ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘದ 2026ನೇ ಸಾಲಿನ ಕ್ಯಾಲೆಂಡರ್ ಅನ್ನು ಗಣ್ಯರು ಬಿಡುಗಡೆಗೊಳಿಸಿದರು. ಡಾ.ರಾಮೇಗೌಡ(ರಾಗೌ), ಮಹೇಂದ್ರ ಸಾಲಿಯನ್, ಎಸ್. ನಾಗರಾಜು,ಸಿ.ಟಿ.ಜಯಕುಮಾರ್ ಇನ್ನಿತರರಿದ್ದರು 
ಮೈಸೂರು

ಚಾಲಕರು, ಕಾರ್ಮಿಕರಿಂದ ಕನ್ನಡ ಉಳಿದಿದೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಶ್ರಮಜೀವಿಗಳೇ ಕನ್ನಡ ಭಾಷೆಯ ಸಂಪರ್ಕ ರಾಯಭಾರಿಗಳು
  • ಕನ್ನಡ ಭಾಷೆಯ ಬಗ್ಗೆ ಐತಿಹಾಸಿಕ ಪ್ರಜ್ಞೆ ಇರಬೇಕು
  • ಭಾಷೆ, ಆಚಾರ- ವಿಚಾರದಲ್ಲಿ ವಿಷಯದಲ್ಲಿ ಯಾವುದೇ ರಾಜಿ ಬೇಡ
ಮೈಸೂರು: ರಾಜ್ಯದಲ್ಲಿ ರೈತರು, ಕಾರ್ಮಿಕರು, ಆಟೋರಿಕ್ಷಾ ಹಾಗೂ ಪ್ರವಾಸಿ ವಾಹನ ಚಾಲಕರಿಂದ ಕನ್ನಡ ಭಾಷೆ ಉಳಿದಿದೆ ಎಂದು ಸಾಹಿತಿ ಡಾ.ರಾಮೇಗೌಡ(ರಾಗೌ) ಅಭಿಪ್ರಾಯಪಟ್ಟರು. 
ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರು ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘ ಮತ್ತು ಪ್ರವಾಸಿ ವಾಹನ ಚಾಲಕರ ಸಹಕಾರ ಸಂಘದ ಸಹಯೋಗದಲ್ಲಿ ವಿಜಯನಗರ ಸಾಹಿತ್ಯ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊರ ರಾಜ್ಯ ಹಾಗೂ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ಕನ್ನಡನಾಡಿನ ಪ್ರವಾಸಿತಾಣಗಳ ಬಗ್ಗೆ ಪ್ರವಾಸಿ ವಾಹನ ಚಾಲಕರು ಮಾಹಿತಿ ನೀಡುತ್ತಾರೆ.
 ಕನ್ನಡ ಭಾಷೆಯ ಬಗ್ಗೆಯೂ ತಿಳಿಸಿಕೊಡುತ್ತಾರೆ. ಕನ್ನಡ ಕಟ್ಟುವ ಕೆಲಸದಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ ಎಂದರು.
ಈ ಶ್ರಮಜೀವಿಗಳೇ ಕನ್ನಡ ಭಾಷೆಯ ಸಂಪರ್ಕ ರಾಯಭಾರಿಗಳು. ಇವರಂತೆ ಎಲ್ಲರೂ ಕನ್ನಡ ಬಳಸಿದರೆ ಭಾಷೆ ತಾನಾಗಿಯೇ ಬೆಳೆಯುತ್ತದೆ ಎಂದರು. 
ಈಗ ಹೋಟೆಲ್‌ಗಳಲ್ಲಿ ಕನ್ನಡ ಸಪ್ಲೈಯರ್‌ಗಳು ದೊರೆಯುತ್ತಿಲ್ಲ. ಇದಕ್ಕೆ ಕಾರಣ ಏನು ಅರ್ಥ ಮಾಡಿಕೊಳ್ಳಬೇಕು ಎಂದರು. 
ದೇಶದಲ್ಲಿ ತೀವ್ರ ಹೋರಾಟದ ನಂತರ ಭಾಷಾವಾರು ಪ್ರಾಂತ್ಯಗಳ ರಚನೆಯಾಯಿತು. ಆದರೆ, ಕಾಸರಗೋಡು ಸೇರಿದಂತೆ ಕೆಲವೊಂದು ಪ್ರಮುಖ ಸ್ಥಳಗಳು ನಮ್ಮ ರಾಜ್ಯದ ವ್ಯಾಪ್ತಿಗೆ ಬಂದಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ನಮ್ಮನ್ನು ಆಳುತ್ತಿದ್ದ ಆಂಗ್ಲರು ವ್ಯವಹಾರಿಕ ಕಾರಣಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಹೇರಿದರು ಎಂದರು. 
