ಸೈಬರ್ ಕ್ರೈಮ್ 
ಮೈಸೂರು

ಒಟಿಪಿ ಹಂಚಿಕೊಳ್ಳದಿದ್ದರೂ ಬ್ಯಾಂಕ್ ಖಾತೆಯಿಂದ 1.92 ಲಕ್ಷ ರೂ. ಎಗರಿಸಿದರು

ಪ್ರಮುಖ ಮುಖ್ಯಾಂಶಗಳು

  • ಅಪರಿಚಿತ ಖಾತೆಗೆ ಕೇವಲ ಅರ್ಧಗಂಟೆ ಅವಧಿಯಲ್ಲಿ ಹಂತ ಹಂತವಾಗಿ ಹಣ ವರ್ಗಾವಣೆ
  • ಹಣ ಕಳೆದುಕೊಂಡಿರುವ ಹೆಬ್ಬಾಳು ನಿವಾಸಿ
ಮೈಸೂರು: ಒಟಿಪಿ ಸೇರಿದಂತೆ ಯಾವುದೇ ಮಾಹಿತಿ ಹಂಚಿಕೊಳ್ಳದಿದ್ದರೂ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 1.92 ಲಕ್ಷ ರೂ. ದೋಚಲಾಗಿದೆ.
ಅಪರಿಚಿತ ಖಾತೆಗೆ ಕೇವಲ ಅರ್ಧಗಂಟೆ ಅವಧಿಯಲ್ಲಿ ಹಂತ ಹಂತವಾಗಿ ಹಣ ವರ್ಗಾವಣೆಯಾಗಿದೆ. 
ಹಣ ಕಳೆದುಕೊಂಡಿರುವ ಹೆಬ್ಬಾಳು ನಿವಾಸಿ, ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನ.22ರಂದು ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿ, ನನ್ನ ಕ್ರೆಡಿಟ್ ಕಾರ್ಡ್ ಮಾಹಿತಿ ಕೇಳಿದ್ದ. ಆದರೆ, ಇಂತಹ ಮೋಸದ ಜಾಲದ ಬಗ್ಗೆ ತಿಳಿದಿದ್ದರಿಂದ ಯಾವುದೇ ಮಾಹಿತಿ ನೀಡದೆ ಸಂಪರ್ಕ ಕಡಿತಗೊಳಿಸಿದೆ. ನಂತರ ಅನೇಕ ಸಲ ಕರೆ ಮಾಡಿದರೂ ಸ್ವೀಕರಿಸಲಿಲ್ಲ. 
ಹಾಗೆಯೇ ನ.23ರಂದು ಬೆಳಗ್ಗೆಯೂ ಕರೆ ಬಂದಿತ್ತಾದರೂ ನಾನು ಉತ್ತರಿಸಲಿಲ್ಲ. ಆದರೂ ಅಂದು ಮಧ್ಯಾಹ್ನ 1.40ರ ವೇಳೆಗೆ ತಮ್ಮ ಖಾತೆಯಿಂದ 26 ಸಾವಿರ ರೂ. ಕಿಶೋರ್ ಹೆಸರಿನ ಖಾತೆಗೆ ವರ್ಗಾವಣೆ ಆಗಿರುವುದಾಗಿ ಸಂದೇಶ ಬಂದಿತು.
ಇದಾಗಿ ನಾಲ್ಕು ನಿಮಿಷದ ನಂತರ 3 ರೂ. ಕಡಿತಗೊಂಡಿತು. ಹೀಗೆ ಮಧ್ಯಾಹ್ನ 2.07ರವರೆಗೆ ಆರೇಳು ಬಾರಿ ಒಟ್ಟು 1,92,880 ರೂ. ನನ್ನ ಖಾತೆಯಿಂದ ವರ್ಗಾವಣೆಯಾಗಿದೆ. ಈ ಸಂದರ್ಭದಲ್ಲಿ ನನ್ನ ಮೊಬೈಲ್‌ಗೆ ಒಟಿಪಿ ಹಾಗೂ ಹಣ ಕಡಿತವಾದ ಮೆಸೇಜ್‌ಗಳು ಬಂದಿವೆ. 
ಒಟಿಪಿ ಸೇರಿದಂತೆ ಯಾವುದೇ ಮಾಹಿತಿ ಹಂಚಿಕೊಳ್ಳದಿದ್ದರೂ ಹಣ ಕಡಿತಗೊಂಡಿದ್ದರಿಂದ ಕೂಡಲೇ ಬ್ಯಾಂಕ್ ಗ್ರಾಹಕ ಸೇವೆಗೆ ಕರೆ ಮಾಡಿ ಖಾತೆಯನ್ನು ಸ್ಥಗಿತಗೊಳಿಸಿದೆ ಎಂದು ವಂಚನೆಗೊಳಗಾದ ವ್ಯಕ್ತಿ, ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.