ಕಂಜನ್ ಆನೆ 
ಮೈಸೂರು

ಮೈಸೂರು ದಸರಾದಿಂದಲೇ ಹೊರಬಿದ್ದ ಕಂಜನ್ ಆನೆ

ಪ್ರಮುಖ ಮುಖ್ಯಾಂಶಗಳು

  • ‘ಕಂಜನ್’ ಶಿಸ್ತು, ನಂಬಿಗಸ್ತ ಆನೆ
  • ಮೈಸೂರು ದಸರೆಗೆ ಈ ಗಜಕ್ಕೆ ನಿರ್ಬಂಧ
  • ದುಬಾರೆ ಸಾಕಾನೆ ಶಿಬಿರದಲ್ಲಿ ನಡೆದ ಘಟನೆಯಿಂದ ಈ ನಿರ್ಧಾರ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ದಾಳಿಕೋರ, ಮುಂಗೋಪಿ ಎಂಬ ಅಪಖ್ಯಾತಿಗೆ ಪಾತ್ರವಾಗಿರುವ ದಸರಾ ಆನೆ ‘ಕಂಜನ್’ ವಾಸ್ತವವಾಗಿ ಶಿಸ್ತು, ನಂಬಿಗಸ್ತ ಆನೆ. ಆದರೀಗ ಇತ್ತೀಚಿಗೆ ನಡೆದ ಅಹಿತಕರ ಘಟನೆಯಿಂದಾಗಿ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದಿಂದಲೇ ಇದು ಹೊರಬಿದ್ದಿದೆ...!
ಕಳೆದ ಮೂರು ವರ್ಷದಿಂದ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಕಂಜನ್ ಮುಂದಿನ ಸಲದ ದಸರೆಗೆ ನಿರ್ಬಂಧಿಸಲಾಗಿದೆ. 2025ರ ಅಕ್ಟೋಬರ್ 2ರಂದು ನಡೆದ ವಿಜಯದಶಮಿಯ ಮೆರವಣಿಗೆಯಲ್ಲಿ ಇದು 2ನೇ ತಂಡದ ಸಾಲಾನೆಯಾಗಿ ರಾಜಬೀದಿಯಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿತ್ತು. ಶಾಂತ, ಸೌಮ್ಯ ಸ್ವಭಾವದ ಈ ಆನೆಗೆ ಸಾಂಸ್ಕೃತಿಕ ನಗರಿಯ ಬಾಗಿಲು ಬಂದ್ ಆಗಿರುವುದು ವಿಪರ್ಯಾಸ.
ಅವಕೃಪೆಗೆ ಪಾತ್ರವಾದ ಕಂಜನ್: ಕೊಡಗಿನ ದುಬಾರೆ ಸಾಕಾನೆ ಶಿಬಿರದಲ್ಲಿ ಮೇ 18ರಂದು ‘ಮಾರ್ತಾಂಡ’ ಆನೆ ಮೇಲೆ ‘ಕಂಜನ್’ ದಾಳಿ ಮಾಡಿತ್ತು. ಉಭಯ ಗಜಗಳ ನಡುವೆ ನಡೆದ ಕಾಳಗದ ರಭಸಕ್ಕೆ ಸಿಲುಕಿ ಚೆನ್ನೈ ಮೂಲದ ಪ್ರವಾಸಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರು. ಮರು ದಿನ ದಾಳಿಯಿಂದ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಹ ಕೊನೆಯುಸಿರೆಳೆದಿತ್ತು. ಈ ಘಟನೆಗೆ ಕಾರಣ ಎಂಬ ಆರೋಪವನ್ನು ಹೊತ್ತುಕೊಂಡಿರುವ ‘ಕಂಜನ್’ ಆನೆ ಇದೀಗ ಅವಕೃಪೆಗೆ ಪಾತ್ರವಾಗಿದೆ.
ಕಂಜನ್ ಆನೆಯ ಆಕ್ರಮಣಕಾರಿ ನಡವಳಿಕೆಯಿಂದಾಗಿ ದಸರೆಗೆ ನಿರ್ಬಂಧಿಸುವ ಮಹತ್ವದ ಕ್ರಮ ಕೈಗೊಳ್ಳಲಾಗಿದ್ದು, ಈ ಆನೆ ಪದೇ ಪದೆ ತೋರುತ್ತಿರುವ ದಾಳಿಕೋರತನ, ಮೊಂಡಾಟದ ನಡವಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಅರಣ್ಯ ಇಲಾಖೆ ಈ ತೀರ್ಮಾನಕ್ಕೆ ಬಂದಿದೆ. ಹೀಗಾಗಿ, ಮುಂದಿನ ದಸರಾದಲ್ಲಿ ಕಂಜನ್ ಆನೆ ಸಾರ್ವಜನಿಕರಿಗೆ ನೋಡಲು ಸಿಗುವುದಿಲ್ಲ.

