ಮುಕ್ತ ಗಂಗೋತ್ರಿ ಆವರಣದಲ್ಲಿ ಆಯೋಜಿಸಿರುವ ಕಿಸಾನ್ ಸ್ವರಾಜ್ ಸಮ್ಮೇಳನವನ್ನು ಶುಕ್ರವಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಉದ್ಘಾಟಿಸಿದರು. ವಿಶಾಲಾಕ್ಷನ್, ರಾಘವ ಐಕಾಂತಿಕ, ಬೀಬಿ ಜಾನ್, ಪ್ರೊ.ಎಸ್.ಕೆ.ನವೀನ್ ಕುಮಾರ್ ಹಾಗೂ ಇತರರು ಇದ್ದರು.
ಮೈಸೂರು: ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿ ಕೂಟ (ಆಶಾ) ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗ ವತಿಯಿಂದ ಮುಕ್ತ ಗಂಗೋತ್ರಿ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಕಿಸಾನ್ ಸ್ವರಾಜ್ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ದೊರೆ ಯಿತು.
ಮೇಳಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ದೊರೆತ ಸಂದರ್ಭ ಆಹಾರಕ್ಕೆ ಪರದಾಡುವ ಪರಿಸ್ಥಿತಿ ಇತ್ತು. ದೇಶದ ಜನರ ಹಸಿವು ನೀಗಿಸಲು ಹಸಿರು ಕ್ರಾಂತಿ ಪ್ರಾರಂಭಿಸಲಾ ಯಿತು. ಹಸಿರು ಕ್ರಾಂತಿಯಿಂದ ಹಸಿವು ನೀಗಿದರೂ ಕೃಷಿಗೆ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳ ಬಳಕೆಯಿಂದ ಜನರ ಆರೋಗ್ಯದ ಮೇಲೂ ಪರಿಣಾಮಗಳು ಬೀರಲು ಪ್ರಾರಂಭವಾಗಿದೆ. ಹಾಗಾಗಿ ಜನರ ಆರೋಗ್ಯ ಕಾಪಾಡಲು ಕೃಷಿಕರು ಸಾವಯವ ಕೃಷಿಯತ್ತ ಮುಖ ಮಾಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ರೈತರು ಕೃಷಿ ಚಟುವಟಿಕೆ ಕೈಗೊಳ್ಳದೆ ಇದ್ದರೆ ಜನರು ಬದುಕುಳಿಯಲು ಸಾಧ್ಯವಿಲ್ಲ. ಹಾಗಾಗಿ ಕೃಷಿ ಚಟುವಟಿಕೆಗಳಿಗೆ ಸರ್ಕಾರದ ಉತ್ತೇಜನ ಅಗತ್ಯವಿದೆ. ರೈತರ ಕಷ್ಟಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಸರ್ಕಾರ ರೈತರಿಗೆ ಅಗತ್ಯ ಬೆಂಬಲ ಬೆಲೆ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕು. ರೈತರ ಸಮಸ್ಯೆಗಳನ್ನು ತಳಮಟ್ಟದಿಂದ ಅಧ್ಯಯನ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಕೇರಳ ಜೈವ ಕರ್ಷಕ ಸಮಿತಿ ಅಧ್ಯಕ್ಷ ವಿಶಾಲಾಕ್ಷನ್ ಮಾತನಾಡಿ, ಕೃಷಿ ವಿಚಾರದಲ್ಲಿ ಸರ್ಕಾರದ ನೀತಿಗಳು ಪಾರದರ್ಶಕವಾಗಿಲ್ಲ. ಕೃಷಿಗೆ ಪೂರಕವಾದ ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವ ಸಂದರ್ಭ ಸರ್ಕಾರಗಳು ರೈತರು ಹಾಗೂ ರೈತ ಮುಖಂಡರಿಂದ ಅಭಿಪ್ರಾಯಗಳನ್ನು ಪಡೆಯುತ್ತಿಲ್ಲ. ಬೀಜ ಕಾಯ್ದೆ, ಯುಎಸ್ ಜತೆಗಿನ ವ್ಯಾಪಾರ ಒಪ್ಪಂದ ಸೇರಿದಂತೆ ವಿವಿಧ ಕೃಷಿ ವಿಚಾರಗಳ ಕುರಿತು ಪ್ರಮುಖ ನಿರ್ಣಗಳನ್ನು ಕೈಗೊಳ್ಳುವ ಸಂದರ್ಭ ರೈತರನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಸ್.ಕೆ.ನವೀನ್ ಕುಮಾರ್, ಪರೀಕ್ಷಾಂಗ ಕುಲಸಚಿವ ಸಿ.ಎಸ್.ಅನಂತ ಕುಮಾರ್, ಅಧ್ಯಯನ ಕೇಂದ್ರದ ಡೀನ್ ಎನ್.ಆರ್.ಚಂದ್ರೇಗೌಡ, ಶೈಕ್ಷಣಿಕ ಡೀನ್ ಪ್ರೊ. ಎಂ. ರಾಮನಾಥ ನಾಯ್ಡು, ಹಣಕಾಸು ಅಧಿಕಾರಿ ನಿರಂಜನ್ ರಾಜ್, ಪ್ರಸಾರಾಂಗ ನಿರ್ದೇಶಕ ಡಾ.ಆರ್. ಸಂತೋಷ್ ನಾಯಕ್, ಆಶಾ ಸಂಸ್ಥೆಯ ಪ್ರತಿನಿಧಿ ಕಪಿಲ್ ಷಾ, ಸುಸ್ಥಿರ ಕೃಷಿ ಕೇಂದ್ರದ ಡಾ.ಜಿ.ವಿ. ರಾಮಾಂಜನೇಯಲು, ನೈಸರ್ಗಿಕ ಕೃಷಿಕ ರಾಘವ ಐಕಾಂತಿಕ, ಬೀಬಿ ಫಾತಿಮ ಮಹಿಳಾ ಸ್ವ ಸಹಾಯ ಸಂಘದ ಬೀಬಿ ಜಾನ್ ಇದ್ದರು.