ಮೈಸೂರಿನ ಕನಕಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಿದ್ದಾರ್ಥ ಬಡಾವಣೆಯ ಕನಕ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಐಎಎಸ್ ಇನ್‌ಸೈಟ್ಸ್ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ಉದ್ಘಾಟಿಸಿದರು. ಬಿ. ಸುಬ್ರಮಣ್ಯ, ಟಿ.ಬಿ. ಬಳಗಾವಿ, ಪಿ.ಎನ್. ಕೃಷ್ಣಮೂರ್ತಿ, ಎಂ. ಪ್ರಕಾಶ್ ಹಾಗೂ ಇತರರು ಇದ್ದರು.
ಮೈಸೂರು: ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣುವ ಮೂಲಕ ಆ ಕನಸುಗಳನ್ನು ಸಾಕಾರಗೊಳಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಐಎಎಸ್ ಇನ್‌ಸೈಟ್ಸ್ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ಕರೆ ನೀಡಿದರು.
ಕನಕಶ್ರೀ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಿದ್ದಾರ್ಥ ಬಡಾವಣೆಯ ಕನಕ ಸಮುದಾಯ ಭವನದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚಿನ ಅಂಕ ಪಡೆದು ತೇರ್ಗಡೆ ಹೊಂದಿದ ಕುರುಬ, ಹಾಲುಮತ, ಕಾಡು ಕುರುಬ, ಜೇನು ಕುರುಬ ಸಮುದಾಯದ ವಿದ್ಯಾರ್ಥಿಗಳಿಗೆ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣುವುದಿಲ್ಲ. ಈ ಕಾರಣಕ್ಕಾಗಿ ದೊಡ್ಡ ಸಾಧನೆ ತೋರಲು ಸಾಧ್ಯವಾ ಗುತ್ತಿಲ್ಲ. ಸಣ್ಣದೊಂದು ಹುದ್ದೆ ಸಿಕ್ಕರೆ ಅದರಲ್ಲಿಯೇ ನಾವು ಸಂತೃಪ್ತಿಯನ್ನು ಕಾಣಲು ಬಯಸುತ್ತೇವೆ. ಕಾನೂನು ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗುವ ಕನಸು ಕಾಣಬೇಕು. ಅದೇ ರೀತಿ ಹಿಂದುಳಿದ ವರ್ಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದೊಡ್ಡ ಕನಸುಗಳನ್ನು ಕಾಣುವ ವಿಚಾರದಲ್ಲೂ ನಾವು ಭಯ ಪಡುತ್ತೇವೆ. ಈ ಭಯದಿಂದ ನಮ್ಮ ಆಯ್ಕೆಗಳು ಕಡಿಮೆಯಾಗುತ್ತವೆ. ವಿದ್ಯಾರ್ಥಿಗಳು ಮೊದಲು ಕಂಫರ್ಟ್ ರೆನ್‌ನಿಂದ ಹೊರ ಬಂದು ದೊಡ್ಡ ಸಾಧನೆಯ ಕಡೆ ಮುಖ ಮಾಡಬೇಕು. ಕೆಲವರು ಶಿಕ್ಷಕರ ಹುದ್ದೆ ಪಡೆಯುವುದನ್ನೇ ದೊಡ್ಡ ಸಾಧನೆ ಅಂದುಕೊಂಡು ಅದರಲ್ಲಿಯೇ ಸಂತೃಪ್ತಿ ಪಡುತ್ತಾರೆ. ಅದರಾಚೆಗೆ ಏನಾದರು ಸಾಧನೆ ಮಾಡುವ ಎಂಬ ತುಡಿತ ತೋರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಮಣ್ಯ, ಕನಕಶ್ರೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಬಿ. ಬಳಗಾವಿ, ಕಾರ್ಯದರ್ಶಿ ಪಿ.ಎನ್. ಕೃಷ್ಣಮೂರ್ತಿ, ಖಜಾಂಚಿ ಎಂ. ಪ್ರಕಾಶ್ ಟ್ರಸ್ಟಿಗಳಾದ ಮುನಿಚೌಡಪ್ಪ, ಕೆ. ಜಯರಾಮು, ಎಂ. ಮಹದೇವ, ಸಿ. ಬಸವರಾಜು, ಪಿ. ರಂಗಧಾಮಯ್ಯ, ಎಚ್.ಆರ್. ಸಂಗಮದ್ ಹಾಗೂ ಇತರರು ಇದ್ದರು.