ಮಹಿಳೆಯರ ರಾಜ್ಯ ಮಟ್ಟದ ಸೀನಿಯರ್ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ಚಾಮರಾಜನಗರ ತಂಡ. 
ಮೈಸೂರು

ಖೋ-ಖೋ ಚಾಂಪಿಯನ್‌ಶಿಪ್ : ಚಾಮರಾಜನಗರ ಚಾಂಪಿಯನ್

ಮೈಸೂರು: ಕರ್ನಾಟಕ ಅಮೆಚೂರ್ ಖೋ ಖೋ ಅಸೋಸಿಯೇಷನ್, ಜಿಲ್ಲಾ ಅಮೆಚೂರ್ ಖೋ ಖೋ ಅಸೋಸಿಯೇಷನ್‌ಹಾಗೂ ಹರಿ ವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮಹಿಳೆಯರ ಸೀನಿಯರ್ ಖೋ ಖೋ ಪಂದ್ಯಾವಳಿಯಲ್ಲಿ ಚಾಮರಾಜನಗರ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಫೈನಲ್ ಪಂದ್ಯದಲ್ಲಿ ಚಾಮರಾಜನಗರ ತಂಡವು ಬೆಂಗಳೂರು ತಂಡದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ ಭರ್ಜರಿ ಗೆಲುವು ಾಧಿಸಿತು. ಮೈಸೂರು ಹಾಗೂ ಹಾವೇರಿ ತಂಡಗಳು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.
ಚಾಮರಾಜನಗರ ತಂಡದ ಪ್ರೀತಿ ಅತ್ಯುತ್ತಮ ಡಿಫೆಂಡರ್, ಬೆಂಗಳೂರಿನ ಭವಾನಿ ಅತ್ಯುತ್ತಮ ಅಟ್ಯಾಕರ್ ಹಾಗೂ ಚಾಮರಾಜನಗರದ ನದಿಯಾ ಅತ್ಯುತ್ತಮ ಆಲ್‌ರೌಂಡರ್ ಪ್ರಶಸ್ತಿ ಪಡೆದರು.
ಮಾಜಿ ಮೇಯರ್ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತ ದಿ.ಎನ್.ಪ್ರಕಾಶ್ ಸ್ಮರಣಾರ್ಥ ಪಂದ್ಯಾವಳಿ ಆಯೋಜಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ರಾಷ್ಟ್ರ ಮಟ್ಟದ ಹಿರಿಯ ಖೋ ಖೋ ಆಟಗಾರ್ತಿ ಆರ್. ಭವ್ಯಶ್ರೀ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ವಿದ್ಯಾಭ್ಯಾಸದ ಜತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಮೇಚೂರ್ ಖೋಖೋ ಅಸೋಸಿಯೇಷನ್ ಅಧ್ಯಕ್ಷ
ನಾಗರಾಜ್ ವಿ. ಬೈರಿ ಮಾತನಾಡಿ, ಈ ಪಂದ್ಯಾವಳಿಯಲ್ಲಿ ಅತ್ಯುತ್ತಮ ಕೌಶಲ ಪ್ರದರ್ಶಿಸಿದ 12 ಕ್ರೀಡಾಪಟುಗಳನ್ನು ಜ.31 ರಿಂದ ಫೆ.3 ರವರೆಗೆ ತುಮಕೂರಿನಲ್ಲಿ ನಡೆಯಲಿರುವ ಖೋ-ಖೋ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರ್ನಾಟಕ ತಂಡದ ಪರವಾಗಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ಸೋಲನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಲ್ಲಿ ಮುಂದೆ ಯಶಸ್ಸು ಕಾಣಬಹುದು. ಕ್ರೀಡಾ ಮನೋಭಾವ, ಆತ್ಮವಿಶ್ವಾಸ ಇರಬೇಕು. ಅದರ ಜತೆಗೆ ಖೋ ಖೋದಲ್ಲಿ ವೇಗ ಮತ್ತು ಚುರುಕುತನ ಇರಬೇಕು ಎಂದರು.
ಹರಿ ವಿದ್ಯಾಲಯದ ಕಾರ್ಯದರ್ಶಿ ಎಚ್.ಆರ್. ಭಗವಾನ್ ಮಾತನಾಡಿ, ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪೂರಕ. ಕ್ರಿಕೆಟ್ ಮಾತ್ರವಲ್ಲ ಖೋ ಖೋ, ಕಬ್ಬಡಿ ಆಟಕ್ಕೂ ಜನಮನ್ನಣೆ ಸಿಗಬೇಕು ಎಂದು ಹೇಳಿದರು.
ಕ್ರೀಡಾಕೂಟವನ್ನು ಸಮಾಜ ಸೇವಕಿ ಸುಧಾ ಮೃತ್ಯುಂಜಯಪ್ಪ ಉದ್ಘಾಟಿಸಿ, ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು. ಗ್ರಾಮೀಣ ಕ್ರೀಡೆಯಾದ ಖೋ-ಖೋ ನಶಿಸಿಹೋಗದಂತೆ ಇಂತಹ ಕೂಟಗಳು ಸಹಕಾರಿ ಎಂದರು.
ಕರ್ನಾಟಕ ಅಮೆಚೂರ್ ಖೋ ಖೋ ಅಸೋಸಿಯೇಷನ್ ಕಾರ್ಯದರ್ಶಿ ಚಿನ್ನಮೂರ್ತಿ, ಬೆಂಗಳೂರು ಬಿಬಿಎಂಪಿ ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಸುಧೀಂದ್ರಕುಮಾರ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಎಂಡಿಎಕೆಕೆಎ ಉಪಾಧ್ಯಕ್ಷ ಬಿ. ಸುಬ್ರಮಣ್ಯ ಕಾರ್ಯದರ್ಶಿ ಮಹದೇವಪ್ಪ, ಖಜಾಂಚಿ ಸಂದೇಶ್ ಪ್ರಕಾಶ್, ಜನತಾ ಏಜೆನ್ಸೀಸ್ ಮಾಲೀಕ ಜಿನೇಶ್ ಹಾಗೂ ಇತರರು ಪಾಲ್ಗೊಂಡಿದ್ದರು.