ಸೌಮ್ಯ ಸ್ವಭಾವದ ಆನೆ:

ಬಲಾಢ್ಯ ಶರೀರದ ಕಂಜನ್ ಆರೋಗ್ಯವಂತ ಹಾಗೂ ಶಿಸ್ತುಪೂರ್ಣ ನಡತೆಯೊಂದಿಗೆ ಅರಣ್ಯ ಇಲಾಖೆಯ ನಂಬಿಗಸ್ತ ಆನೆಯಾಗಿ ಪರಿಗಣಿಸಲಾಗಿತ್ತು. ಮಾವುತ ಜೆ.ಡಿ.ವಿಜಯ್, ಕಾವಾಡಿ ಕಿರಣ್ ಅವರ ಆಜ್ಞೆಯನ್ನು ಯಥಾವತ್ ಪಾಲನೆ ಮಾಡುವ ಮೂಲಕ ಇವರ ಒಲವು ಸಹ ಗಳಿಸಿಕೊಂಡಿತ್ತು.  
2014ರಲ್ಲಿ ಹಾಸನ ಜಿಲ್ಲೆಯ ಯಳಸೂರು ಬಳಿ ಸೆರೆ ಹಿಡಿದಿದ್ದ ಇದನ್ನು ತ್ವರಿತವಾಗಿ ಪಳಗಿಸಿ ತರಬೇತಿ ಕೊಡಲಾಗಿತ್ತು. 2013ರಿಂದ ಸತತವಾಗಿ ಮೂರು ಸಲ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸಿ ಎಲ್ಲರ ಗಮನಸೆಳೆದಿತ್ತು. 
ತನ್ನ ನಿಖರ ನಡೆ, ನಡವಳಿಯಿಂದ ಜಂಬೂಸವಾರಿಗೆ ಮತ್ತಷ್ಟು ಮೆರುಗು ಕೊಟ್ಟಿತ್ತು. ದಸರಾ ಹೊರತಾಗಿ, ಆನೆ ಶಿಬಿರದಲ್ಲೂ ಶಾಂತ ನಡತೆ, ಅಜ್ಞಾಪಾಲನೆಯಿಂದ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿತ್ತು. ಇಂತಹ ನಡತೆಯಿಂದ ಎಲ್ಲರ ಪಾಲಿಗೆ ಅಕ್ಕರೆಯ ಕಂಜನ್ ಇದೀಗ ವಿಲನ್ ಆಗಿ ಪರಿವರ್ತನೆಗೊಂಡಿರುವುದು ಸೋಜಿಗದ ಸಂಗತಿ. 

2024ರ ದಸರಾದಲ್ಲೂ ಗದ್ದಲ:

ಸದಾ ಶಾಂತವಾಗಿರುವ ಕಂಜನ್ ಆನೆ ಆಗೊಮ್ಮೆ, ಈಗೊಮ್ಮೆ ಉಗ್ರ ನಡವಳಿಕೆಯಿಂದ ಅಚ್ಚರಿ ಮೂಡಿಸಿದೆ. ಕೆಲ ಹೊತ್ತು ಮಾತ್ರ ವ್ಯಗ್ರವಾಗುವ ಇದರ ಮನಸ್ಥಿತಿ ಅರ್ಥೈಸಿಕೊಳ್ಳುವುದೇ ಸವಾಲಾಗಿ ಪರಿಗಣಿಸಿದೆ. ಇಂತಹ ಕೆಲ ಅಸಹಜ ವರ್ತನೆಗಳಿಗೂ ಸಿಗುತ್ತವೆ. 
2024ರ ಮೈಸೂರು ದಸರಾ ಮಹೋತ್ಸವದ ತಾಲೀಮಿನ ಅವಧಿಯಲ್ಲಿ ಕಂಜನ್ ಭಾರಿ ಗದ್ದಲ ಸೃಷ್ಟಿಸಿತ್ತು.
ಮೈಸೂರು ಅರಮನೆ ಆವರಣದಲ್ಲೇ ಮತ್ತೊಂದು ದಸರಾ ಆನೆ ಧನಂಜಯ ಮೇಲೆ ಇದು ಅಟ್ಟಿಸಿಕೊಂಡು ಹೋಗಿತ್ತು. ಈ ಘಟನೆ ಪ್ರವಾಸಿಗರು ಹಾಗೂ ಅಧಿಕಾರಿಗಳಲ್ಲಿ ತೀವ್ರ ಆತಂಕ ಮತ್ತು ಭೀತಿಯ ವಾತಾವರಣ ನಿರ್ಮಿಸಿತ್ತು. ಘಟನೆಯ ಬಳಿಕ ಎಚ್ಚೆತ್ತುಕೊಂಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಕಂಜನ್ ಆನೆ ಮೇಲೆ ಒಂದು ಕಣ್ಣು ಇಟ್ಟಿದ್ದರು. ಆದರೂ 2025ರ ದಸರಾಕ್ಕೆ ಇದನ್ನು ಆಯ್ಕೆ ಮಾಡಲಾಗಿತ್ತು. ಇದು ತನ್ನ ಮೇಲಿನ ನಂಬಿಕೆಯನ್ನು ಉಳಿಸಿಕೊಂಡು ದಸರಾವನ್ನು ಯಶಸ್ಸಿಯಾಗಿ ಪೂರೈಸಿತ್ತು.

