ವಿಶ್ವ ಹಾವುಗಳ ದಿನದ ಅಂಗವಾಗಿ ಉರಗ ತಜ್ಞ ಸ್ನೇಕ್ ಶ್ಯಾಮ್ ಅವರನ್ನು ಅಭಿನಂದಿಸಲಾಯಿತು. ಡಾ.ಲಿಂಗರಾಜು, ಶಿವಕುಮಾರ್, ಬಸವರಾಜ್ ಬಸಪ್ಪ, ಜಿ.ರಾಘವೇಂದ್ರ, ವಿಕ್ರಂ ಅಯ್ಯಂಗಾರ್, ಎಸ್.ಎನ್.ರಾಜೇಶ್, ಸಂದೇಶ್, ಪ್ರಮೋದ್ ಗೌಡ, ವಾಣಿಶ್ ಇದ್ದರು.
- ಉರಗ ತಜ್ಞ ಸ್ನೇಕ್ ಶ್ಯಾಮ್ ಬೇಸರ ಅಭಿನಂದನಾ ಸಮಾರಂಭ
ಹಾವುಗಳ ಬಗ್ಗೆ ಇರುವ ಅನಗತ್ಯ ಭಯದಿಂದಲೇ ಅವುಗಳನ್ನು ಕೊಲ್ಲಲಾಗುತ್ತಿದೆ. ಎಲ್ಲ ಹಾವುಗಳೂ ವಿಷಕಾರಿಯಲ್ಲ ಎಂದು ಉರಗ ತಜ್ಞ ಸ್ನೇಕ್ ಶ್ಯಾಮ್ ತಿಳಿಸಿದರು.
ನಗರದ ಆರ್‌ಟಿಒ ಸಮೀಪ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಾಗೂ ಪರಿಸರ ಸ್ನೇಹಿ ತಂಡದ ಆಶ್ರಯದಲ್ಲಿ ವಿಶ್ವ ಹಾವುಗಳ ದಿನದ ಅಂಗವಾಗಿ ಗುರುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅರಣ್ಯ ಇಲಾಖೆ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಗೆ ಕೈಗೊಳ್ಳುತ್ತಿರುವ ಕಾರ್ಯಗಳಿಗೆ ಸಾರ್ವಜನಿಕರು ಸಹಕರಿಸಬೇಕು. ನಾಗರಹಾವು ಮತ್ತು ಕಾಳಿಂಗ ಸರ್ಪ ವಿಷಕಾರಿಯಾಗಿದ್ದು, ಹಪ್ಪಟೆ, ಕೇರೆಹಾವು ಹಾಗೂ ಹಸಿರು ಹಾವು ಸೇರಿದಂತೆ ಹಲವು ಹಾವುಗಳು ವಿಷಕಾರಿಯಲ್ಲ. ಹಾವು ಕಚ್ಚಿದರೆ ಯಾವುದೇ ಮೂಢನಂಬಿಕೆಗಳಿಗೆ ಒಳಗಾಗದೆ ತಕ್ಷಣ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಡಾ.ಲಿಂಗರಾಜು ಮಾತನಾಡಿ, ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ಪರಿಸರ ಸಂರಕ್ಷಣೆಗೆ ಸ್ನೇಕ್ ಶ್ಯಾಮ್ ನೀಡಿರುವ ಸೇವೆ ಶ್ಲಾಘನೀಯ. 98 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಿಸಿರುವ ಅವರ ಸಾಧನೆ ಅಪರೂಪದ್ದು. ಅವರ ಪರಿಸರ ಸೇವೆಯನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಅಳವಡಿಸಿ ಮಕ್ಕಳಲ್ಲಿ ಉರಗ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.
ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಕುಮಾರ್, ಕೆಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಜಿ. ರಾಘವೇಂದ್ರ, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಎಸ್.ಎನ್. ರಾಜೇಶ್, ಸಂದೇಶ್, ಪ್ರಮೋದ್ ಗೌಡ, ವಾಣಿಶ್ ಇದ್ದರು.