ಕೆ.ಆರ್.ನಗರ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕ ಡಿ.ರವಿಶಂಕರ್, ಜಿ.ಸುರೇಂದ್ರ ಮೂರ್ತಿ, ರುಕಿಯಾ ಬೇಗಂ, ಎ.ಎಸ್.ರವಿ, ಜಿ.ಆರ್.ರಾಮೇಗೌಡ, ಡಿಂಡಿಮ ಶಂಕರ್, ತಿಮ್ಮಶೆಟ್ಟಿ, ವೈ.ಎಸ್.ಜಯಂತ್ ಇದ್ದರು.
ಕೆ.ಆರ್.ನಗರ: ಮನುಷ್ಯ ಹುಟ್ಟು ಹಾಗೂ ಸಾವಿನ ಮಧ್ಯೆ ಮಾಡಿದ ಸಾಧನೆಗಳು ಇತಿಹಾಸ ಸೃಷ್ಟಿಸಬೇಕು. ಆ ಸಾಲಿಗೆ ನಾಡಪ್ರಭು ಕೆಂಪೇಗೌಡರು ಸೇರುತ್ತಾರೆ ಎಂದು ಶಾಸಕ ಡಿ.ರವಿಶಂಕರ್ ಬಣ್ಣಿಸಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ ಮತ್ತು ತಾಲೂಕು ಒಕ್ಕಲಿಗರ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಂಪೇಗೌಡರ ದೂರದೃಷ್ಟಿಯಿಂದ ನಿರ್ಮಾಣವಾದ ಬೆಂದಕಾಳೂರು ದೇಶದಲ್ಲೇ ಸಿಲಿಕಾನ್ ಸಿಟಿ ಎಂದು ಪ್ರಸಿದ್ಧಿ ಪಡೆದಿದೆ. ನಾಡಿಗೆ ಉತ್ತಮ ಕೊಡುಗೆ ನೀಡಿದವರಲ್ಲಿ ಕೆಂಪೇಗೌಡರು ಒಬ್ಬರು. ಅವರು ಜಾತಿಗೆ ಸೀಮಿತವಾಗದೆ ಸರ್ವ ಜನಾಂಗದ ಒಳಿತಿಗಾಗಿ ಶ್ರಮಿಸಿ ಬೆಂಗಳೂರಿನಂತಹ ಮಹಾನಗರವನ್ನು ಕಟ್ಟಿದ ದಕ್ಷ ಆಡಳಿತಗಾರ. ಮಹನೀಯರ ಜಯಂತಿಗಳನ್ನು ಎಲ್ಲ ಸಮುದಾಯದವರು ಸೇರಿ ಆಚರಿಸಬೇಕು ಎಂದು ಹೇಳಿದರು.
ವೈಯಕ್ತಿಕ ಹಣದಲ್ಲಿ ಕೆಂಪೇಗೌಡರ ಪತ್ರಿಮೆ ಮಾಡಿಸಿಕೊಡುತ್ತೇನೆ. ಸಮುದಾಯದವರು ಸೂಕ್ತ ಸ್ಥಳ ಗುರುತಿಸಿದರೆ ಅಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಪುರಸಭೆ ವ್ಯಾಪ್ತಿಯ ಯಾವುದಾರೂ ಒಂದು ರಸ್ತೆಗೆ ಕೆಂಪೇಗೌಡರ ಹೆಸರು ನಾಮಕರಣ ಮಾಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದ ಶಾಸಕರು, ಮುಂದಿನ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ವಿಷಯ ಮಂಡಿಸಿ ಅನುಮೋದನೆ ಪಡೆಯುವಂತೆ ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಮಂಜು, ಬಸವರಾಜು, ಮುನೇಶ್ವರಾಚಾರಿ, ಪರಶುರಾಮ್, ಮೋಹನ್ ಕುಮಾರ್, ಕಾಂತರಾಜ್ ಅವರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ತನ್ಮಯ್, ನಿತ್ಯ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಶರಣ್ಯ, ನೇಹ ಅವರನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ಜಿ.ಸುರೇಂದ್ರ ಮೂರ್ತಿ, ಸಾಲಿಗ್ರಾಮ ತಹಸೀಲ್ದಾರ್ ರುಕಿಯಾಬೇಗಂ, ಸಾಲಿಗ್ರಾಮ ತಾಪಂ ಇಒ ಎ.ಎಸ್.ರವಿ, ಬಿಇಒ ಆರ್.ಕೃಷ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಮಾಜಿ ಅಧ್ಯಕ್ಷ ಕೋಳಿ ಪ್ರಕಾಶ್, ಜಿಪಂ ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ಕಸಾಪ ತಾಲೂಕು ಅಧ್ಯಕ್ಷ ಡಿಂಡಿಮ ಶಂಕರ್, ಜಾನಪದ ಪರಿಷತ್ ಅಧ್ಯಕ್ಷ ತಿಮ್ಮಶೆಟ್ಟಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರ‌್ನಹಳ್ಳಿ ಶಿವಣ್ಣ, ಮುಖಂಡರಾದ ಕಲ್ಲಹಳ್ಳಿ ಶ್ರೀನಿವಾಸ್, ವೈ.ಎಸ್.ಜಯಂತ್, ಮೂಡಲಕೊಪ್ಪಲು ಕೃಷ್ಣೇಗೌಡ ಹಾಜರಿದ್ದರು.