ಬನ್ನೂರಿನ ಸಮೀಪದ ಯಾಚೇನಹಳ್ಳಿ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್.ರಾಮುಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ವೈ.ಎಸ್.ಶಂಕರೇಗೌಡ, ಶ್ರೀ ನಾದಾನಂದನಾಥ ಸ್ವಾಮೀಜಿ, ಶ್ರೀ ಷಡಕ್ಷರಿ ಸ್ವಾಮೀಜಿ, ಕ್ಯಾತೇಗೌಡ ಇದ್ದರು. 
ಮೈಸೂರು

ಯಾಚೇನಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ಲಲಾಟಾಕ್ಷ ಎಸ್
ಬನ್ನೂರು: ಪಟ್ಟಣದ ಸಮೀಪದ ಯಾಚೇನಹಳ್ಳಿ ಗ್ರಾಮದಲ್ಲಿ ಯಾಚೇನಹಳ್ಳಿ ಗ್ರಾಮ ಪಂಚಾಯಿತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯಿಂದ ಕಾವೇರಿ ಕಳಸ ಪೂಜೆ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್.ರಾಮಸ್ವಾಮಿ ಮಾತನಾಡಿ, ಕರ್ನಾಟಕ ಸಮೃದ್ಧ ನಾಡಾಗಿದೆ. ಇಲ್ಲಿರುವ ವಾತಾವರಣ ಹಿತಕರವಾಗಿದ್ದು ಇಲ್ಲಿರುವ ನಾವೇ ಧನ್ಯರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಯಾಚೇನಹಳ್ಳಿ ಗ್ರಾಮ ಮೇಲ್ಪಂಕ್ತಿಯಲ್ಲಿದ್ದು ಗ್ರಾಮ ಮಟ್ಟದಲ್ಲಿಯೇ ಹೆಚ್ಚು ಸದಸ್ಯರು ನೋಂದಣಿಯಾಗಿರುವ ಗ್ರಾಮ ಇದಾಗಿದೆ ಎಂದು ತಿಳಿಸಿದರು.
ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ಮಾತನಾಡಿ, ಸಂಘದ ವತಿಯಿಂದ ಪ್ರತಿ 5 ವರ್ಷಕ್ಕೊಮ್ಮೆ ದಸರಾ ಮಾದರಿ ವಿವಿಧ ಕಲಾ ಪ್ರಾಕಾರಗಳೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸುವಂತೆ ತೀರ್ಮಾನಿಸಿದ್ದೆವು. ಹಾಗಾಗಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಕಾವೇರಿ ನದಿಗೆ ಪೂಜೆ ಸಲ್ಲಿಸುವ ಮೂಲಕ ಆಚರಿಸುತ್ತಿದ್ದೇವೆ ಎಂದರು.
ಹಲವಾರ ಮಠ ಮುಡುಕನಪುರದ ಶ್ರೀ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಗಾಂಧೀಜಿಯವರು ಕಂಡ ಕನಸು ಇಂದು ಯಾಚೇನಹಳ್ಳಿ ಗ್ರಾಮದಲ್ಲಿ ನನಸಾಗಿದೆ. ಗ್ರಾಮದಲ್ಲಿ ಏನಿದೆ ಎನ್ನುವುದಕ್ಕಿಂತ ಯಾವ ಸೌಲಭ್ಯ ಇಲ್ಲ ಎನ್ನುವಷ್ಟರ ಮಟ್ಟಿಗೆ ಗ್ರಾಮ ಅಭಿವೃದ್ಧಿಯಾಗಿದೆ ಎಂದು ಹೇಳಿದರು.
ರಾಮಕೃಷ್ಣ ಸೇವಾ ಕೇಂದ್ರದ ಶ್ರೀ ನಾದಾನಂದನಾಥ ಸ್ವಾಮೀಜಿ ಮಾತನಾಡಿ, ಗ್ರಾಮದ ಅಭಿವೃದ್ಧಿಗೆ ಎಲ್ಲರ ಶ್ರಮ ಅಗತ್ಯ. ಗ್ರಾಮದಲ್ಲಿ ಒಡಕಿನ ಮನಸ್ಸುಗಳು ಇರಬಾರದು. ಒಡಕಿನ ಮನಸ್ಸಿನಿಂದ ಅವರ ನೆಮ್ಮದಿ ಹಾಳಾಗುವುದಲ್ಲದೆ ಗ್ರಾಮದ ಅಭಿವೃದ್ಧಿಗೂ ತೊಡಕಾಗುತ್ತದೆ. ಯಾರಾದರೂ ಒಳ್ಳೆಯ ಕೆಲಸವನ್ನು ಮಾಡಿದರೆ ಅವರನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕೆ ಹೊರತು ಅವರನ್ನು ನಿಂದಿಸುವಂತಾಗಬಾರದು ಎಂದರು.
ಸಾಹಿತಿ ಮು.ನಾ.ರಮೇಶ್, ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾ ತಂಡದ ಪೊಲೀಸ್ ಉಪಾಧೀಕ್ಷಕ ಎಸ್.ಶ್ರೀಧರ್, ಪ್ರಾಂಶುಪಾಲ ಡಾ.ವೈ.ಜಿ.ಲಕ್ಷ್ಮಣ, ಉಪಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಕೆ.ಕೆ.ಸೋಮಶೇಖರ ಅವರನ್ನು ಸನ್ಮಾನಿಸಲಾಯಿತು.
ಯಾಚೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೈ.ಸಿ.ಶಿವಕುಮಾರ್, ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ವೈ.ಕೆ.ಉಮೇಶ್, ವೈ.ಎಂ.ನಾಗರಾಜು, ಕಾರ್ಯನಿರ್ವಹಣಾ ಅಧಿಕಾರಿ ವೈ.ಕೆ.ಕ್ಯಾತೇಗೌಡ ಇದ್ದರು.