ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಆಯೋಜಿಸಿದ್ದ ಕಾಯಕ ಸಮಾಜ ಒಕ್ಕೂಟದ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ಸಿ.ಪುಟ್ಟಸಿದ್ದ ಶೆಟ್ಟಿ ಮಾತನಾಡಿದರು. ಪ್ರೊ.ಸಿ.ವೆಂಕಟರಾಮಯ್ಯ, ಪುಟ್ಟಸ್ವಾಮಿ ಶೆಟ್ಟಿ, ಸಣ್ಣೇಗೌಡ, ಲಕ್ಷ್ಮೀಪತಿ, ಗಂಗಾಧರ್ ಹಾಗೂ ಇತರರು ಇದ್ದರು. 
ಮೈಸೂರು

ಪಂಚಮಶಾಲಿ ಸಮುದಾಯ ‘ಪ್ರವರ್ಗ 2ಎ’ಗೆ ಸೇರ್ಪಡೆಗೆ ಕಾಯಕ ಸಮಾಜ ವಿರೋಧ

ಮೈಸೂರು: ಬಲಿಷ್ಠ ಪಂಚಮಶಾಲಿ ಸಮುದಾಯವನ್ನು ‘ಪ್ರವರ್ಗ 2ಎ’ಗೆ ಸೇರಿಸಿ ಕಾಯಕ ಸಮಾಜಗಳಿಗೆ ಅನ್ಯಾಯ ಮಾಡಬಾರದು ಎಂದು ಜಿಲ್ಲಾ ಕಾಯಕ ಸಮಾಜ ಒಕ್ಕೂಟದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದ ಶೆಟ್ಟಿ ಹೇಳಿದರು.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಆಯೋಜಿಸಿದ್ದ ಕಾಯಕ ಸಮಾಜ ಒಕ್ಕೂಟದ ಸಭೆಯಲ್ಲಿ ಮಾತನಾಡಿ, ಯಾವುದೇ ಕಾರಣಕ್ಕೂ ಪಂಚಮಶಾಲಿಗಳನ್ನು ಪ್ರವರ್ಗ 2ಎಗೆ ಸೇರಿಸಬಾರದು. ಒಂದುವೇಳೆ ಸೇರಿಸಿದರೆ ತೀವ್ರ ಹೋರಾಟ ನಡೆಸಲಾ ಗುವುದು ಎಂದು ಎಚ್ಚರಿಸಿದರು.
ಪಂಚಮಶಾಲಿಗಳನ್ನು ಪ್ರವರ್ಗ 2ಎಗೆ ಸೇರಿಸಬೇಕು ಎಂದು ಹೋರಾಟ ನಡೆಸುತ್ತಿರುವುದು ಸರಿಯಲ್ಲ. ಇದು ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾಗಿದೆ. ಪಂಚಮಶಾಲಿ ಜನಾಂಗಕ್ಕೆ ಉತ್ತಮ ಇತಿಹಾಸ ಪರಂಪರೆ ಇದ್ದು, ಅತ್ಯಂತ ಮುಂದುವರಿದ ಜನಾಂಗವಾಗಿದೆ. ಇವರು ಯಾವ ಮಾನದಂಡ ಇಟ್ಟುಕೊಂಡು ಪ್ರವರ್ಗ 2ಎ ಸೇರಿಸಬೇಕೆಂದು ಕೇಳುತ್ತಿದ್ದಾರೆ? ಅವರ ಬೇಡಿಕೆಗೆ ಸರ್ಕಾರ ಮಣಿಯಬಾರದು. ಪಂಶಮಶಾಲಿ ಸಮಾಜದ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸುತ್ತಿರುವುದು ಖಂಡನೀಯ. ಬಲಿಷ್ಠ ಸಮುದಾಯವನ್ನು 2ಎಗೆ ಸೇರಿಸಿದರೆ ಸೂಕ್ಷ್ಮಾತಿಸೂಕ್ಷ್ಮ ಜಾತಿಗಳಿಗೆ ಸರ್ಕಾರವೇ ವಿಷ ಉಣಿಸಿದಂತೆ ಆಗುತ್ತದೆ ಎಂದರು.
ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಕಾಯಕ ಸಮುದಾಯಗಳಲ್ಲಿ ನಿರಾಸೆ ಮೂಡಿಸಿದೆ. ರಾಜ್ಯ ಬಜೆಟ್‌ನಲ್ಲಿ ಅಸಂಘಟಿತ ಕಾಯಕ ಸಮುದಾಯಗಳ ಅಭಿವೃದ್ಧಿಗೆ ನಿರ್ದಿಷ್ಟ ಕಾರ್ಯಸೂಚಿ ರೂಪಿಸಬೇಕು. ಅತಿ ಹಿಂದುಳಿದ, ಹಿಂದುಳಿದ ಮತ್ತು ಬುಡಕಟ್ಟು, ಅಲೆ ಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಅಭಿವೃದ್ಧಿಗೆ ಹೆಚ್ಚು ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಕಾಯಕ ಸಮಾಜಗಳ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಬೇಕು, ಪ್ರಸಕ್ತ ಸಾಲಿನಲ್ಲಿ 1 ಸಾವಿರ ಕೋಟಿ ರೂ.ಅನುದಾನ ಬಿಡುಗಡೆ ಮಾಡಬೇಕು. 2ಎ ಪ್ರವರ್ಗಕ್ಕೆ ಮೀಸಲಾತಿ ಪ್ರಮಾಣವನ್ನು ಶೇ.27ರಷ್ಟಕ್ಕೆ ಹೆಚ್ಚಿಸಬೇಕು. ಪ್ರತಿ ತಾಲೂಕಿನಲ್ಲಿ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಸಮ ಸಮುದಾಯ ಭವನಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ವಿಶ್ರಾಂತ ಕುಲಪತಿ ಪ್ರೊ.ಸಿ.ವೆಂಕಟರಾಮಯ್ಯ, ಒಕ್ಕೂಟದ ಪದಾಧಿಕಾರಿಗಳಾದ ಪುಟ್ಟಸ್ವಾಮಿ ಶೆಟ್ಟಿ, ಸಣ್ಣೇಗೌಡ, ಲಕ್ಷ್ಮೀಪತಿ, ಗಂಗಾಧರ್, ಜಯರಾಮ ಶೆಟ್ಟಿ, ಚಿನ್ನಸ್ವಾಮಿ, ನಾಗೇಶ್, ರಮೇಶ್, ಮಹದೇವ ಗಾಣಿಗ, ಯೋಗೀಶ್ ಉಪ್ಪಾರ್, ಕೆಂಪಶೆಟ್ಟಿ, ಶಿವರಾಜಪ್ಪ, ಮೋಹನ ದಾಸ್, ಕುಮಾರ್ ಹಾಗೂ ಇತರರು ಇದ್ದರು.