ಕೆಂಪೇಗೌಡ ಅವರ 51ನೇ ಜಯಂತಿ ಅಂಗವಾಗಿ ಆಯೋಜಿಸಿರುವ ಪ್ರಚಾರ ರಥಕ್ಕೆ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ನಗರದಲ್ಲಿ ಚಾಲನೆ ನೀಡಿದರು. ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಪ್ರತಾಪಸಿಂಹ, ಟಿ.ಎಸ್.ಶ್ರೀವತ್ಸ, ಎಲ್.ನಾಗೇಂದ್ರ, ಪ್ರಶಾಂತ್‌ಗೌಡ ಇತರರಿದ್ದರು.
- ಕೆಂಪೇಗೌಡರು ಒಂದು ಜನಾಂಗಕ್ಕೆ ಸೀಮಿತರಾಗಿ ನಾಡು ಕಟ್ಟಿಲ್ಲ. ಎಲ್ಲ ಸಮುದಾಯಕ್ಕೂ ಅನುಗುಣವಾಗಿ ಪೇಟೆಗಳನ್ನು ನಿರ್ಮಿಸಿ ದೇಶಕ್ಕೆ ಮಾದರಿಯಾಗಿದ್ದಾರೆ
- ಕೆಂಪೇಗೌಡರ ಕೊಡುಗೆಗಳನ್ನು ಸ್ಮರಿಸುವ ದಿಸೆಯಲ್ಲಿ ನಡೆಯುವ ಜಯಂತಿಯ ಪ್ರಚಾರ ರಥಕ್ಕೆ ಚಾಲನೆ ನೀಡಲಾಗಿದೆ
ಮೈಸೂರು:ಜಾತ್ಯತೀತ, ಪಕ್ಷಾತೀತವಾಗಿ ಎಲ್ಲರೂ ನಾಡಪ್ರಭು ಕೆಂಪೇಗೌಡರ 51ನೇ ಜಯಂತಿಯನ್ನು ಯಶಸ್ವಿಗೊಳಿಸಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.
ಕೆಂಪೇಗೌಡ ಜಯಂತ್ಯುತ್ಸವ ಸಮಿತಿ, ರಾಜ್ಯ ಒಕ್ಕಲಿಗರ ಸಂಘ ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದಿಂದ ಜೂ.27ರಂದು ನಗರದಲ್ಲಿ ಆಯೋಜಿಸಿರುವ ಕೆಂಪೇಗೌಡ ಜಯಂತಿ ಅಂಗವಾಗಿ ಪ್ರಚಾರ ರಥಕ್ಕೆ ಕೆ.ಜಿ.ಕೊಪ್ಪಲಿನ ಶ್ರೀ ಬಂದಂತಮ್ಮ ದೇವಾಲಯ ಎದುರು ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಕೆಂಪೇಗೌಡರು ಒಂದು ಜನಾಂಗಕ್ಕೆ ಸೀಮಿತರಾಗಿ ನಾಡು ಕಟ್ಟಿಲ್ಲ. ಎಲ್ಲ ಸಮುದಾಯಕ್ಕೂ ಅನುಗುಣವಾಗಿ ಪೇಟೆಗಳನ್ನು ನಿರ್ಮಿಸಿ ದೇಶಕ್ಕೆ ಮಾದರಿಯಾಗಿದ್ದಾರೆ. ಅವರ ಕೊಡುಗೆಗಳನ್ನು ಸ್ಮರಿಸುವ ದಿಸೆಯಲ್ಲಿ ನಡೆಯುವ ಜಯಂತಿಯ ಪ್ರಚಾರ ರಥಕ್ಕೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಕೆಂಪೇಗೌಡರ ರಥಯಾತ್ರೆ ಜಿಲ್ಲೆಯ ಎಲ್ಲ ತಾಲೂಕು, ಪಟ್ಟಣಗಳಲ್ಲಿ ಸಂಚರಿಸಲಿದೆ. ಜೂ.27ರ ಜಯಂತಿಯಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮದ ಸಂದೇಶವನ್ನು ಮುಂದಿನ ಪಿಳೀಗೆಗೆ ತಲುಪಿಸುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಇರಲಿದೆ ಎಂದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಕೆಂಪೇಗೌಡ ಜಯಂತಿ ವಿಚಾರದಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಅದನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸುವ ಕೆಲಸ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರಚಾರ ರಥಕ್ಕೆ ಸಾಮೂಹಿಕವಾಗಿ ಸ್ವಾಮೀಜಿ ಸಾನ್ನಿಧ್ಯದೊಂದಿಗೆ ಚಾಲನೆ ನೀಡಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿ ಎಂದು ಹೇಳಿದರು.
ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಈಗಾಗಲೇ ಕೆಂಪೇಗೌಡ ಜಯಂತಿಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದ್ದೇನೆ. ಬಹುತೇಕ ಜಯಂತಿ ನನ್ನ ಅಧ್ಯಕ್ಷತೆಯೇ ಇರುತ್ತದೆ. ಅದರಂತೆ ಕೆಂಪೇಗೌಡ ಜಯಂತಿಯನ್ನು ಸಮುದಾಯದ ಎಲ್ಲರೂ ಪಕ್ಷಾತೀತವಾಗಿ ವಿಜೃಂಭಣೆಯಿಂದ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದರು.
ಕೆಂಪೇಗೌಡರು ಎಲ್ಲ ಸಮಾಜಕ್ಕೂ ನೀಡಿರುವ ಕೊಡುಗೆ ಹಾಗೂ ಅವರ ಆದರ್ಶ ವ್ಯಕ್ತಿತ್ವವನ್ನು ಸಾರುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಯಂತಿಯಲ್ಲಿ ಭಾಗವಹಿಸಬೇಕಿದೆ. ಈ ನಿಟ್ಟಿನಲ್ಲಿ ಜಯಂತ್ಯುತ್ಸವ ಸಮಿತಿ ಶ್ರಮಿಸುತ್ತಿದ್ದು ಎಲ್ಲರೂ ಸಹಕರಿಸಿ ಎಂದು ಹೇಳಿದರು.
ಕೆಂಪೇಗೌಡ ಜಯತ್ಯುತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ್‌ಗೌಡ ಮಾತನಾಡಿ, ಪ್ರತಿ ವರ್ಷಕ್ಕೂ ಕೆಂಪೇಗೌಡರ ಜಯಂತಿ ಆಚರಣೆಯ ಸಂಭ್ರಮವನ್ನು ಹೆಚ್ಚಿಸುತ್ತಾ ಬರಲಾಗುತ್ತಿದೆ. ಈ ಸಾಲಿನಲ್ಲಿ ಚಾಮರಾಜನಗರ ಜಿಲ್ಲೆಯ ತಾಲೂಕುಗಳಿಗೂ ಸಮಿತಿ ಹೋಗಿ ಆಹ್ವಾನಿಸುವ ಕೆಲಸವನ್ನು ಮಾಡಲಾಗಿದೆ. ಜತೆಗೆ ಪ್ರಚಾರ ರಥಕ್ಕೆ ಚಾಲನೆ ನೀಡಿದ್ದು, ಹಿನಕಲ್, ಹೂಟಗಳ್ಳಿ, ಬೆಳವಾಡಿ, ಕೂರ್ಗಳ್ಳಿ, ಮೈದಾನಹಳ್ಳಿ, ಆನಂದೂರು, ಹೊಸಕೋಟೆ, ಗುಂಗ್ರಾಲ್ ಛತ್ರ, ಯಲಚನಹಳ್ಳಿ, ಇಲವಾಲ ಗ್ರಾಮಗಳಲ್ಲಿ ಪ್ರಚಾರ ಸಂಚರಿಸಲಿದೆ ಎಂದು ತಿಳಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪಸಿಂಹ, ಮಾಜಿ ಶಾಸಕ ಎಲ್.ನಾಗೇಂದ್ರ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಜಿ.ಗಂಗಾಧರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಕೆ.ವಿ.ಶ್ರೀಧರ್, ಡಾ.ಎಂ.ಬಿ.ಮಂಜೇಗೌಡ, ನಗರಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾಶಂಕರೇಗೌಡ, ಎಸ್.ಬಿ.ಎಂ.ಮಂಜು, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಮರಿಸ್ವಾಮಿ, ಗೌರವಾಧ್ಯಕ್ಷ ಆಲತ್ತೂರು ಜಯರಾಮ್ ಉಪಾಧ್ಯಕ್ಷ ರವಿಕುಮಾರ್, ಬನ್ನೂರು ಮಹೇಶ್, ಪ್ರಧಾನ ಕಾರ್ಯದರ್ಶಿ ಎಂ.ಈ.ಚೇತನ್, ನಿರ್ದೇಶಕರಾದ ಒಂಟಿಕೊಪ್ಪಲು ಗುರುರಾಜ್, ರವಿ, ಬಿ.ಪಿ.ಬೋರೇಗೌಡ, ಗಿರೀಶ್‌ಗೌಡ, ಜಿ.ಕುಮಾರ್ ಗೌಡ, ಎಂ.ಸುಶೀಲಾ ನಂಜಪ್ಪ, ಉಮೇಶ್, ಮಾಜಿ ಮೇಯರ್ ಆರ್.ಲಿಂಗಪ್ಪ, ಮುಖಂಡರಾದ ಬೀಡನಹಳ್ಳಿ ಸತೀಶ್‌ಗೌಡ, ಕರ್ನಾಟಕ ಕಾವಲುಪಡೆ ಅಧ್ಯಕ್ಷ ಮೋಹನ್ ಕುಮಾರ್‌ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯೆ ಲಕ್ಷ್ಮೀದೇವಿ, ಮೈಮುಲ್ ಮಾಜಿ ಅಧ್ಯಕ್ಷ ಊಮಾಶಂಕರ್ ಇತರರಿದ್ದರು.