ಕನ್ನಡ ರಾಜ್ಯೋತ್ಸವದಲ್ಲಿ ಅಶ್ವಪಡೆ ಪಥ ಸಂಚಲನ. 
ಮೈಸೂರು

ಪ್ರಾದೇಶಿಕ ಸಂಸ್ಕೃತಿಯನ್ನು ಎತ್ತಿಹಿಡಿಯಿರಿ: ಕನ್ನಡಿಗರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಲಹೆ

ಮೈಸೂರು: ತಂತ್ರಜ್ಞಾನದ ಯುಗದ ಈ ಹೊತ್ತಿನಲ್ಲಿ ಕನ್ನಡ ಭಾಷೆ ಆಧುನಿಕತೆಯೊಂದಿಗೆ ತನ್ನದೇ ಅಸ್ಮಿತೆ ಉಳಿಸಿಕೊಂಡಿದೆ. ಈ ಮಣ್ಣಿಗೊಂದು, ಈ ನುಡಿಗೊಂದು ಸೊಗಸು, ಸೌಂದರ್ಯ, ಬೆಡಗಿದೆ. ಆದ್ದರಿಂದ ಪ್ರಾದೇಶಿಕ ಸಂಸ್ಕೃತಿಯನ್ನು ಎತ್ತಿಹಿಡಿಯುವ ಕಾರ್ಯ ಪ್ರತಿಯೊಬ್ಬ ಕನ್ನಡಿಗರು ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡ ಲಿಪಿಯು ಹೆಚ್ಚು ಬಳಕೆಯಾಗುತ್ತಿರುವುದು ಸಂತಸದ ಬೆಳವಣಿಗೆ. ವಿಜ್ಞಾನ-ತಂತ್ರಜ್ಞಾನಯೊಂದಿಗೆ ಕನ್ನಡವನ್ನು ಬಳಸಿ, ಬೆಳೆಸಬೇಕಾಗಿದೆ ಎಂದರು.
ತಂತ್ರಜ್ಞಾನದ ವೇಗದಲ್ಲಿ ಹಾಗೂ ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಯು ಹಿಂದುಳಿಯದಂತೆ ಸರ್ಕಾರವು ಅನೇಕ ಕಾರ್ಯಕ್ರಮ ಜಾರಿಗೊಳಿಸಿದೆ. ಕನ್ನಡದಲ್ಲಿ ಯೂನಿಕೋಡ್ ಅಕ್ಷರ ವಿನ್ಯಾಸ, ಪರಿವರ್ತಕಗಳು, ಚರವಾಣಿ (ಮೊಬೈಲ್‌ನಲ್ಲಿ) ಕನ್ನಡ ಬಳಕೆ, ಬ್ರೈಲ್ ಲಿಪಿಯಲ್ಲಿ ಕನ್ನಡ ಬಳಕೆ ಮತ್ತಿತರ ತಂತ್ರಾಂಶ ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು.
ನಾಡು-ನುಡಿಯ ಬಗೆಗಿನ ಪ್ರೀತಿ, ಅಭಿಮಾನವನ್ನು ಈ ದಿನವು ನಮಗೆ ನೆನಪಿಸುತ್ತದೆ. ನಮ್ಮ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಬೆಯ ನಾಡು ಎಂಬೆಲ್ಲ ಹೆಸರಿನಿಂದ ಕರೆಯಲಾಗುತ್ತದೆ. ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ಏಕೀಕರಣಕ್ಕಾಗಿ ಆಲೂರು ವೆಂಕಟರಾಯರು ಅನೇಕ ಸಮ್ಮೇಳನ ನಡೆಸಿ ಹೋರಾಟ ಪ್ರಾರಂಭಿಸಿದರು. 
1924ರಲ್ಲಿ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಹುಯಿಲಗೊಳ ನಾರಾಯಣರಾಯರು ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಹಾಡಿ ಎಲ್ಲರ ಗಮನ ಸೆಳೆದರು. 1950ರಲ್ಲಿ ಭಾರತವು ಗಣರಾಜ್ಯವಾದ ನಂತರ ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ದೇಶದಲ್ಲಿ ವಿವಿಧ ಪ್ರಾಂತ್ಯಗಳಾಗಿ 1956ರ ನವೆಂಬರ್ 1ರಲ್ಲಿ ರಚನೆಯಾದವು. 
ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದ ಮುಂಬೈ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ, ರಾಜಮನೆತನಗಳ ಆಳ್ವಿಕೆಯಲ್ಲಿದ್ದ ಮೈಸೂರು ಪ್ರಾಂತ್ಯ, ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದ್ ಕರ್ನಾಟಕ, ಕೊಡಗು ಪ್ರಾಂತ್ಯಗಳನ್ನು ಒಳಗೊಂಡ ಏಕೀಕೃತ ಮೈಸೂರು ರಾಜ್ಯ 1956ರಲ್ಲಿ ಉದಯವಾಯಿತು ಎಂದು ಇತಿಹಾಸವನ್ನು ಸ್ಮರಿಸಿದರು.