ದಸರಾದಲ್ಲಿಲ್ಲ, ಕಾರ್ಯಾಚರಣೆಯಲ್ಲಿ ಭಾಗಿ: 

ಆಕರ್ಷಕ ದಂತ ಹೊಂದಿರುವ ಕಂಜನ್ 27 ವರ್ಷದ ಉತ್ಸಾಹಿ ಆನೆ. ಕೊಡಗು ಜಿಲ್ಲೆ ದುಬಾರೆ ಆನೆ ಶಿಬಿರದ ನಿವಾಸಿ. 2.89 ಮೀಟರ್ ಎತ್ತರದ ಶರೀರ ಹೊಂದಿರುವ ಇದು 3.05 ಮೀಟರ್‌ರಷ್ಟು ಉದ್ದವಿದೆ. ಅಂದಾಜು 3900 ಕೆಜಿ ತೂಕ ಹೊಂದಿದೆ. 
ದೈಹಿಕವಾಗಿ ಬಲಿಷ್ಠವಾಗಿ ಇದು ಇತರ ಆನೆಗಳೊಂದಿಗೆ ಕಾಳಗಕ್ಕೆ ಇಳಿದು ಅರಣ್ಯ ಇಲಾಖೆ ಅಧಿಕಾರಿಗಳ ವಿಶ್ವಾಸ, ನಂಬಿಕೆಯನ್ನು ಇದೀಗ ಕಳೆದುಕೊಂಡಿದೆ. ಕಾಡಾನೆಗಳ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಇದು ಸದಾ ಮುಂಚೂಣಿಯಲ್ಲಿ ನಿಲ್ಲುವ ಆನೆ. ದಸರಾದಿಂದ ಹೊರಬಿದ್ದರೂ ಇಂತಹ ಕಾರ್ಯಾಚರಣೆಯಲ್ಲಿ ಇದರ ಗುರುತರ ಕಾರ್ಯನಿರ್ವಹಣೆ ಮುಂದುವರಿಯಲಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ದಸರಾ ಆನೆಗಳೊಂದಿಗೆ ಉತ್ತಮ ಒಡನಾಟ: 

ಕಳೆದ ದಸರಾದಲ್ಲಿ ‘ಕಂಜನ್’ ಉಳಿದ ಆನೆಗಳೊಂದಿಗೆ ಉತ್ತಮ ಸಲಿಗೆಯೊಂದಿಗೆ ಲವಲವಿಕೆಯಿಂದಲೇ ಇತ್ತು. ಜಂಬೂಸವಾರಿ ಮೆರವಣಿಗೆಯಲ್ಲಿ ಮುಂಚೂಣಿಯಲ್ಲಿದ್ದ ನಿಶಾನೆ ಆನೆ ಧನಂಜಯ, ನೌಪತ್ ಆನೆಯಾಗಿ ಗೋಪಿಯನ್ನು ಸಾಲಾನೆಗಳಾಗಿ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ,  ಭೀಮ, ಏಕಲವ್ಯ, ಪ್ರಶಾಂತ, ಸುಗ್ರೀವ, ಹೇಮಾವತಿಯೊಂದಿಗೆ ಕಂಜನ್ ಸಹ ಹೆಜ್ಜೆ ಹಾಕಿತ್ತು. 
ಅಂಬಾರಿ ಹೊತ್ತ ಅಭಿಮನ್ಯು ಆನೆಯೊಂದಿಗೆ ಶಾಂತರೀತಿಯಲ್ಲೇ ವರ್ತಿಸಿತ್ತು. ಕುಮ್ಕಿ ಆನೆಗಳಾಗಿ ಕಾವೇರಿ, ರೂಪಾಳೊಂದಿಗೆ ಒಲವು ಹೊಂದಿತ್ತು. ತಾಲೀಮು, ವಿವಿಧ ಚಟುವಟಿಕೆಗಳಲ್ಲೂ ಸಕ್ರಿಯವಾಗಿತ್ತು. ಆದರೀಗ ಮುಂದಿನ ದಸರೆಗೆ ಇದು ಈ ಎಲ್ಲ ಆನೆಗಳೊಂದಿಗೆ ಸೇರುವುದಿಲ್ಲ. ಇಡೀ ದಸರಾ ಆನೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಇದನ್ನು ಪರಿಗಣಿಸುವುದೇ ಇಲ್ಲ. ಹೀಗಾಗಿ, ಆನೆ ಶಿಬಿರದಲ್ಲೇ ಇರಲಿದೆ ಎಂದು ಮೂಲಗಳು ತಿಳಿಸಿವೆ.
"

ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆನೆ, ಪ್ರವಾಸಿಗರ ಸಾವಿಗೆ ಕಾರಣವಾಗಿರುವ ಕಂಜನ್ ಆನೆಯನ್ನು ಮುಂಬರುವ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮದಿಂದ ಕೈಬಿಡಲಾಗಿದೆ.

— ಈಶ್ವರ್ ಖಂಡ್ರೆ, ಅರಣ್ಯ ಸಚಿವ