ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ 5ನೇ ವರ್ಷದ ಕರಾಟೆ ಪಂದ್ಯಾವಳಿಯನ್ನು ವಿಶ್ವಕರ್ಮ ನಿಗಮದ ಅಧ್ಯಕ್ಷ ನಂದಕುಮಾರ್ ಉದ್ಘಾಟಿಸಿದರು. ಚಿತ್ರದಲ್ಲಿ ಸ್ನೇಕ್ ಬಸವರಾಜು, ರಾಜೇಂದ್ರ, ಪ್ರಸಾದ್, ಜಿಡಿ ಶರ್ಮ, ಶಿವರಾಜ್ ಇತರರಿದ್ದರು. 
ಮೈಸೂರು

ಆತ್ಮರಕ್ಷಣೆ, ಮಾನಸಿಕ ಸದೃಢತೆಗೆ ಕರಾಟೆ ಸಹಕಾರಿ

ನಂಜನಗೂಡು: ಕರಾಟೆ ಕೇವಲ ಕ್ರೀಡೆಯಲ್ಲ. ಅದೊಂದು ಕಲೆ. ಆತ್ಮರಕ್ಷಣೆ, ಮಾನಸಿಕ ಸದೃಢತೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಾಲ್ಯದಿಂದಲೇ ಈ ಸಮರ ಕಲೆ ಕರಗತ ಮಾಡಿಕೊಳ್ಳಬೇಕಿದೆ ಎಂದು ವಿಶ್ವಕರ್ಮ ನಿಗಮದ ಮಾಜಿ ಅಧ್ಯಕ್ಷ ನಂದಕುಮಾರ್ ಅಭಿಪ್ರಾಯಪಟ್ಟರು.
ನಗರದ ಹುಲ್ಲಹಳ್ಳಿ ರಸ್ತೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಒಕಿನೋವಾ ಕರಾಟೆ ಡೂ ಶೇರಿನ್ ರ್ಯೂ ಶೋರಿನ್ ಕೈ ವತಿಯಿಂದ 2 ದಿನ ಆಯೋಜಿಸಿರುವ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ವನ್ಯಜೀವಿ ಸಂರಕ್ಷಕ ಹಾಗೂ ಸಮಾಜ ಸೇವಕ ಗೋಳೂರು ಸ್ನೇಕ್ ಬಸವರಾಜು ಮಾತನಾಡಿ, ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ, ಕ್ರೀಡೆಯೂ ಅಷ್ಟೇ ಮುಖ್ಯ. ಬೇರೆಲ್ಲಾ ಕ್ರೀಡೆಗಿಂತ ಕರಾಟೆ ಮಕ್ಕಳ ಬುದ್ಧಿಯ ತೀಕ್ಷ್ಣತೆ ಹೆಚ್ಚಿಸುತ್ತದೆ. ಈ ಕರಾಟೆ ಪಂದ್ಯಾವಳಿಯಿಂದ ಉತ್ತಮ ಕ್ರೀಡಾಪಟುಗಳು ಹೊರಹೊಮ್ಮಲಿ ಎಂದರು.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಮಡಿಕೇರಿ ಸೇರಿದಂತೆ ಹಲವಾರು ಜಿಲ್ಲೆಗಳಿಂದ ನೂರಾರು ಕ್ರೀಡಾಪಟುಗಳು ಆಗಮಿಸಿ, ಕರಾಟೆ ಪ್ರದರ್ಶಿಸಿ ನೋಡುಗರು ಹುಬ್ಬೇರುವಂತೆ ಮಾಡಿದರು. ಆಯೋಜಕರಾದ ರಾಜೇಂದ್ರ, ಪ್ರಸಾದ್, ಜಿಡಿ ಶರ್ಮ, ಶಿವರಾಜ್ ಶರ್ಮ ಶೋರಿನ್ ಕೈ ಸೌತ್ ಏಷಿಯಾ ಪ್ರತಿನಿಧಿ ಕ್ಯೋಶಿ ಎಸ್. ಸುನಿಲ್ ಕುಮಾರ್, ಸೀನಿಯರ್ ಇನಸ್ಟ್ರಕ್ಟರ್ ಶಿಹನ್ ಬಿ. ರಾಜೇಶ್ ಸೇರಿದಂತೆ ಕರಾಟೆ ಪಂದ್ಯಾವಳಿ ಆಯೋಜನ ಸಮಿತಿ ಅಧ್ಯಕ್ಷ ಬಿ. ಕುಮಾರಸ್ವಾಮಿ ಹಾಜರಿದ್ದರು.