ಕಂಪಲಾಪುರದ ಶ್ರೀನಾಗ ಅನುದಾನಿತ ಶಾಲೆಯಲ್ಲಿ ನಡೆದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ , ನಳಿನಾಕ್ಷಿ, ಸುದರ್ಶನ್, ಚಂದ್ರಶೇಖರ್, ಕೃಷ್ಣಕುಮಾರ್, ರವಿ, ಸುರೇಂದ್ರ, ನಾಗೇಂದ್ರ ಇದ್ದರು. 
ಮೈಸೂರು

ಕಾಲಕ್ಕೆ ತಕ್ಕಂತೆ ಬೋಧನಾ ಶೈಲಿ ಬದಲಾಗಲಿ

ಕಂಪಲಾಪುರ : ಯಾವುದೇ ಶಾಲೆಗಳಲ್ಲಿ ಅಲ್ಲಿನ ಶೈಕ್ಷಣಿಕ ಚಟುವಟಿಕೆಗಳು ಆಯಾ ಶಿಕ್ಷಕರ ಕೌಶಲದ ಆಧಾರದ ಮೇಲೆ ನಿರೂಪಗೊಳ್ಳುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ ಹೇಳಿದರು.
ಶ್ರೀ ನಾಗ ಅನುದಾನಿತ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಎಫ್‌ಎಲ್‌ಎನ್ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಿನ ಕಾಲಮಾನಕ್ಕೆ ತಕ್ಕಂತೆ ಶಿಕ್ಷಕರು ತಮ್ಮ ಬೋಧನಾ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ಶಾಲೆಗಳಲ್ಲಿ ಯಾವುದೇ ಕಾರ್ಯಕ್ರಮ ಮಾಡಬೇಕಾದರೂ ಶಿಕ್ಷಕರಿಗೆ ತಮ್ಮದೇ ಆದ ಜವಾಬ್ದಾರಿ ಇರುತ್ತೆ. ಆ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿ ಜತೆಗೆ ಶಾಲೆಯು ಉತ್ತಮವಾಗಿರುತ್ತದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಶಿಕ್ಷಕರು ತಮ್ಮಲ್ಲಿರುವ ವಿದ್ವತ್ತನ್ನು ಮಕ್ಕಳಿಗೆ ಧಾರೆ ಎರೆದು ಇಂಗ್ಲಿಷ್ ಕಲಿಕೆಯನ್ನು ಹೆಚ್ಚಿಸಿ, ಮಾಹಿತಿ ತಂತ್ರಜ್ಞಾನವನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.
ಮೈಸೂರು ಡಯೆಟ್‌ನ ಉಪನ್ಯಾಸಕಿ ನಳಿನಾಕ್ಷಿ ಮಾತನಾಡಿ, ಕಲಿಕಾ ಹಬ್ಬದ ಮುಖ್ಯ ಉದ್ದೇಶ ಅಕ್ಷರ ಜ್ಞಾನ, ಸ್ಪಷ್ಟವಾಗಿ ಓದುವುದು ಶುದ್ಧವಾಗಿ ಬರೆಯುವುದು ಆಗಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದ್ದು ಅದಕ್ಕೆ ಪಾಲಕರ ಸಹಕಾರ ಬಹಳ ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಶಿಕ್ಷಕರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಿಆರ್‌ಪಿ ಸುದರ್ಶನ್, ಮುಖ್ಯ ಶಿಕ್ಷಕರಾದ ಚಂದ್ರಶೇಖರ್, ಕೃಷ್ಣಕುಮಾರ್, ರವಿ, ಸುರೇಂದ್ರ, ನಾಗೇಂದ್ರ, ದಯಾನಂದ, ಮಹದೇವ್, ರಿಯಾಜ್, ಶಿಕ್ಷಕರ ಸಂಘದ ಸದಸ್ಯ ಪ್ರಸನ್ನ, ಖಜಾಂಚಿ ನಿಲುಫರ್, ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವಕುಮಾರ್ ಹಾಜರಿದ್ದರು.