ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಮೈಸೂರು ಕೃಷ್ಣಮೂರ್ತಿ, ಡಾ.ನಂಜುಂಡಸ್ವಾಮಿ, ಡಾ.ಬಿ.ವಿ.ವಸಂತಕುಮಾರ್, ಡಾ.ಎಂ.ಆರ್.ರಾಶಿ, ಡಾ.ಬಸವಲಿಂಗಸ್ವಾಮಿ ಇತರರಿದ್ದರು. 
ಮೈಸೂರು

ಶಬ್ದಮಣಿದರ್ಪಣಂ ನೀಡಿದ ಕೇಶಿರಾಜ ಅಜರಾಮರ

ಹುಣಸೂರು :ಶಬ್ದಮಣಿದರ್ಪಣಂ ಗ್ರಂಥದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಭಾಷಾ ವಿಜ್ಞಾನ ನೀಡಿದ ಕವಿ ಕೇಶಿರಾಜ ಅಜರಾಮರ ಎಂದು ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಮೈಸೂರು ಕೃಷ್ಣಮೂರ್ತಿ ಬಣ್ಣಿಸಿದರು.
ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ(ಸ್ನಾತಕ ಮತ್ತು ಸ್ನಾತಕೋತ್ತರ)ದ ವತಿಯಿಂದ ಶನಿವಾರ ಆಯೋಜಿಸಿದ್ದ ಶಬ್ದಮಣಿದರ್ಪಣಂ ಮತ್ತು ಭಾಷಾ ವಿಜ್ಞಾನ ಕುರಿತಾದ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು.
1260ರಲ್ಲಿ ಕವಿ ಕೇಶಿರಾಜ ರಚಿಸಿದ ಶಬ್ದಮಣಿದರ್ಪಣಂ ಹಳಗನ್ನಡದ ಅತ್ಯಂತ ಪ್ರೌಢ ವ್ಯಾಕರಣ ಗ್ರಂಥವಾಗಿದೆ. ಆಧುನಿಕ ಭಾಷಾ ವಿಜ್ಞಾನದ ದೃಷ್ಟಿಕೋನದಿಂದಲೂ ಅತ್ಯಂತ ಮಹತ್ವದ ಸ್ಥಾನ ಹೊಂದಿದೆ. ಕೇವಲ ಸಾಂಪ್ರದಾಯಿಕ ವ್ಯಾಕರಣ ಸೂತ್ರಗಳನ್ನು ನೀಡದೆ ಭಾಷೆಯ ರಚನೆ ಮತ್ತು ಸ್ವರೂಪವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿರುವುದರಿಂದ ಇದನ್ನು ಕನ್ನಡದ ಭಾಷಾ ವಿಜ್ಞಾನದ ಮೊದಲ ಹೆಜ್ಜೆ ಎಂದು ಪರಿಗಣಿಸಲಾಗಿದೆ ಎಂದರು.
ಶಬ್ಬಮಣಿದರ್ಪಣಂ ಮತ್ತು ಭಾಷಾ ವಿಜ್ಞಾನದ ನಡುವಿರುವ ಪ್ರಮುಖ ಸಂಬಂಧಗಳು ಅತ್ಯಂತ ವೈಜ್ಞಾನಿಕವಾದುದು. ಈ ಪೈಕಿ ವರ್ಣಮಾಲೆ ಮತ್ತು ಧ್ವನಿವಿಜ್ಞಾನ, ವಿವರಣಾತ್ಮಕ ಮತ್ತು ಚಾರಿತ್ರಿಕ ವಿಧಾನಗಳು, ರಚನಾತ್ಮಕ ಭಾಷಾ ವಿಜ್ಞಾನ, ಅರ್ಥ ವಿಜ್ಞಾನ ಮತ್ತು ನಿರುಕ್ತ ಮುಂತಾದವುಗಳಿವೆ. ಕೇಶಿರಾಜ ಸಂಸ್ಕೃತದ ಕಾತಂತ್ರ ವ್ಯಾಕರಣ ಮಾದರಿಯನ್ನು ಅನುಸರಿಸಿದರೂ ಕನ್ನಡ ದೇಸಿ ಗುಣಗಳನ್ನು ಉಳಿಸಿಕೊಂಡಿರುವುದೇ ಶಬ್ದಮಣಿದರ್ಪಣಂ ವಿಶೇಷ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ವಿ.ವಸಂತಕುಮಾರ್ ಮಾತನಾಡಿದರು. ಪ್ರಾಂಶುಪಾಲ ಡಾ.ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಂಜುಂಡಸ್ವಾಮಿ ಉದ್ಘಾಟಿಸಿದರು. ಐಕ್ಯೂಎಸಿ ಸಂಚಾಲಕ ಡಾ.ಬಸವರಾಜ, ಪ್ರಾಧ್ಯಾಪಕ ಡಾ.ಬಸವಲಿಂಗಸ್ವಾಮಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಆರ್.ರಾಶಿ, ಡಿ.ಸಿ.ಶಿಲ್ಪಾ, ಆರ್.ಕುಮಾರ್, ಬಿ.ರಮೇಶ್, ಬಿ.ಸ್ವಾಮಿ, ಧನಲಕ್ಷ್ಮೀ, ಡಾ.ಮೋಹನ್‌ಕುಮಾರ್, ವಿದ್ಯಾರ್ಥಿಗಳು ಇದ್ದರು.