ಮೈಸೂರು ರಾಜ್ಯವನ್ನು 1973ರಲ್ಲಿ ‘ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಯಿತು. ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಾಗ ಡಿ.ದೇವರಾಜ ಅರಸು ಸಿಎಂ ಆಗಿದ್ದರು ಎಂಬುದು ಹೆಮ್ಮೆಯ ವಿಷಯ. ಕನ್ನಡ ನಾಡು-ನುಡಿ, ಸಂಸ್ಕೃತಿ ಉಳಿವು ಬೆಳವಣಿಗೆಗಾಗಿ ಶ್ರಮಿಸಿದ ಅಸಂಖ್ಯ ಜನರ ತ್ಯಾಗ ಬಲಿದಾನ ಸೇರಿವೆ, ಅವರೆಲ್ಲರ ಸೇವೆ ಸ್ಮರಿಸಬೇಕಿದೆ ಎಂದು ನುಡಿದರು.
ಕರ್ನಾಟಕ ರಾಜ್ಯದ ಏಕೀಕರಣಕ್ಕೆ ಹಲವಾರು ಮಹನೀಯರು ಕಾರಣಕರ್ತರಾಗಿದ್ದಾರೆ. ಅವರ ಹೋರಾಟವನ್ನು ಮರೆಯಲಾಗದು ಎಂದು ಸ್ಮರಿಸಿದರು.
ಆದಿಕವಿ ಪಂಪನಿಂದ ಇಲ್ಲಿಯವರೆಗೂ ಅನೇಕ ಕವಿಗಳು, ಸಾಹಿತಿಗಳು ನಾಡು-ನುಡಿ, ಕಲೆ, ಸಂಸ್ಕೃತಿಯ ಬಗೆಗೆ ಸಮೃದ್ಧ ಸಾಹಿತ್ಯ ರಚಿಸಿದ್ದಾರೆ. ಭಾರತೀಯ ಭಾಷೆಗಳಲ್ಲೇ ಅಧಿಕ ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷಾ ಸಾಹಿತಿಗಳಿಗೆ ಬಂದಿರುವುದು ಹೆಮ್ಮೆಯ ಸಂಗತಿ. ಸಾಹಿತ್ಯ, ಸಂಸ್ಕೃತಿ, ಸಂಗೀತ, ಸದಭಿರುಚಿ, ಸಂಪ್ರದಾಯ, ಸಂಸ್ಕಾರ ಹೀಗೆ ಯಾವುದೇ ಕ್ಷೇತ್ರದಲ್ಲೂ ನಾವು ಕಡಿಮೆಯಿಲ್ಲ. ಇಂತಹ ಪವಿತ್ರ ನೆಲದಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು ಎಂದು ಅಭಿಮಾನಿದಿಂದ ಹೇಳಿದರು.
ಕ್ರಿ.ಶ.450ರ ಕನ್ನಡ ಭಾಷೆಯ ಮೊಟ್ಟ ಮೊದಲ ಹಲ್ಮಿಡಿ ಶಾಸನದಲ್ಲಿ ಕನ್ನಡದ ಪದಗಳಿವೆ. ಕ್ರಿ.ಶ.850ರ ಕನ್ನಡದ ಮೊಟ್ಟ ಮೊದಲ ಗ್ರಂಥ ಕವಿರಾಜ ಮಾರ್ಗದಲ್ಲಿ ಕನ್ನಡ ನಾಡಿನ ವಿಸ್ತಾರವಾದ ಬಗ್ಗೆ ಉಲ್ಲೇಖವಿದೆ. ಕನ್ನಡ ನಾಡು, ನುಡಿ, ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಗಂಗರು, ಕದಂಬರು, ರಾಷ್ಟ್ರಕೂಟರು, ಚಾಳುಕ್ಯರು, ಹೊಯ್ಸಳರು, ವಿಜಯನಗರದ ಅರಸರು, 
ಮೈಸೂರಿನ ಒಡೆಯರು ಸೇರಿದಂತೆ ಹತ್ತಾರು ರಾಜಮನೆತನಗಳು, ಸಾಮಂತ ನಾಯಕರು, ನಮ್ಮ ಕನ್ನಡ ಭಾಷೆ, ರಾಜ್ಯವನ್ನು ಹಲವು ರೀತಿಯಲ್ಲಿ ಪೋಷಿಸಿ, ಬೆಳೆಸಿದ್ದಾರೆ ಎಂದರು.
ಶಾಸಕರಾದ ತನ್ವೀರ್ ಶೇಠ್, ಜಿ.ಟಿ.ದೇವೇಗೌಡ, ಕೆ.ಹರೀಶ್‌ಗೌಡ, ಎಂಎಲ್‌ಸಿಗಳಾದ ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಇನ್ನಿತರರಿದ್ದರು.