ಭ್ರಷ್ಟಾಚಾರ 
ಮೈಸೂರು

ಭ್ರಷ್ಟಾಚಾರದಲ್ಲಿ ಕರ್ನಾಟಕ ಮೂರನೇ ಸ್ಥಾನ

ಅವಿನಾಶ್ ಜೈನಹಳ್ಳಿ
ಮೈಸೂರು: ರಾಜ್ಯದಲ್ಲಿ ಮನರೇಗಾ ಯೋಜನೆಯಡಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದ್ದು, ಭ್ರಷ್ಟಾಚಾರದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಆರೋಪಿಸಿದರು.
ಮನರೇಗಾ ಯೋಜನೆಯ ಹಣ ಸರಿಯಾಗಿ ಬಳಕೆಯಾಗುತ್ತಿರಲಿಲ್ಲ. ಇದನ್ನು ಮನಗಂಡು ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಅಭಿವೃದ್ಧಿಯೊಂದಿಗೆ ವಿಕಸಿತ ಭಾರತಕ್ಕೆ ಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಜಾರಿಗೆ ಬರುವ ಸಂವಿಧಾನಾತ್ಮಕ ಕಾಯ್ದೆಯನ್ನು ರಾಜ್ಯ ಸರ್ಕಾರ ವಿರೋಧಿಸುವಂತಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್ ಆದೇಶವೇ ಇದೆ ಎಂದರು.
ರಾಜ್ಯ ಸರ್ಕಾರ ಗಾಂಧೀಜಿಯನ್ನು ಬಳಸಿಕೊಂಡು ಬೃಹನ್ನಳೆ ನಾಟಕ ಮಾಡುತ್ತಿದೆ. ಒಂದು ಕಡೆ ಗಾಂಧೀಜಿ ಸಾರಾಯಿಯ ವಿರುದ್ಧ ಹೋರಾಡಿದ್ದರೆ, ಸರ್ಕಾರ ಹೊಸದಾಗಿ 500 ಮದ್ಯದಂಗಡಿಗಳಿಗೆ ಅನುಮತಿ ನೀಡಿ ಗಾಂಧೀಜಿಯ ತತ್ವ ಸಿದ್ಧಾಂತದ ವಿರುದ್ಧ ನಡೆದುಕೊಳ್ಳುತ್ತಿದೆ. ಅಬಕಾರಿ ಸಚಿವ ತಿಮ್ಮಾಪುರ 6 ಸಾವಿರ ಕೋಟಿ ರೂ.ವಸೂಲಿ ಮಾಡಿದ್ದು, ಕಾಂಗ್ರೆಸ್ ನಂತಹ ಭ್ರಷ್ಟ ಸರ್ಕಾರವನ್ನು ರಾಜ್ಯ ಹಿಂದೆಂದೂ ಕಂಡಿಲ್ಲ ಎಂದು ಟೀಕಿಸಿದರು.
ಮುಡಾ ಹಗರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತರು ಸಲ್ಲಿಸಿದ್ದ ಬಿ ರಿಪೋರ್ಟ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯ ರದ್ದುಗೊಳಿಸಿದೆ. ಆದರೆ, ಇದೇ ಅಂತಿಮ ಆದೇಶವಲ್ಲ ಹೈಕೋರ್ಟ್‌ನಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಅಲ್ಲದೆ ಲೋಕಾಯುಕ್ತ ಅಧಿಕಾರಿಗಳು ಯಾವ ರೀತಿ ತನಿಖೆ ನಡೆಸಿದರು ಎಂಬುದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಎಂದ ಮೇಲೆ ಸೈಟ್‌ಗಳನ್ನು ವಾಪಸ್ ಕೊಟ್ಟಿದ್ದು ಯಾಕೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಸಿ.ಕೆ.ರುದ್ರಮೂರ್ತಿ, ಸೋಮ ಸುಂದರ್, ವಕ್ತಾರ ಮೋಹನ್, ಮಾಧ್ಯಮ ಪ್ರಮುಖ ಮಹೇಶ್ ರಾಜೇ ಅರಸ್ ಇದ್ದರು.