿಂದ ಬಾರದ ಪೌಷ್ಟಿಕ ಆಹಾರ ಕಿಟ್

ಎ. ಆರ್. ರಘುರಾಮ
ದೊಡ್ಡಸಿದ್ದು ಹಾದನೂರು ಎಚ್.ಡಿ.ಕೋಟೆ
ಆದಿವಾಸಿಗಳಿಗೆ ಉಚಿತವಾಗಿ ನೀಡುತ್ತಿದ್ದ ಪೌಷ್ಟಿಕ ಆಹಾರದ ಕಿಟ್‌ಅನ್ನು ಕಳೆದ 4 ತಿಂಗಳಿನಿಂದ ವಿತರಣೆ ಮಾಡದಿರುವುದರಿಂದ ಹಲವು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ರಾಜ್ಯ ಸರ್ಕಾರವು ವಿಶೇಷವಾಗಿ ದುರ್ಬಲ ಬುಡಕಟ್ಟು ಜನಾಂಗಗಳ (ಪಿವಿಟಿಜಿ) ಅಭಿವೃದ್ಧಿಗಾಗಿ ವಿತರಿಸುತ್ತಿರುವ ಪೌಷ್ಟಿಕ ಆಹಾರ ಕಿಟ್‌ಗಳು ಕಳೆದ ಮೂರು ತಿಂಗಳಿನಿಂದ ಪೂರೈಕೆಯಾಗದ ಹಿನ್ನೆಲೆಯಲ್ಲಿ ಎಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕಿನ ಜೇನು ಕುರುಬ, ಕಾಡುಕುರುಬ ಮತ್ತು ಬೆಟ್ಟಕುರುಬ ಸಮುದಾಯಗಳ ನೂರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.
ಅವಳಿ ತಾಲೂಕಿನಿಂದ ಒಟ್ಟು 118 ವಿವಿಧ ಹಾಡಿಗಳು ಸೇರಿದಂತೆ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ 6,749 ಬುಡಕಟ್ಟು ಕುಟುಂಬಗಳು ಸಾಮಾನ್ಯವಾಗಿ ಕೃಷಿ ಕೂಲಿ ಕೆಲಸ ಹಾಗೂ ಅರಣ್ಯ ಉತ್ಪನ್ನಗಳ ಸಂಗ್ರಹಣೆಯನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿವೆ. ಆದರೆ ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗದ ಕಾರಣ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿಲ್ಲ. ಇದರಿಂದ ಕೂಲಿ ಕೆಲಸಗಳೂ ಕಡಿಮೆಯಾಗಿವೆ. ಆದಿವಾಸಿ ಕುಟುಂಬಗಳಿಗೆ ಆದಾಯದ ಮೂಲವೇ ಕುಂಠಿತವಾಗಿದೆ.
ಕಳೆದ ವರ್ಷಗಳಲ್ಲಿ ಇದೇ ಅವಧಿಯಲ್ಲಿ ರೈತರ ಜಮೀನುಗಳಲ್ಲಿ ನಾಟಿ, ಗದ್ದೆ ಸಿದ್ಧತೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಲ್ಲಿ ಆದಿವಾಸಿಗಳು ಕೂಲಿಗೆ ತೆರಳುತ್ತಿದ್ದರು. ಆದರೆ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಈ ಬಾರಿ ಮಂದಗತಿಯಾಗಿದೆ. ಬಹುತೇಕ ರೈತರು ಕೂಲಿಕಾರರನ್ನು ಕೆಲಸಕ್ಕೆ ಕರೆಯುತ್ತಿಲ್ಲ. ಇದರಿಂದ ಅನೇಕ ಕುಟುಂಬಗಳು ಸರ್ಕಾರ ವಿತರಿಸುವ ಪೌಷ್ಟಿಕ ಆಹಾರ ಕಿಟ್‌ಗಳನ್ನೇ ಪ್ರಮುಖ ಆಧಾರವಾಗಿ ನಂಬಿಕೊಂಡಿವೆ. ಇದೀಗ ಆ ಕಿಟ್‌ಗಳೂ ಲಭ್ಯವಾಗದಿರುವುದು ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.