ಬೇರೆ ಬೇರೆ ಭಾಷೆಗಳಿಂದ ಪದಗಳನ್ನು ಸ್ವೀಕರಿಸಿ, ಇಂಗ್ಲಿಷ್ ಬೆಳೆಸಿದರು. ಇದೇ ರೀತಿ ಪ್ರಾದೇಶಿಕ ಭಾಷೆಗಳು ಸಹ ಗಟ್ಟಿತನವನ್ನು, ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಕನ್ನಡ ಭಾಷೆಯ ಬಗ್ಗೆ ಐತಿಹಾಸಿಕ ಪ್ರಜ್ಞೆ ಇರಬೇಕು ಎಂದರು.
ಬಿಐಟಿ ನಿರ್ದೇಶಕ ಮಹೇಂದ್ರ ಸಾಲಿಯನ್ ಮಾತನಾಡಿ, ಹೊರಗಿನಿಂದ ಬಂದವರು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಆಗ್ರಹಿಸಿದರು. 
ಟ್ರಾವೆಲ್ ಪಾರ್ಕ್ ಮಾಲೀಕ ಸಿ.ಟಿ.ಜಯಕುಮಾರ್ ಮಾತನಾಡಿ, ಮೈಸೂರು ರಾಜಮಹಾರಾಜರ ಕೊಡುಗೆಯಿಂದಾಗಿ ಪ್ರವಾಸೋದ್ಯಮ ಹೆಸರುವಾಸಿಯಾಗಿದ್ದು, ನಮ್ಮ ಜೀವನಕ್ಕೆ ದಾರಿಯಾಗಿದೆ ಎಂದರು. 
ಪ್ರವಾಸಿ ಗೈಡ್‌ಗಳ ಸಂಘದ ಅಧ್ಯಕ್ಷ ಅಶೋಕ್  ಮಾತನಾಡಿ, ನಮ್ಮ ಭಾಷೆ, ಆಚಾರ- ವಿಚಾರದಲ್ಲಿ ವಿಷಯದಲ್ಲಿ ಯಾವುದೇ ರಾಜಿ ಬೇಡ ಎಂದರು.
ಸಂಘದ ಅಧ್ಯಕ್ಷ ಎಸ್. ನಾಗರಾಜು ಮಾತನಾಡಿ, ಆಟೋರಿಕ್ಷಾಗಳ ದರ ಪರಿಷ್ಕರಣೆಯಾಗಿದೆ. ಅದೇ ರೀತಿ ಟ್ಯಾಕ್ಸಿಗಳ ದರ ಕೂಡ ಪರಿಷ್ಕರಣೆಯಾಗಬೇಕು. ಚಾಲಕರಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಬಾರಿಯ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ವಿ.ಎಂ.ಪ್ರಭುಸ್ವಾಮಿ, ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿರುವ ಚಾಲಕರಾದ ರಂಗಸ್ವಾಮಿ, ಲಕ್ಷ್ಮೀಕಾಂತರಾವ್ ಹಾಗೂ ಮೊಹಮದ್ ಸಾದಿಕ್ ಅವರನ್ನು ಸನ್ಮಾನಿಸಲಾಯಿತು.
ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಎಸ್. ಮಂಜುನಾಥ್, ಡೇವಿಡ್, ಸಂಘದ ಉಪಾಧ್ಯಕ್ಷ ಆರ್.ಪ್ರಭಾಕರ್, ಕಾರ್ಯದರ್ಶಿ ಕೆ.ಟಿ. ದಿವಾಕರ್, ಖಜಾಂಚಿ ಪುಟ್ಟಬುದ್ದಿ, ಉಪ ಕಾರ್ಯದರ್ಶಿ ಮಹಮದ್ ಸೌಲತ್ ಅಲಿ, ನಿರ್ದೇಶಕರಾದ ಆರ್.ನಾಗರಾಜ್, ಬಾಲಾಜಿ ಸಿಂಗ್, ರಂಗಸ್ವಾಮಿ, ಚಂದ್ರಶೇಖರ ಸ್ವಾಮಿ, ಎಸ್.ಮಂಜುನಾಥ್, ಯು.ಮಂಜುನಾಥ್, ಸಂತೋಷ್. ಜಿ.ಕೆ.ಶ್ರೀನಿವಾಸ್, ಶಿವು ಇನ್ನಿತರರಿದ್ದರು