ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಕಂಪು ಕಾರ್ಯಕ್ರಮವನ್ನು ಮೈಸೂರು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಉದ್ಘಾಟಿಸಿದರು. ಪ್ರಭುಸ್ವಾಮಿ ಸಿ. ಮಳಿಮಠ, . ನಿರಂಜನಮೂರ್ತಿ, ಡಾ. ರೇಚಣ್ಣ, ಆರ್.ಎಸ್. ಕುಮಾರ್, ಹಿರಣ್ಮಯೀ ಶ್ರೀನಿಧಿ ಹಾಗೂ ಇತರರು ಇದ್ದರು. 
ಮೈಸೂರು

ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ‘ಕನ್ನಡ ಕಂಪು’

ಮೈಸೂರು: ಕನ್ನಡ ಭಾಷೆ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ಮೈಸೂರು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅಭಿಪ್ರಾಯಪಟ್ಟರು.
ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಕಂಪು -2026’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎರಡು ಸಾವಿರ ವರ್ಷಗಳ ಭವ್ಯ ಪರಂಪರೆ ಹೊಂದಿರುವ ಕನ್ನಡ ಭಾಷೆ ನಮ್ಮ ಜೀವನದ ಎಲ್ಲ ಮಜಲುಗಳಲ್ಲಿ ಹಾಸುಹೊಕ್ಕಾಗಿದೆ. ನಮ್ಮ ಭಾಷೆ ಸುಂದರ ಲಿಪಿ ಹೊಂದಿದ್ದು, ಮಹಾಕವಿ ಪಂಪನಿಂದ ಇಂದಿನ ಆಧುನಿಕ ಕವಿಗಳವರೆಗೆ ವೈವಿಧ್ಯಮಯವಾದ ಸಾಹಿತ್ಯ ಪ್ರಕಾರಗಳು ರಚಿತಗೊಂಡಿರುವ ಸಂಪದ್ಬರಿತ ಭಾಷೆಯಾಗಿದೆ ಎಂದರು.
ಕನ್ನಡಮ್ಮನ ಮಡಿಲು ತಾಯಿಯ ಮಡಿಲಂತೆ ವಾತ್ಸಲ್ಯ ಪೂರಿತವಾದದ್ದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳುವು ದರ ಜತೆಗೆ ಸೃಜನಶೀಲತೆ ಬಳಸಿಕೊಂಡು ಪರಂಪರೆಯನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ತಿಳಿಸಿದರು.
ಮೈಸೂರು ಆಕಾಶವಾಣಿಯ ವಿಶ್ರಾಂತ ಹಿರಿಯ ಉದ್ಘೋಷಕ ಪ್ರಭುಸ್ವಾಮಿ ಸಿ. ಮಳಿಮಠ ಮಾತನಾಡಿ, ನಮ್ಮ ಕನ್ನಡ ಭಾಷೆಯಲ್ಲಿ ಗಾಂಭೀರ್ಯತೆ ಮತ್ತು ಚೈತನ್ಯ ಶಕ್ತಿ ಅಡಗಿದೆ. 12ನೇ ಶತಮಾನದ ಶರಣರು ಹಾಗೂ ದಾಸರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆ ನೀಡಿದರು ಎಂದು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಬೆಳವಣಿಗೆಯನ್ನು ಸಾಧಿಸಿದೆ. ಕನ್ನಡ ತನ್ನದೇ ಆದ ಪ್ರಾದೇಶಿಕ ಭಾಷಾ ವೈಶಿಷ್ಟೃತೆಯನ್ನು ಹೊಂದಿದ ಅಂತಃಸತ್ವವುಳ್ಳ ಭಾಷೆ ಎನಿಸಿದೆ. ವಿದ್ಯಾರ್ಥಿಗಳು ಜ್ಞಾನದ ಹಸಿವು ನೀಗಿಸಿಕೊಳ್ಳುವುದರ ಮೂಲಕ ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ. ನಿರಂಜನಮೂರ್ತಿ ಮಾತನಾಡಿ, ಪ್ರಾಚೀನ ಪರಂಪರೆ ಹೊಂದಿರುವ ಕನ್ನಡ ಭಾಷೆಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ಅನ್ನು ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಕನ್ನಡ ಭಾಷೆಯನ್ನು ಕಟ್ಟುವಲ್ಲಿ ಶ್ರಮಿಸಿದರು ಎಂದು ಸ್ಮರಿಸಿದರು.
ವೇದಿಕೆಯಲ್ಲಿ ಪ್ರಾಚಾರ್ಯ ಡಾ. ರೇಚಣ್ಣ, ಕನ್ನಡ ವಿಭಾಗದ ಮುಖ್ಯಸ್ಥ ಆರ್.ಎಸ್. ಕುಮಾರ್, ಸಂಗೀತ ಸಂಯೋಜಕಿ ಹಿರಣ್ಮಯೀ ಶ್ರೀನಿಧಿ ಹಾಗೂ ಇತರರು ಇದ್ದರು.