ಜೆಸಿಎಸಿಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ‘ಉತ್ತರಾಯಣ’ ಕಲಾ ಮತ್ತು ಸಾಂಸ್ಕೃತಿಕ ಹಬ್ಬವನ್ನು ರಂಗನಿರ್ದೇಶಕ ಹೆಗ್ಗೋಡು ಪ್ರಸನ್ನ ಉದ್ಘಾಟಿಸಿದರು. ಪುರುಷೋತ್ತಮ್ ಬಿಳಿಮಲೆ, ಜಗನ್ನಾಥ ಶೆಣೈ, ಅನೂರ್ ಅನಂತಕೃಷ್ಣಶರ್ಮ ಇದ್ದರು.
- ಭಾಷೆ ಹಾಗೂ ಸಂಸ್ಕೃತಿ ನಾಡಿನ ಹೆಮ್ಮೆ.
- ನೆಲದ ಸಂಸ್ಕೃತಿಯೊಂದಿಗೆ ಅದೂ ಬೆರೆತಿರುವುದೇ ರಾಜ್ಯದ ವೈಶಿಷ್ಟ್ಯ.
- ಗ್ರಾಮಗಳಲ್ಲಿ ಹುಟ್ಟಿ ಎಲ್ಲೆಡೆ ಹಬ್ಬಬೇಕಾದ ಸಂಸ್ಕೃತಿಯ ಆಚರಣೆ ಇತ್ತೀಚೆಗೆ ಬಹಳ ವಿರಳ
ಮೈಸೂರು: ಆಧುನಿಕ ಯುಗದಲ್ಲಿ ಕನ್ನಡ ಭಾಷಾ ಬೆಳವಣಿಗೆಯ ವೇಗ ಬಹಳ ಕಡಿಮೆಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.
ನಗರದ ಜಗನ್ನಾಥ ಸೆಂಟರ್ ಫಾರ್ ಆರ್ಟ್ ಆ್ಯಂಡ್ ಕಲ್ಚರ್‌ನಲ್ಲಿ (ಜೆಸಿಎಸಿ) ಶುಕ್ರವಾರ ಸಂಜೆ ಆಯೋಜಿಸಿದ್ದ ‘ಉತ್ತರಾಯಣ’ ಕಲಾ ಮತ್ತು ಸಾಂಸ್ಕೃತಿಕ ಹಬ್ಬದ ಮೊದಲ ಆವೃತ್ತಿಯನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾಷೆ ಹಾಗೂ ಸಂಸ್ಕೃತಿ ನಾಡಿನ ಹೆಮ್ಮೆ. ದೇಶದ ಹಾಗೂ ವಿಶ್ವದ ವಿವಿಧೆಡೆಗಳಿಂದ ಕರ್ನಾಟಕಕ್ಕೆ ವಿವಿಧ ಧರ್ಮಗಳು, ಭಾಷೆಗಳು, ಸಂಸ್ಕೃತಿಗಳು ಬಂದಿವೆ. ಇಲ್ಲಿನ ನೆಲದ ಸಂಸ್ಕೃತಿಯೊಂದಿಗೆ ಅದೂ ಬೆರೆತಿರುವುದೇ ರಾಜ್ಯದ ವೈಶಿಷ್ಟ್ಯ. ಭಾಷೆ ಎಂದರೆ ಒಂದಿಡೀ ಪ್ರಾಂತ್ಯ, ಸಂಸ್ಕೃತಿಯ ಪ್ರತೀಕ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆಯ ವೇಗ ತಗ್ಗಿದೆ ಎಂದರು.