*
ಫೆಬ್ರುವರಿಯಿಂದ ಸರಬರಾಜಿಲ್ಲ
ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ (ಐಟಿಡಿಪಿ) ಇಲಾಖೆಯ ಮೂಲಕ ಸರ್ಕಾರ ಪ್ರತಿ ತಿಂಗಳು ಪೌಷ್ಟಿಕ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ಫಲಾನುಭವಿಗಳಿಗೆ ವಿತರಿಸುತ್ತಿದೆ. ಆದರೆ ಫೆಬ್ರುವರಿ ತಿಂಗಳ ನಂತರ ಕಿಟ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಅನೇಕ ಕುಟುಂಬಗಳು ಕಳೆದ 4 ತಿಂಗಳಿನಿಂದ ಕಿಟ್‌ಗಾಗಿ ಕಾಯುತ್ತಿವೆ. ಕಿಟ್ ಯಾವಾಗ ಸಿಗಲಿದೆ ಎಂಬ ಪ್ರಶ್ನೆಯೊಂದಿಗೆ ಫಲಾನುಭವಿಗಳು ಸಂಬಂಧಿಸಿದ ಕಚೇರಿಗಳಿಗೆ ಭೇಟಿ ನೀಡಿ ಗೋಳು ಹೇಳಿಕೊಳ್ಳುತ್ತಿವೆ. ತಾಲೂಕಿನ ಅರಣ್ಯ ಪ್ರದೇಶಗಳಲ್ಲಿರುವ ಜೇನುಕುರುಬ, ಕಾಡು ಕುರುಬ ಹಾಗೂ ಬೆಟ್ಟ ಕುರುಬ ಸಮುದಾಯದ 6,749 ಕುಟುಂಬಗಳು ಸೇರಿದಂತೆ ಜಿಲ್ಲೆಯಲ್ಲಿ 12,874 ಕುಟುಂಬಗಳು ಆರ್ಥಿಕವಾಗಿ ಹಿಂದುಳಿದಿವೆ. ದಿನನಿತ್ಯದ ಆಹಾರ ಭದ್ರತೆಗಾಗಿ ಸರ್ಕಾರದ ನೆರವಿನ ಯೋಜನೆಗಳನ್ನು ಅವಲಂಬಿಸಿವೆ. ವಿಶೇಷವಾಗಿ ವಯೋವೃದ್ಧರು, ವಿಧವೆಯರು ಹಾಗೂ ದುಡಿಯಲು ಸಾಧ್ಯವಾಗದವರು ಈ ಕಿಟ್‌ಗಳಿಂದಲೇ ಹೆಚ್ಚಿನ ನೆರವು ಪಡೆಯುತ್ತಿದ್ದರು. ಇದೀಗ 3- 4 ತಿಂಗಳಿನಿಂದ ಕಿಟ್ ದೊರೆಯದಿರುವುದರಿಂದ ಕುಟುಂಬಗಳ ಪೌಷ್ಟಿಕ ಆಹಾರದ ಲಭ್ಯತೆ ಮೇಲೆಯೂ ಪರಿಣಾಮ ಬೀರಿದೆ.
ಏನೇನು ಇರುತ್ತದೆ ?
ಪ್ರತಿ ಕುಟುಂಬಕ್ಕೆ ವಿತರಿಸಲಾಗುವ ಕಿಟ್‌ನಲ್ಲಿ 14 ಕೆ.ಜಿ. ಅಕ್ಕಿ ಅಥವಾ ರಾಗಿ, 3 ಕೆ.ಜಿ. ತೊಗರಿಬೇಳೆ, 2 ಕೆ.ಜಿ. ಅಲಸಂದೆ, ಹುರುಳಿ ಕಾಳು, 1 ಕೆ.ಜಿ. ಕಡಲೇ ಬೀಜ, ಕಡಲೆಕಾಳು, ಹೆಸರುಕಾಳು, ಸಕ್ಕರೆ, ಬೆಲ್ಲ, 30 ಮೊಟ್ಟೆಗಳು, 2 ಲೀಟರ್ ರಿಫೈನ್ಡ್ ಸೂರ್ಯಕಾಂತಿ ಎಣ್ಣೆ ಹಾಗೂ ಅರ್ಧ ಕೆ.ಜಿ. ತುಪ್ಪ ಒಳಗೊಂಡಿರುತ್ತದೆ. ಈ ಪೌಷ್ಟಿಕ ಆಹಾರ ಪದಾರ್ಥಗಳು ಬುಡಕಟ್ಟು ಕುಟುಂಬಗಳ ಆರೋಗ್ಯ ಮತ್ತು ಆಹಾರ ಭದ್ರತೆಗೆ ಪ್ರಮುಖ ಸಹಕಾರಿಯಾಗಿವೆ.
ರಾಜ್ಯದ ವಿವಿಧ ಜಿಲ್ಲೆಗಳ ಜೇನುಕುರುಬ, ಕಾಡುಕುರುಬ, ಬೆಟ್ಟಕುರುಬ, ಹಸಲರು, ಗೊಂಡ ಸೇರಿದಂತೆ ನಿಗದಿತ ಬುಡಕಟ್ಟು ಸಮುದಾಯಗಳಿಗೆ 2008ರಿಂದ ಈ ಯೋಜನೆಯಡಿ ಆಹಾರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಆರಂಭದಲ್ಲಿ ವರ್ಷದಲ್ಲಿ ಆರು ತಿಂಗಳು ಮಾತ್ರ ಕಿಟ್ ವಿತರಿಸಲಾಗುತ್ತಿತ್ತು. ನಂತರ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿ ವರ್ಷಪೂರ್ತಿ ಕಿಟ್ ವಿತರಣೆ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗಿತ್ತು.