ರಂಗನಿರ್ದೇಶಕ ಹೆಗ್ಗೋಡು ಪ್ರಸನ್ನ ಮಾತನಾಡಿ, ನೆಲದ ಮೂಲ ಸಂಸ್ಕೃತಿ ನಾಡಿನ ಹಿರಿಮೆ. ನಮ್ಮ ಸುತ್ತಮುತ್ತಲಿನ ಸಣ್ಣಪುಟ್ಟ ಗ್ರಾಮಗಳಲ್ಲಿ ಹುಟ್ಟಿ ಎಲ್ಲೆಡೆ ಹಬ್ಬಬೇಕಾದ ಸಂಸ್ಕೃತಿಯ ಆಚರಣೆ ಇತ್ತೀಚೆಗೆ ಬಹಳ ವಿರಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕಲೆ ಹಾಗೂ ಸಂಸ್ಕೃತಿಯನ್ನು ಬೆಳೆಸುವ, ಅಭಿವ್ಯಕ್ತಿಪಡಿಸುವ ಕೆಲಸವಾಗಬೇಕಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ನಗರೀಕರಣ ಹಾಗೂ ಆಧುನೀಕರಣದಿಂದಾಗಿ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ನಾಡಿನ ಕೀರ್ತಿಯನ್ನು ಕಟ್ಟಿಬೆಳೆಸಿದ ಹಿಂದಿನವರು ತಂತಮ್ಮ ಬೇರನ್ನು ಮರೆತಿರಲಿಲ್ಲ. ಅದರೊಂದಿಗೆ ಸಾಹಿತ್ಯ ಹಾಗೂ ಕಲೆಗೆ ಸಂಬಂಧಿಸಿದ ಕೆಲಸಗಳನ್ನು ಮಾಡುತ್ತಿದ್ದರು. ಇದೇ ರೀತಿ ಮೈಸೂರು ನಗರೀಕರಣದತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಕಲೆ ಹಾಗೂ ಸಂಸ್ಕೃತಿ ಎರಡನ್ನೂ ಉಳಿಸಬೇಕಿದೆ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಪ್ರಪಂಚಾದ್ಯಂತ ಪ್ರಸಿದ್ಧಿ ಪಡೆದಿರುವ ಯೋಗ ಮೈಸೂರಿನದ್ದೇ ಕೊಡುಗೆ. ಆಗಿನ ಕಾಲದಲ್ಲಿ ರಾಮಾನುಜಾಚಾರ್ಯರಿಗೆ ಆಶ್ರಯ ಕೊಟ್ಟ ಊರು ನಮ್ಮ ಮೈಸೂರು. ಇಂತಹ ಜಾಗದಲ್ಲಿ ಕಲೆ ಹಾಗೂ ಸಂಸ್ಕೃತಿಯ ಪೋಷಣೆ ಹೆಚ್ಚಾಗಬೇಕು ಎಂದರು.
ಮಾಜಿ ‘ರಾ’ ಆಫೀಸರ್ ರವಿ ಜೋಷಿ, ಹಿರಿಯ ತಾಳವಾದಕ ವಿದ್ವಾನ್ ಅನೂರ್ ಅನಂತಕೃಷ್ಣಶರ್ಮ, ಜೆಸಿಎಸಿಯ ಅಧ್ಯಕ್ಷ ಜಗನ್ನಾಥ ಶೆಣೈ, ಕಾರ್ಯಕ್ರಮದ ಸಂಯೋಜಕರಾದ ವಿ.ಮಾನಸ ನಯನ, ಡಾ.ಕೃಪಾ ಫಡ್ಕೆ, ವಿ.ಸಾಯಿ ಶಿವ್, ಡಾ.ರಮಾ ವಿ.ಬೆಣ್ಣೂರ್ ಇನ್ನಿತರರಿದ್ದರು. ಬಳಿಕ ವಿದ್ವಾನ್ ಅನೂರ್ ಅನಂತಕೃಷ್ಣಶರ್ಮ ಮತ್ತು ತಂಡದವರಿಂದ ಲಯ ಲಾವಣ್ಯ ಸಂಗೀತ ಕಾರ್ಯಕ್ರಮ ನಡೆಯಿತು.