ಮುಖಂಡರ ಒತ್ತಾಯ:
ಆದಿವಾಸಿ ಸಮುದಾಯದಲ್ಲಿ ಬಹುತೇಕ ಕುಟುಂಬಗಳು ಬಡತನದಲ್ಲಿವೆ. ಮಳೆ ಇಲ್ಲದ ಕಾರಣ ಕೂಲಿ ಕೆಲಸವೂ ಸಿಗುತ್ತಿಲ್ಲ. ಹಲವರು ಸರ್ಕಾರದ ಕಿಟ್‌ಗಳನ್ನೇ ಅವಲಂಬಿಸಿದ್ದಾರೆ. ಫೆಬ್ರುವರಿ ತಿಂಗಳ ಕಿಟ್ ಮಾರ್ಚ್‌ನಲ್ಲಿ ದೊರೆತಿದ್ದು, ಅದರ ನಂತರ ಯಾವುದೇ ಕಿಟ್ ಬಂದಿಲ್ಲ. ಪ್ರತಿದಿನ ಜನರು ಕಿಟ್ ಬಗ್ಗೆ ವಿಚಾರಿಸುತ್ತಿದ್ದಾರೆ. ಸರ್ಕಾರ ಶೀಘ್ರವಾಗಿ ಸಮಸ್ಯೆ ಬಗೆಹರಿಸಿ ಬಾಕಿ ಉಳಿದಿರುವ ಕಿಟ್‌ಗಳನ್ನು ವಿತರಿಸಬೇಕು ಎಂದು ಆದಿವಾಸಿ ಮುಖಂಡರು ಒತ್ತಾಯಿಸಿದ್ದಾರೆ.
*
ಟೆಂಡರ್ ಅವಧಿ ಮುಕ್ತಾಯ
ರಾಜ್ಯ ಮಟ್ಟದಲ್ಲಿ ಆಹಾರ ಸಾಮಗ್ರಿಗಳ ಪೂರೈಕೆ ಮಾಡುತ್ತಿದ್ದ ಗುತ್ತಿಗೆದಾರರ ಟೆಂಡರ್ ಅವಧಿ ಮುಕ್ತಾಯಗೊಂಡಿರುವುದರಿಂದ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಿಟ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ, ಆಹಾರ ಸಾಮಗ್ರಿಗಳ ಪೂರೈಕೆಗೆ ಸಂಬಂಧಿಸಿದಂತೆ ಜೂನ್ 17ರಂದು ರಾಜ್ಯ ಮಟ್ಟದಲ್ಲಿ ಮರು ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಜುಲೈ 1 ಟೆಂಡರ್ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಿಟ್ ವಿತರಣೆ ಮರು ಆರಂಭವಾಗುವ ನಿರೀಕ್ಷೆ ಇದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ತಿಳಿಸಿದೆ.
ಕೋಟ್:
ಈ ಹಿಂದೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡುತ್ತಿದ್ದ ಗುತ್ತಿಗೆದಾರ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದ ಕಾರಣ ಹೊಸದಾಗಿ ಪೌಷ್ಟಿಕ ಆಹಾರ ಕಿಟ್ ವಿತರಣೆ ಟೆಂಡರ್ ಕರೆಯಲು ವಿಳಂಬ ವಾಗಿದೆ. ಈಗ ನ್ಯಾಯಾಲಯದ ತಡೆಯಾಜ್ಞೆ ತೆರವಾಗಿದೆ. ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಆದಷ್ಟು ಬೇಗ ಆದಿವಾಸಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಲು ಕ್ರಮ ವಹಿಸಲಾಗುತ್ತದೆ.
ಅರುಣಪ್ರಭು
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮೈಸೂರು
*
ರಾಜ್ಯದಲ್ಲಿ ಪೌಷ್ಟಿಕ ಆಹಾರ ಕಿಟ್ ವಿತರಣೆ ಟೆಂಡರ್ ಪ್ರಕ್ರಿಯೆಯನ್ನು ಜಿಲ್ಲಾವಾರು ನೀಡಬೇಕು. ಆಗ ಮಾತ್ರ ಈ ಸಮಸ್ಯೆ ಬಗೆಹರಿಯಲು ಸಾಧ್ಯ, ರಾಜ್ಯ ವ್ಯಾಪಿ ಏಕವ್ಯಕ್ತಿಗೆ ಟೆಂಡರ್ ನೀಡಿದರೆ ಈ ರೀತಿಯ ಸಮಸ್ಯೆಗಳು ಆಗಾಗ್ಗೆ ಎದುರಾಗಲಿವೆ. ಇದರಿಂದ ನೂರಾರು ಆದಿವಾಸಿ ಕುಟುಂಬಗಳಿಗೆ ತೊಂದರೆಯಾಗುತ್ತದೆ.
ಪುಟ್ಟಬಸವ
ಆದಿವಾಸಿ ಮುಖಂಡ